ಸಾರಾಂಶ
ಜೆಜೆಎಂ ಅಡಿ ಗ್ರಾಮಗಳಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಯು ಸಮರ್ಪಕವಾಗಿಲ್ಲ. ಅಲ್ಲದೇ ನಲ್ಲಿ ಸಂಪರ್ಕಕ್ಕಾಗಿ ತೆಗೆದಿರುವ ಗುಂಡಿ ಮುಚ್ಚಿಲ್ಲ. ಕಾಟಾಚಾರಕ್ಕೆ ಮಾತ್ರ ಮುಚ್ಚಿದಂತೆ ಕಾಣುತ್ತಿವೆ. ಇದರಿಂದ ಸಂಚಾರಕ್ಕೆ ತೊಂದರೆಯಾಗಿದೆ.
ಹುಬ್ಬಳ್ಳಿ:
ಜಲಜೀವನ್ ಮಿಷನ್ (ಜೆಜೆಎಂ) ಅಡಿ ಕೈಗೊಳ್ಳಲಾಗಿರುವ ಕಾಮಗಾರಿಯಿಂದಾಗಿ ಗ್ರಾಮಗಳಲ್ಲಿ ಜನತೆ ಸಂಚರಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಈ ಕೂಡಲೇ ಸಮಸ್ಯೆ ಸರಿಪಡಿಸಬೇಕೆಂಧು ಶಾಸಕ ಎನ್.ಎಚ್. ಕೋನರಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಸೋಮವಾರ ನವಲಗುಂದ ಕ್ಷೇತ್ರ ವ್ಯಾಪ್ತಿಯ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕುಗಳ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೆಜೆಎಂ ಅಡಿ ಗ್ರಾಮಗಳಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಯು ಸಮರ್ಪಕವಾಗಿಲ್ಲ. ಅಲ್ಲದೇ ನಲ್ಲಿ ಸಂಪರ್ಕಕ್ಕಾಗಿ ತೆಗೆದಿರುವ ಗುಂಡಿ ಮುಚ್ಚಿಲ್ಲ. ಕಾಟಾಚಾರಕ್ಕೆ ಮಾತ್ರ ಮುಚ್ಚಿದಂತೆ ಕಾಣುತ್ತಿವೆ. ಇದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಇದೇ ಗುಂಡಿಗಳಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗಗಳ ತಾಣವಾಗಿ ಮಾರ್ಪಟ್ಟಿವೆ. ಈ ಕೂಡಲೇ ಇಂತಹ ಗುಂಡಿಗಳನ್ನು ಗುರುತಿಸಿ ಮೊದಲಿದ್ದಂತೆ ಪೂರ್ಣ ಪ್ರಮಾಣದಲ್ಲಿ ಮುಚ್ಚುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.₹100 ಕೋಟಿ ಅನುದಾನ ಬೇಕು:
ಮಳೆಯಿಂದಾಗಿ ಕ್ಷೇತ್ರದ ಹಲವು ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ವಾಹನ ಸಂಚರಿಸಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ದುರಸ್ತಿಗೆ ಸುಮಾರು ₹100 ಕೋಟಿಗೂ ಅಧಿಕ ಅನುದಾನ ಬೇಕಾಗಬಹುದು. ಇದೀಗ ಕೆಲವೆಡೆ ದುರಸ್ತಿ ಮಾಡಲಾಗಿದೆ. ಉಳಿದ ರಸ್ತೆಗಳ ಸಮಗ್ರ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಕೋನರಡ್ಡಿ ಸೂಚಿಸಿದರು.ಲಕ್ಷ ಸಸಿ ನೆಡುವ ಕಾರ್ಯ:
ಕ್ಷೇತ್ರದಲ್ಲಿ 79 ಚಕ್ಕಡಿ ರಸ್ತೆ (229 ಕಿಮೀ) ನಿರ್ಮಿಸಿದ್ದು ಈ ರಸ್ತೆಗಳ ಅಕ್ಕಪಕ್ಕದಲ್ಲಿ ಒಂದು ಲಕ್ಷ ಸಸಿ ನೆಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ ಶಾಸಕರು, ಶೀಘ್ರ ಕಾರ್ಯಾರಂಭಿಸುವಂತೆ ಹೇಳಿದರು. ಭದ್ರಾಪುರ ಹಾಗೂ ಕೋಳಿವಾಡ ಸುತ್ತಲಿನ ಹೊಲಗಳಿಗೆ ಜಿಂಕೆ ಹಾಗೂ ಬ್ಯಾಹಟ್ಟಿ ಸುತ್ತಲೂ ಮಂಗಗಳ ಹಾವಳಿ ಸಹ ಹೆಚ್ಚಾಗಿದ್ದು ಅವುಗಳ ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದರು.ಮುಂದಿನ 15 ದಿನಗಳಲ್ಲಿ ಹೆಸರು ಬೆಳೆ ಕಟಾವಿಗೆ ಬರಲಿದ್ದು ಆದ್ಯತೆ ಮೇರೆಗೆ ಹೆಸರು ಖರೀದಿ ಕೇಂದ್ರ ಸ್ಥಾಪಿಸಲಾಗುವುದು ಎಂದ ಶಾಸಕರು, ಬೆಳೆ ಸಮೀಕ್ಷೆ ಸಮರ್ಪಕವಾಗಿ ನಡೆಯಬೇಕು ಎಂದ ಶಾಸಕರು, ಮಳೆಯಿಂದ ಗ್ರಾಮೀಣ ಭಾಗದಲ್ಲಿ ನೂರಾರು ವಿದ್ಯುತ್ ಕಂಬಗಳು ಉರುಳಿವೆ. ಪುನಃ ವಿದ್ಯುತ್ ಕಂಬ ಹಾಗೂ ವಿದ್ಯುತ್ ಪರಿವರ್ತಕ ಅಳವಡಿಸಲು ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮೂವರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಕೆಡಿಪಿ ಸಭೆಯ ನಾಮನಿರ್ದೇಶಿತ ಸದಸ್ಯರು ಹಾಗೂ ಗ್ಯಾರಂಟಿ ಯೋಜನೆಯ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ, ತಹಸೀಲ್ದಾರ್‌ಗಳಾದ ಸುಧೀರ ಸಾಹುಕಾರ, ಪ್ರಕಾಶ ನಾಶಿ, ಎಂ.ಜಿ. ದಾಸಪ್ಪನವರ, ತಾಪಂ ಇಒಗಳಾದ ಭಾಗ್ಯಶ್ರೀ ಜಹಗೀರದಾರ್, ಮದನಕುಮಾರ ಸಿಂಧೆ, ಆಡಳಿತಾಧಿಕಾರಿ ಲಲಿತಾ ಲಮಾಣಿ, ಹುಬ್ಬಳ್ಳಿ ತಾಪಂ ಇಒ ಉಮೇಶ ಬೊಮ್ಮಕನವರ, ಶಿಕ್ಷಣ ಸಂಯೋಜಕ ಮೃತ್ಯುಂಜಯ ಜಡಿಮಠ, ಓಬಳೇಶ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))