ಸಾರಾಂಶ
-ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ದಸಂಸ ಜಿಪಂ ಸಿಇಒ ಲವೀಶ್ ಒರಡಿಯಾಗೆ ಮನವಿ
-------ಕನ್ನಡಪ್ರಭ ವಾರ್ತೆ ಸುರಪುರಯಾದಗಿರಿ ಜಿಲ್ಲಾ ವ್ಯಾಪ್ತಿಯಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಕಳಪೆಯಾಗಿದ್ದು, ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮಂಗಳವಾರ ತಾಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪನವರು ಸ್ಥಾಪಿಸಿದ ಹೋರಾಟ) ಸದಸ್ಯರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಒರಡಿಯಾ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಯಾದಗಿರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲೀಕರಣ ವಿಭಾಗದವರು ಜಲ ಜೀವನ ಮಿಷನ್ (ಜೆಜೆಎಂ) ಯೋಜನೆಯಡಿ ಮನೆ-ಮನೆಗೆ ನಳ ಒದಗಿಸುವ ಯೋಜನೆಯಲ್ಲಿ ಭ್ರಷ್ಟಾಚಾರ ನಡೆಸಲಾಗಿದೆ. ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.ಜೆಜೆಎಂ ಯೋಜನೆಯಡಿ ಕೈಗೊಳ್ಳಲಾಗಿರುವ ಗ್ರಾಮೀಣ ಜನರಿಗೆ ಶಾಶ್ವತ ಶುದ್ಧ ಕುಡಿಯುವ ನೀರು ತಲುಪಿಲ್ಲ. ಕೇಂದ್ರ ಸರ್ಕಾರ 2020-21ರಿಂದ ಜಾರಿಗೆ ತಂದು ಅನುಷ್ಠಾನಗೊಳಿಸಿ 2025ರ ವರೆಗೆ ಕೆಲಸ ಮಾಡಿದರೂ ಪ್ರಯೋಜನವಾಗಿಲ್ಲ. ಗುತ್ತಿಗೆದಾರರು ಮತ್ತು ಅಧಿಕಾರಿಗಳ ಪಾಲಿಗೆ ವರವಾಗಿದೆ ಎಂದು ಆರೋಪಿಸಿದರು.
ವಿವಿಧ ಹಳ್ಳಿಗಳಲ್ಲಿ ಕೈಗೊಂಡ ಕಾಮಗಾರಿಗಳಿಗೆ 576 ಕೋಟಿ ರು.ಗಳಲ್ಲಿ 306 ಕಾಮಗಾರಿ ಕೈಗೊಂಡಿದ್ದು, 235.47 ಕೋಟಿ ರು.ಗಳು ಖರ್ಚು ಮಾಡಲಾಗಿದೆ. ದಾಖಲೆಗಳಲ್ಲಿ ಹೇಳುವಂತೆ ಕಾಮಗಾರಿಗಳ ಸ್ಥಳಗಳಿಗೆ ತಾವು ಭೇಟಿ ನೀಡಬೇಕು ಎಂದು ಆಗ್ರಹಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಸಿಇಒ ಲವೀಶ್ ಒರಡಿಯಾ, ಜೆಜೆಎಂ ಯೋಜನೆಯ ಕಾಮಗಾರಿಗಳನ್ನು ಸಮಗ್ರವಾಗಿ ತನಿಖೆ ನಡೆಸಲಾಗುವುದು. ತಪ್ಪು ಕಂಡು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿಯೇ ಪ್ರತ್ಯೇಕ ತಂಡಗಳನ್ನು ರಚಿಸಲಾಗುವುದು. ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದು ತಿಳಿಸಿದರು.ಸಂಘಟನೆಯ ಮುಖಂಡರಾದ ನಿಂಗಣ್ಣ ಗೋನಾಲ, ನಾಗರಾಜು ಓಕುಳಿ, ಸದಾಶಿವ ಬೊಮ್ಮನಹಳ್ಳಿ, ಎಚ್.ಆರ್. ಬಡಿಗೇರ, ಭೀಮಣ್ಣ ಅಡ್ಕೊಡಗಿ, ಅನಿಲ ಕಟ್ಟಿಮನಿ, ಹಣಮಂತ ದೊಡಮನಿ, ರಾಮಪ್ಪ ಕೋರೆ, ಸಾಯಬಣ್ಣ ಎಂಟಮನ ಕೆಂಭಾವಿ, ಗೋಪಾಲ ಗೋಗಿಕೇರಾ, ಮಲ್ಲಪ್ಪ ಕೋಟೆ ಸೇರಿದಂತೆ ಇತರರಿದ್ದರು.
------ಫೋಟೊ
ಸುರಪುರ ನಗರದಲ್ಲಿ ಯಾದಗಿರಿ ಜಿಲ್ಲಾ ವ್ಯಾಪ್ತಿಯಲ್ಲಿ ಜೆಜೆಎಂ ಯೋಜನೆ ಕಾಮಗಾರಿಯಲ್ಲಿ ಕಳಪೆಯಾಗಿರುವುದನ್ನು ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ದಸಂಸ ಸದಸ್ಯರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಒರಡಿಯಾ ಅವರಿಗೆ ಮನವಿ ಸಲ್ಲಿಸಿದರು.18ವೈಡಿಆರ್7