ಸಾರಾಂಶ
ಕೊಟ್ಟಂಪಲ್ಲಿ ಗ್ರಾಮದಲ್ಲಿ ಕಳೆದ ಎರಡು ಮೂರು ತಿಂಗಳ ಹಿಂದೆ ಎಲ್ಲೆಡೆ ರಸ್ತೆ ಅಥವಾ ಮನೆ ಅಂಗಳವನ್ನು ಅಗೆದು ಬಿಡಲಾಗಿದೆ. ಕೆಲವು ಕಡೆ ಪೈಪ್‌ಲೈನ್ ಹಾಕಲು ಸಿ.ಸಿ ರಸ್ತೆಗಳನ್ನು ಅಗೆದು ಸುಮಾರು ದಿನಗಳಾದರೂ ಅವುಗಳನ್ನು ಮುಚ್ಚಿಲ್ಲ.
ಕನ್ನಡಪ್ರಭ ವಾರ್ತೆ ಚೇಳೂರು
ಚೇಳೂರು ತಾಲುಕಿನ ರಾಶ್ಚೆರುವು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕೊಟ್ಟಂಪಲ್ಲಿ ಗ್ರಾಮದಲ್ಲಿ ಜಲಜೀವನ ಮಿಷನ್ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ಮಂದಗತಿಯಿಂದ ಸಾಗಿದ್ದು, ಎಲ್ಲೆಡೆ ಅಗೆದು ಬಿಡಲಾಗಿದೆ. ಇದರಿಂದ ಗ್ರಾಮಸ್ಥರಿಗೆ ಹಾಗೂ ಇದೆ ರಸ್ತೆಯಲ್ಲಿ ಪಕ್ಕದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೋಂಡಮಾರಪಲ್ಲಿ ಗ್ರಾಮಕ್ಕೆ ಹೋಗಲು ತೀವ್ರತೊಂದರೆ ಅನುಭವಿಸುವಂತಾಗಿದೆ.ಗ್ರಾಮದಲ್ಲಿ ಕಳೆದ ಎರಡು ಮೂರು ತಿಂಗಳ ಹಿಂದೆ ಎಲ್ಲೆಡೆ ರಸ್ತೆ ಅಥವಾ ಮನೆ ಅಂಗಳವನ್ನು ಅಗೆದು ಬಿಡಲಾಗಿದೆ. ಇದರಿಂದ ರಾತ್ರಿ ಸಮಯದಲ್ಲಿ ಸಾರ್ವಜನಿಕರು ಓಡಾಡಲು ತುಂಬಾ ತೊಂದರೆಯಾಗುತ್ತಿದೆ. ಗ್ರಾಮದ ಕೆಲವು ಕಡೆ ಪೈಪ್‌ಲೈನ್ ಹಾಕಲು ಸಿ.ಸಿ ರಸ್ತೆಗಳನ್ನು ಅಗೆದು ಸುಮಾರು ದಿನಗಳಾದರೂ ಅವುಗಳನ್ನು ಮುಚ್ಚದೆ ನಿರ್ಲಕ್ಷ್ಯ ವಹಿಸಲಾಗಿದೆ. ಇದರಿಂದಾಗಿ ವಾಹನ ಸವಾರರು, ವೃದ್ದರು ಹಾಗೂ ಮಕ್ಕಳು ಬಿದ್ದು ಗಾಯಮಾಡಿಕೊಂಡಿದ್ದಾರೆ ಎಂದು ಗ್ರಾಮಸ್ಥರು ದೂರುತ್ತಾರೆ.ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಅತಿ ಅವಶ್ಯಕ. ಆದರೆ ಜಲ ಜೀವನ ಮಿಷನ್ ಯೋಜನೆ ಕಳಪೆ ಕಾಮಗಾರಿ ಹಾಗೂ ಈ ಗ್ರಾಮದಲ್ಲಿ ಸುಮಾರು 70 ಮನೆಗಳಿದ್ದು ಸುಮಾರು 25 ಲಕ್ಷ ರುಪಾಯಿ ಮೀಸಲಿಡಲಾಗಿದೆ, ಅದರಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಬುದ್ದಲವಾರಪಲ್ಲಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಕರೆ ಸ್ವೀಕರಿಸದ ಗುತ್ತಿಗೆದಾರ''''''''ಗ್ರಾಮದಲ್ಲಿ ಕಾಮಗಾರಿಯ ನಿಮಿತ್ತ ತೆಗೆದ ತಗ್ಗಿನಲ್ಲಿ ಬಿದ್ದು ಹಲವರು ಗಾಯಗೊಂಡಿದ್ದಾರೆ.ಗ್ರಾಮದಲ್ಲಿ ಹಾಗೂ ವಿವಿದ ಕಡೆ ನಿಧಾನ ಗತಿಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಗ್ರಾಮಸ್ಥರು ಓಡಾಡಲು ಸಮಸ್ಯೆಯಾಗುತ್ತಿದೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ಗುತ್ತಿಗೆದಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿದರೆ ಕರೆ ಸ್ವೀಕರಿಸಲಿಲ್ಲ.ಈ ಬಗ್ಗೆ ಪ್ರತಿಕ್ರಿಯಿಸಿದ ರಾಶ್ಚೇರುವು ಗ್ರಾಮ ಪಂಚಾಯಿತಿ ಅಧ್ಯಕ್ಷೆ, ಗ್ರಾಮಸ್ಥರಿಗೆ ಯಾವುದೇ ತೊಂದರೆ ಆಗದಂತೆ ಕಾಮಗಾರಿ ನಡೆಯಬೇಕು. ಆದರೆ ಗ್ರಾಮದಲ್ಲಿ ಜೆಜೆಎಮ್ ಕಾಮಾಗಾರಿ ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿಲ್ಲ, ಅವರು ನಮ್ಮ ಕರೆಯನ್ನೂ ಸ್ವೀಕರಿಸುತ್ತಿಲ್ಲ ಎಂದರು.
ಕಾಮಗಾರಿ ಪೂರ್ಣಗೊಳಿಸಲಿಕಾಮಗಾರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕೋಂಡಮಾರಪಲ್ಲಿ ಗ್ರಾಮಸ್ಥ ರಾಮಾಂಜಿನಪ್ಪ ಜೆಜೆಎಂ ಕಾಮಗಾರಿಯಿಂದ ರಸ್ತೆ ಹದಗೆಟ್ಟಿದೆ. ಜನರ ಓಡಾಟಕ್ಕೆ ತೊಂದರೆಯಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.