ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯದಲ್ಲಿ ಜಲ ಜೀವನ್ ಮಿಷನ್ ಕಾರ್ಯಕ್ಷಮತೆ ಮೌಲ್ಯಮಾಪನ ಮಾಡಲು ಲೆಕ್ಕಪರಿಶೋಧನೆಗಾಗಿ ಆಯ್ಕೆ ಮಾಡಲಾದ ಏಳು ಜಿಲ್ಲೆಗಳಲ್ಲಿ ಮಂಡ್ಯ ಜಿಲ್ಲೆಯೂ ಒಂದಾಗಿದ್ದು, ಸಿಎಜಿ ವರದಿಯಲ್ಲಿ ಮಂಡ್ಯ ಜಿಲ್ಲೆಯ ಜಲ ಜೀವನ್ ಮಿಷನ್ (ಜೆಜೆಎಂ) ಅನುಷ್ಠಾನದ ಬಗ್ಗೆ ಹಲವು ಮಹತ್ವದ ಮತ್ತು ಆತಂಕಕಾರಿ ಅಂಶಗಳನ್ನು ದಾಖಲಿಸಲಾಗಿದೆ. ವರದಿ ಪ್ರಕಾರ ಜಿಲ್ಲೆಯ ಪ್ರಮುಖ ವೈಫಲ್ಯಗಳು ಮತ್ತು ಕುಂದುಕೊರತೆಗಳ ವಿವರಗಳು ಇಲ್ಲಿವೆ.

​ಸಭೆಗಳನ್ನು ನಡೆಸದಿರುವುದು (ಆಡಳಿತಾತ್ಮಕ ವೈಫಲ್ಯ):

ಜಿಲ್ಲಾ ಮಟ್ಟದಲ್ಲಿ ಜೆಜೆಎಂ ಅನುಷ್ಠಾನದ ಒಟ್ಟಾರೆ ಮೇಲ್ವಿಚಾರಣೆ ನಡೆಸಬೇಕಾದ ‘ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್’ (ಡಿಡಬ್ಲ್ಯೂಎಸ್‌ಎಂ), 2023-24ನೇ ಸಾಲಿನಲ್ಲಿ ಕನಿಷ್ಠ ಒಂದೇ ಒಂದು ಸಭೆಯನ್ನೂ ನಡೆಸಿಲ್ಲ ಎಂಬುದು ಆಡಳಿತಾತ್ಮಕ ವೈಫಲ್ಯ ಮತ್ತು ಮೇಲ್ವಿಚಾರಣೆಯ ಕೊರತೆ ಎತ್ತಿ ತೋರಿಸುತ್ತದೆ.

​ಗ್ರಾಮ ಮಟ್ಟದ ಮೂಲ ಸೌಕರ್ಯ ಯೋಜನೆಗಳಲ್ಲಿ ವಿಳಂಬ ಮತ್ತು ಸುಳ್ಳು ವರದಿ:


​ಬ್ಯಾಚ್-1ರ ಅಡಿಯಲ್ಲಿ ಪ್ರಾರಂಭವಾದ ಕಾಮಗಾರಿಗಳನ್ನು ಪೂರ್ಣಗೊಳಿಸುವಲ್ಲಿ ಮಂಡ್ಯ ಜಿಲ್ಲೆ ತೀರಾ ಹಿಂದಿದೆ. ಬ್ಯಾಚ್-3 ಅಡಿಯಲ್ಲಿ ಟೆಂಡರ್ ಆದ ಬಹುತೇಕ ಕಾಮಗಾರಿಗಳು ಮಂಡ್ಯದಲ್ಲಿ ಇನ್ನೂ ಪ್ರಾರಂಭವೇ ಆಗಿಲ್ಲ.

ದರಸಗುಪ್ಪೆ ಮತ್ತು ಕಿರಂಗೂರು ಮುಂತಾದ ಮಂಡ್ಯ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಕಾಮಗಾರಿಗಳು ಪೂರ್ಣಗೊಳ್ಳದಿದ್ದರೂ, ಶೇ.100ರಷ್ಟು ನಲ್ಲಿ ಸಂಪರ್ಕ (ಎಫ್‌ಎಚ್‌ಟಿಸಿ) ನೀಡಲಾಗಿದೆ ಅಥವಾ ‘ಹರ್ ಘರ್ ಜಲ’ ಎಂದು ಸುಳ್ಳು ವರದಿ ನೀಡಲಾಗಿದೆ.

​ಬಹು-ಗ್ರಾಮ ಕುಡಿಯುವ ನೀರಿನ ಯೋಜನೆಗಳಲ್ಲಿನ (ಎಂವಿಎಸ್‌) ವಿಳಂಬಗಳು: ​

ಮಂಡ್ಯ ಜಿಲ್ಲೆಯಲ್ಲಿ 5 ಎಂವಿಎಸ್‌ ಕಾಮಗಾರಿಗಳಿಗೆ ಕಾರ್ಯಾದೇಶ (ಕೆಲಸದ ಆದೇಶ) ನೀಡಲು ಬರೋಬ್ಬರಿ 22 ರಿಂದ 38 ತಿಂಗಳ ಸುದೀರ್ಘ ಸಮಯ ತೆಗೆದುಕೊಳ್ಳಲಾಗಿದೆ.

​ಜಲಧಾರೆ ಯೋಜನೆ 2 ಮತ್ತು 4 ರ (ಮಂಡ್ಯ ಮತ್ತು ಮದ್ದೂರು ತಾಲೂಕು) ವಿಸ್ತೃತ ಯೋಜನಾ ವರದಿಗಳಿಗೆ (ಡಿಪಿಆರ್‌) ಮಾರ್ಚ್ 2025 ರ ಹೊತ್ತಿಗೂ ಅನುಮೋದನೆ ದೊರೆತಿರಲಿಲ್ಲ. ​ಹಳೆಯ ಎನ್‌ಆರ್‌ಡಬ್ಲ್ಯೂಪಿ ಯೋಜನೆಯಡಿ ಮದ್ದೂರು ಮತ್ತು ಮಳವಳ್ಳಿ ತಾಲೂಕುಗಳಲ್ಲಿ ಕೈಗೆತ್ತಿಕೊಂಡಿದ್ದ 4 ಕಾಮಗಾರಿಗಳು (ರು. 126.93 ಕೋಟಿ ವೆಚ್ಚ) ಅರಣ್ಯ ಇಲಾಖೆ ಒಪ್ಪಿಗೆ ಮತ್ತು ಜಮೀನು ಲಭ್ಯತೆ ಕೊರತೆಯಂತಹ ಕಾರಣಗಳಿಂದಾಗಿ ಮಾರ್ಚ್ 2025 ರ ಹೊತ್ತಿಗೂ ಅಪೂರ್ಣವಾಗಿವೆ.

ನೀರಿನ ಮೂಲದ ಅಲಭ್ಯತೆ ಮತ್ತು ಪೋಲಾದ ಹಣ:

​ಮದ್ದೂರು ತಾಲೂಕಿನ 33 ಗ್ರಾಮಗಳಿಗೆ ಶಿಂಷಾ ನದಿಯಿಂದ ನೀರು ಪೂರೈಸುವ ಯೋಜನೆ ಸಂಪೂರ್ಣ ವಿಫಲವಾಗಿದೆ. ಯೋಜನೆಗೆ ಮುನ್ನ ನೀರಿನ ಲಭ್ಯತೆಯ ಬಗ್ಗೆ ಸಮರ್ಪಕವಾದ ಅಧ್ಯಯನ ನಡೆಸಿರಲಿಲ್ಲ. ಇಗ್ಗಲೂರು_ಬ್ಯಾರೇಜ್ ಹಿನ್ನೀರಿನಲ್ಲಿ ನೀರಿಲ್ಲದ ಕಾರಣ ಈ ಯೋಜನೆ ಕಾರ್ಯ ನಿರ್ವಹಿಸುತ್ತಿಲ್ಲ. ಯೋಜನೆಗಾಗಿ 6.15 ಕೋಟಿ ರು .ವೆಚ್ಚ ಮಾಡಿದ್ದರೂ, ನೀರು ಶುದ್ಧೀಕರಣ ಘಟಕದಲ್ಲಿ ಗಿಡಗಂಟಿಗಳು ಬೆಳೆದಿವೆ ಮತ್ತು ಈ 33 ಗ್ರಾಮಗಳ ಜನರು ಈಗಲೂ ಬೋರ್‌ವೆಲ್ ನೀರನ್ನೇ ಅವಲಂಬಿಸಿದ್ದಾರೆ.

ಕೆ.ಆರ್.ಪೇಟೆ, ಪಾಂಡವಪುರ ಮತ್ತು ನಾಗಮಂಗಲ ತಾಲೂಕುಗಳ ಬೃಹತ್ ಯೋಜನೆ: ​

797 ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ 701 ಕೋಟಿ ರು. ವೆಚ್ಚದ ಈ ಬೃಹತ್ ಯೋಜನೆ ತೀವ್ರ ವಿಳಂಬವನ್ನು ಎದುರಿಸಿದೆ. ಜಮೀನು ಸ್ವಾಧೀನ, ಅರಣ್ಯ ಇಲಾಖೆ ಅನುಮತಿ ಮುಂತಾದವುಗಳ ವಿಳಂಬದಿಂದಾಗಿ ಜನವರಿ 2025ರ ಗಡುವಿನ ವೇಳೆಗೆ ಈ ಯೋಜನೆಯು ಕೇವಲ 47% ಭೌತಿಕ ಪ್ರಗತಿ ಹಾಗೂ 32% ಆರ್ಥಿಕ ಪ್ರಗತಿಯನ್ನಷ್ಟೇ ಸಾಧಿಸಿದೆ.

​ನೀರಿನ ಗುಣಮಟ್ಟ ಮತ್ತು ಪರೀಕ್ಷೆ: ​

ಮಂಡ್ಯ ಜಿಲ್ಲೆಯ ಒಟ್ಟು 11,379 ನೀರಿನ ಮೂಲಗಳ ಪೈಕಿ ಕೇವಲ 5,429 (ಶೇ. 48) ಮೂಲ ಗಳನ್ನಷ್ಟೇ ರಾಸಾಯನಿಕ ಪರೀಕ್ಷೆಗೆ ಒಳಪಡಿಸಲಾಗಿದೆ. ​ಮಂಡ್ಯದ ಹುಂಜನಕೆರೆ ಗ್ರಾಮದಲ್ಲಿ ನೀರಿನ ಮೂಲ ಸುರಕ್ಷಿತವಾಗಿದ್ದರೂ ಮನೆಗಳಿಗೆ ಪೂರೈಕೆಯಾದ ನಲ್ಲಿ ನೀರಿನಲ್ಲಿ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಇರುವುದು ಲೆಕ್ಕಪರಿಶೋಧನೆಯ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಅಂದರೆ, ಪೈಪ್‌ಲೈನ್ ಮೂಲಕ ನೀರು ಸರಬರಾಜು ಆಗುವ ಹಾದಿಯಲ್ಲಿ ನೀರು ಕಲುಷಿತಗೊಳ್ಳುತ್ತಿದೆ ಎಂಬುದು ದೃಢಪಟ್ಟಿದೆ.