ಕಂಪ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶಾಸಕ ಜೆ.ಎನ್. ಗಣೇಶ್ ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ಕಂಪ್ಲಿ: ಶಾಸಕ ಜೆ.ಎನ್.ಗಣೇಶ್ ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಸಂಕಲ್ಪಿಸಿ ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಶುಕ್ರವಾರ ವಿಶೇಷ ಪಾದಯಾತ್ರೆ ನಡೆಸಿದರು.
ಪಟ್ಟಣದ ಮೆಟ್ರಿ ಮಾರೆಮ್ಮ ದೇವಸ್ಥಾನದಿಂದ ಆರಂಭವಾದ ಪಾದಯಾತ್ರೆ ವಿವಿಧ ಪ್ರಮುಖ ರಸ್ತೆಗಳಲ್ಲಿ ಸಾಗುತ್ತಾ, ಹುಲಿಗಿಯ ಹುಲಿಗೆಮ್ಮದೇವಿ ದೇವಸ್ಥಾನ ತಲುಪಿತು. ಈ ವೇಳೆ ನೂರಾರು ಕಾರ್ಯಕರ್ತರು ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿ ಶಾಸಕ ಜೆ.ಎನ್. ಗಣೇಶ್ ಅವರಿಗೆ ಸಚಿವ ಸ್ಥಾನ ದೊರೆಯಲೆಂದು ಪ್ರಾರ್ಥಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸ ರಾವ್ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಕಂಪ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶಾಸಕ ಜೆ.ಎನ್. ಗಣೇಶ್ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ವಿವಿಧ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರದಿಂದ ನೂರಾರು ಕೋಟಿ ರುಪಾಯಿ ಅನುದಾನ ತಂದು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.
ಕುರುಗೋಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಾನಾಳ್ ಚನ್ನಬಸವರಾಜಗೌಡ ಮಾತನಾಡಿ, ಜನಸಾಮಾನ್ಯರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಜೆ.ಎನ್. ಗಣೇಶ್ ಕ್ಷೇತ್ರದ ಜನರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಕ್ರಿಯಾಶೀಲ ಶಾಸಕರಾಗಿದ್ದಾರೆ. ಎರಡು ಅವಧಿಗಳಿಂದ ಜನರ ವಿಶ್ವಾಸ ಪಡೆದು ವಿಧಾನಸಭೆಗೆ ಆಯ್ಕೆಯಾಗಿರುವ ಅವರು ಸಚಿವ ಸ್ಥಾನಕ್ಕೆ ಅರ್ಹರಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.ಗ್ರಾಪಂ ಮಾಜಿ ಸದಸ್ಯ ನೇಣಕಿಗಿರಿ ಮಾತನಾಡಿ, ಬಳ್ಳಾರಿ ಜಿಲ್ಲೆಯ ಪ್ರತಿನಿಧಿತ್ವ, ವಾಲ್ಮೀಕಿ ಸಮುದಾಯದ ಮೀಸಲು ಹಾಗೂ ಯುವ ನಾಯಕರ ಕೋಟಾ ಸೇರಿದಂತೆ ಎಲ್ಲ ಮಾನದಂಡಗಳಲ್ಲೂ ಜೆ.ಎನ್. ಗಣೇಶ್ ಸಚಿವ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯಾಗಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ, ಎಐಸಿಸಿ ನಾಯಕರು ಅವರ ಸೇವೆಯನ್ನು ಪರಿಗಣಿಸಿ ಸಚಿವ ಸ್ಥಾನ ನೀಡುವ ಮೂಲಕ ಜಿಲ್ಲೆಯ ಜನರ ಆಶಯವನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಸಚಿವ ಸ್ಥಾನ ದೊರೆತಲ್ಲಿ ರಾಜ್ಯದ ಅಭಿವೃದ್ಧಿಗೆ ಮತ್ತಷ್ಟು ಪರಿಣಾಮಕಾರಿಯಾಗಿ ಸೇವೆ ಸಲ್ಲಿಸುವ ಸಾಮರ್ಥ್ಯ ಜೆ.ಎನ್. ಗಣೇಶ್ ಅವರಿಗಿದೆ. ಅವರ ನಾಯಕತ್ವದಿಂದ ಕಂಪ್ಲಿ ಕ್ಷೇತ್ರದ ಜೊತೆಗೆ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೂ ಹೊಸ ಚೈತನ್ಯ ಸಿಗಲಿದೆ ಎಂದು ಮುಖಂಡರು ವಿಶ್ವಾಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಕುರುಗೋಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಾನಾಳ್ ಚನ್ನಬಸವರಾಜಗೌಡ, ಸಿ.ಆರ್. ಹನುಮಂತ, ಗಂಗಣ್ಣ, ಬಿ. ಸಿದ್ದಪ್ಪ, ಕೆ.ಷಣ್ಮುಖಪ್ಪ, ಜಿ.ಮರೇಗೌಡ, ಆರ್.ಪಿ. ಶಶಿಕುಮಾರ್, ಎಚ್. ಕುಮಾರಸ್ವಾಮಿ, ಹಗೆದಾಳು ವೀರೇಶ್, ಮಾರೇಶ್, ಎಲ್ಲಪ್ಪ, ಶೇಖರ್, ಎಚ್. ಜಗದೀಶ, ಹೊನ್ನಳ್ಳಿ ಗಂಗಾಧರ, ಕೋರಿ ಚನ್ನಬಸವ, ಜಿ. ಉಮೇಶಗೌಡ, ಗೌಡ್ರು ಸಿದ್ದಪ್ಪ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.