ಹಳ್ಳ ಹಿಡಿದ ಜೆಜೆಎಂ ಕಾಮಗಾರಿ: ಶಾಸಕ ಡಾ. ಚಂದ್ರು ಲಮಾಣಿ ಗರಂ

| Published : Mar 17 2025, 12:30 AM IST

ಸಾರಾಂಶ

ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ನೀರು ಕೊಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಲಜೀವನ ಮಷಿನ್ ಯೋಜನೆ ಲಕ್ಷ್ಮೇಶ್ವರ ತಾಲೂಕಿನಲ್ಲಿ ಸಂಫೂರ್ಣ ಹಳ್ಳ ಹಿಡಿದಿದೆ. ಗುತ್ತಿಗೆದಾರರು ಬೇಕಾಬಿಟ್ಟಿ ಕಾಮಗಾರಿ ಕೈಗೊಂಡು ಬಿಲ್ಲು ಎತ್ತುವ ಕಾರ್ಯ ಮಾಡಿದ್ದಾರೆ. ಪಿಡಿಓ ಅಧಿಕಾರಿಗಳು ಎಚ್ಚರದಿಂದ ಕಾಮಗಾರಿಯ ಬಗ್ಗೆ ನಿಗಾವಹಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಗರಂ ಆಗಿ ಮಾತನಾಡಿದರು.

ಲಕ್ಷ್ಮೇಶ್ವರ: ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ನೀರು ಕೊಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಲಜೀವನ ಮಷಿನ್ ಯೋಜನೆ ಲಕ್ಷ್ಮೇಶ್ವರ ತಾಲೂಕಿನಲ್ಲಿ ಸಂಫೂರ್ಣ ಹಳ್ಳ ಹಿಡಿದಿದೆ. ಗುತ್ತಿಗೆದಾರರು ಬೇಕಾಬಿಟ್ಟಿ ಕಾಮಗಾರಿ ಕೈಗೊಂಡು ಬಿಲ್ಲು ಎತ್ತುವ ಕಾರ್ಯ ಮಾಡಿದ್ದಾರೆ. ಪಿಡಿಓ ಅಧಿಕಾರಿಗಳು ಎಚ್ಚರದಿಂದ ಕಾಮಗಾರಿಯ ಬಗ್ಗೆ ನಿಗಾವಹಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಗರಂ ಆಗಿ ಮಾತನಾಡಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಶನಿವಾರ ನಡೆದ ಟಾಸ್ಕ್ ಫೋರ್ಸ್‌ ಸಭೆಯಲ್ಲಿ ಬೇಸಿಗೆಯ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಅವರು ಮಾತನಾಡಿದರು.

ಲಕ್ಷ್ಮೇಶ್ವರ ತಾಲೂಕಿನಲ್ಲಿ ಜೆಜೆಎಂ ಕಾಮಗಾರಿಗಳು ಅಪೂರ್ಣವಾಗಿವೆ. ಆದರೆ ದಾಖಲೆಯಲ್ಲಿ ಶೇ 97ರಷ್ಟು ಕಾಮಗಾರಿಗಳು ಪೂರ್ಣವಾಗಿವೆ ಎಂದು ಜಲಜೀವನ ಮಷಿನ್ ಎಇಇ ಹೇಳುತ್ತಾರೆ. ಆದರೆ ವಾಸ್ತವವಾಗಿ ತಾಲೂಕಿನ ಯಾವ ಗ್ರಾಮಗಳಲ್ಲಿಯೂ ಜೆಜೆಎಂ ಕಾಮಗಾರಿ ಪೂರ್ಣಗೊಂಡಿಲ್ಲ, ಜೆಜೆಎಂ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಹೀಗಾದಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಶಾಸಕರು ಎಚ್ಚರಿಕೆ ನೀಡಿದರು. ತಾಲೂಕಿನಲ್ಲಿ ಬೇಸಿಗೆಯ ಬಿಸಿಲು ಮುಂದಿನ ದಿನಗಳಲ್ಲಿ ಹೆಚ್ಚಾಗುವ ಎಲ್ಲ ಲಕ್ಷಣಗಳೂ ಇವೆ. ಆದ್ದರಿಂದ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾಗಿದೆ, ಜೆಜೆಎಂ ಕಾಮಗಾರಿಗಳು ಸಂಪೂರ್ಣವಾಗಿ ಮುಕ್ತಾಯಗೊಳ್ಳದೆ ಶೇ 50ರಷ್ಟು ಬಿಲ್ ಪಾವತಿಸಲಾಗಿದೆ. ಪಿಡಿಓಗಳು ಜೆಜೆಎಂ ಕಾಮಗಾರಿ ಮುಕ್ತಾಯಗೊಳ್ಳದೆ ಹಸ್ತಾಂತರ ಮಾಡಿಕೊಳ್ಳಬಾರದು. ತಾಲೂಕಿನ ರಾಮಗೇರಿ, ಗೋನಾಳ, ಒಡೆಯರ ಮಲ್ಲಾಪೂರ, ಶಿಗ್ಲಿ, ದೊಡ್ಡೂರ, ಹುಲ್ಲೂರು, ಮಾಡಳ್ಳಿ, ಯಳವತ್ತಿ, ಗೊಜನೂರ, ದೊಡ್ಡೂರ, ಬಟ್ಟೂರ. ಪು.ಬಡ್ನಿ.ಅಡರಕಟ್ಟಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಪಿಡಿಓಗಳ ಹತ್ತಿರ ಜೆಜೆಎಂ ಕಾಮಗಾರಿಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ಇರಬೇಕು. ಇಲ್ಲವಾದಲ್ಲಿ ಪಿಡಿಓಗಳ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ ಅವರು ಬೇಸಿಗೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಪಶುವೈದ್ಯಕೀಯ ಇಲಾಖೆಯು ಮುಂಜಾಗ್ರತೆ ವಹಿಸಬೇಕು. ಮೇವು ಸಂಗ್ರಹದ ಬಗ್ಗೆ ಮಾಹಿತಿ ತೆಗೆದುಕೊಂಡು, ಮೇವಿನ ಅವಶ್ಯಕತೆ ಇದ್ದಲ್ಲಿ ಕ್ರಮ ಕೈಗೊಳ್ಳಬೇಕು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ನೋಡಿಕೊಳ್ಳಬೇಕು. ಅಲ್ಲದೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಎಂದು ಹೇಳಿದರು.ಸಭೆಯಲ್ಲಿ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕಿನಲ್ಲಿ 60 ಹೆಚ್ಚು ಕೊಳವೆ ಬಾವಿ ಕೊರೆಯಿಸುವ ಮೂಲಕ ಬೇಸಿಗೆಯ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮವಹಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಲಕ್ಷ್ಮೇಶ್ವರ ತಹಸೀಲ್ದಾರ್‌ ವಾಸುದೇವ ಸ್ವಾಮಿ ಮತ್ತು ಶಿರಹಟ್ಟಿ ತಾಲೂಕಿನ ತಹಸೀಲ್ದಾರ ಅನಿಲ ಬಡಿಗೇರ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಹಾಗೂ ಪುರಸಭೆಯ ಮುಖ್ಯಾಧಿಕಾರಿ ಮಹೇಶ ಹಡಪದ ಇದ್ದರು. ಎರಡು ತಾಲೂಕಿನ 28 ಪಿಡಿಓಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಈ ವೇಳೆ ಹಾಜರಿದ್ದರು.