ಸಾರಾಂಶ
ಸಿಂಧನೂರು ತಾಲೂಕಿನ ವೆಂಕಟೇಶ್ವರ ಕ್ಯಾಂಪಿನಲ್ಲಿ ರಸ್ತೆ ಅಗಲೀಕರಣ ಹಾಗೂ ಡಾಂಬರೀಕರಣ ಮತ್ತು ದಢೇಸುಗೂರು ಸೇತುವೆ ನಿರ್ಮಾಣ ಕಾಮಗಾರಿಗೆ ಸಂಸದ ಸಂಗಣ್ಣ ಕರಡಿ ಶಂಕುಸ್ಥಾಪನೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಸಿಂಧನೂರು
ರಾಜ್ಯ ಹೆದ್ದಾರಿ ಯೋಜನೆಯಲ್ಲಿ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ ರು.122 ಕೋಟಿ ಮಂಜೂರಾಗಿದ್ದು, ಶೇ.33 ರಷ್ಟು ಕಡಿಮೆ ಟೆಂಡರ್ ಹಾಕಿರುವುದರಿಂದ ರು.83 ಕೋಟಿಯ ಕೆಲಸದ ಆದೇಶ ಪಡೆದಿರುವ ಗುತ್ತಿಗೆದಾರ ಉದಯ ಶಿವಕುಮಾರ ಅವರಿಗೆ 18 ತಿಂಗಳ ಕಾಲಾವಧಿಯಲ್ಲಿ ಗುಣಮಟ್ಟದ ಕೆಲಸ ಮಾಡಬೇಕು ಎಂದು ಸಂಸದ ಸಂಗಣ್ಣ ಕರಡಿ ಸೂಚಿಸಿದರು.ತಾಲೂಕಿನ ವೆಂಕಟೇಶ್ವರ ಕ್ಯಾಂಪಿನಲ್ಲಿ ವೆಂಕಟೇಶ್ವರ ಕ್ಯಾಂಪಿನಿಂದ ದಢೇಸುಗೂರುವರೆಗೆ ರಸ್ತೆ ಅಗಲೀಕರಣ ಹಾಗೂ ಡಾಂಬರೀಕರಣ ಮತ್ತು ದಢೇಸುಗೂರು ಸೇತುವೆ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆಯನ್ನು ಅವರು ನೆರವೇರಿಸಿ ಮಾತನಾಡಿದರು.
ನವಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಮೂರು ರಾಜ್ಯಗಳ ಪರಸ್ಪರ ಒಪ್ಪಂದ ಬೇಕಾಗುತ್ತದೆ. ಆಲಮಟ್ಟಿ ಆಣೆಕಟ್ಟಿಗೆ ಮುಂಗಾರಿನಲ್ಲಿ ಒಂದು ತಿಂಗಳ ಮುಂಚಿತವಾಗಿಯೇ ನೀರು ಬರುತ್ತಿದ್ದು, ಅದೇ ನೀರನ್ನು ತುಂಗಭದ್ರಾ ನದಿಗೆ ತಂದರೆ ಈ ಭಾಗದ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ಸಿಂಧನೂರಿಗೆ ರೈಲ್ವೆ ಮಾರ್ಗ, ಬೈಪಾಸ್, ಕೇಂದ್ರೀಯ ವಿದ್ಯಾಲಯ ಮಾಡುವ ಕನಸು ಇಷ್ಟರಲ್ಲಿಯೇ ಸಂಪೂರ್ಣವಾಗಿ ನನಸಾಗಲಿದೆ. ಅಲ್ಲದೆ ಮೆಡಿಕಲ್ ಕಾಲೇಜು, ಜಿಲ್ಲಾ ಕೇಂದ್ರ ಮಾಡುವ ಸಂಕಲ್ಪ ಹೊಂದಿರುವುದಾಗಿ ಸಂಸದ ಸಂಗಣ್ಣ ಹೇಳಿದರು.ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಕನಕಗಿರಿ ಮಾಜಿ ಶಾಸಕ ಬಸವರಾಜ ದಢೇಸುಗೂರು ಬೈಪಾಸ್ ರಸ್ತೆ ಮತ್ತು ನವಲಿ ಜಲಾಶಯ ನಿರ್ಮಾಣಕ್ಕೆ ಮನವಿ ಮಾಡಿದರು.
ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಕೇಂದ್ರೀಯ ವಿದ್ಯಾಲಯಕ್ಕೆ ಆದ್ಯತೆ ನೀಡುವಂತೆ ಕೋರಿದರು.ಮಸ್ಕಿಯ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ ಸಂಗಣ್ಣನವರು ಸಂಸದರಾದ ನಂತರ ಹಲವಾರು ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯ ಮಾಡಿದ್ದಾರೆ ಎಂದರು.
ರಾಜ್ಯ ಹೆದ್ದಾರಿ ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜನಿಯರ್ ಸೋಮನಗೌಡ ಕಾಮಗಾರಿಯ ವಿವರ ತಿಳಿಸಿದರು. ಸೋಮಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಮ್ಮ ಹುಸೇನಪ್ಪ, ಉಪಾಧ್ಯಕ್ಷ ನಾಗೇಶ್ವರರಾವ್, ಮುಖಂಡರಾದ ಕೆ.ಕರಿಯಪ್ಪ, ರಾಜಶೇಖರ ಪಾಟೀಲ್, ಅಮರೇಗೌಡ ವಿರುಪಾಪುರ, ದೇವೇಂದ್ರಪ್ಪ ಯಾಪಲಪರ್ವಿ, ರಾಜೇಶ ಹಿರೇಮಠ, ರಾಜುಗೌಡ ಬಾದರ್ಲಿ, ಎನ್.ಅಮರೇಶ, ಟಿ.ಹನುಮೇಶ ಸಾಲಗುಂದಾ, ನಿರುಪಾದೆಪ್ಪ ಜೋಳದರಾಶಿ ವಕೀಲ ಇದ್ದರು.