ಜ್ಞಾನ ದಾಸೋಹವೇ ಶ್ರೇಷ್ಠ ಕಾಯಕ: ಕುಲಕರ್ಣಿ

| Published : Mar 02 2024, 01:50 AM IST

ಸಾರಾಂಶ

ಯಾರು ಜ್ಞಾನದ ದಾಸೋಹವನ್ನು ಹಂಚುತ್ತಾರೆ. ಅವರ ಮನಸ್ಸಿಗೆ ನೆಮ್ಮದಿ ನೀಡಬಲ್ಲದು. ಜ್ಞಾನ ದಾಸೋಹವೇ ಶ್ರೇಷ್ಠ ಕಾಯಕವಾಗಿದೆ.

ಕನ್ನಡಪ್ರಭ ವಾರ್ತೆ ಶಹಾಪುರ

ಯಾರು ಜ್ಞಾನದ ದಾಸೋಹವನ್ನು ಹಂಚುತ್ತಾರೆ. ಅವರ ಮನಸ್ಸಿಗೆ ನೆಮ್ಮದಿ ನೀಡಬಲ್ಲದು. ಜ್ಞಾನ ದಾಸೋಹವೇ ಶ್ರೇಷ್ಠ ಕಾಯಕವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಇಂತಹ ದಾಸೋಹಗಳಿಂದ ಅಕ್ಷರದ ಬೆಳಕು ವಿಸ್ತರಿಸುತ್ತಾ, ಸಾಗಲಿ ಎಂದು ಹಿರಿಯ ವಕೀಲರಾದ ಶ್ರೀನಿವಾಸರಾವ್ ಕುಲಕರ್ಣಿ ತಿಳಿಸಿದರು.

ತಾಲೂಕಿನ ವನದುರ್ಗಾ ಗ್ರಾಮದ ಆರ್.ವಿ. ಶಿಕ್ಷಣ ಸಂಸ್ಥೆಯ 9ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಲವಾರು ರೂಪದ ದಾಸೋಹಗಳು ಚಾಲ್ತಿಯಲ್ಲಿದ್ದು, ಅದರಲ್ಲಿ ಜ್ಞಾನ ದಾಸೋಹವೇ ಅತೀ ಶ್ರೇಷ್ಠವಾದದ್ದು. ಜ್ಞಾನ ಅವ್ಯಕ್ತ ವ್ಯಕ್ತಿಯನ್ನು ಪರಿಪೂರ್ಣ ವ್ಯಕ್ತಿಯನ್ನಾಗಿ ಮಾಡುತ್ತದೆ. ಹೀಗಾಗಿ ಜ್ಞಾನ ದಾಸೋಹ ಎಲ್ಲ ಕಾಲಕ್ಕೂ ಸಲ್ಲುವಂತಹದ್ದಾಗಿದೆ ಎಂದರು.

ಸಂಸ್ಥೆಯ ಸಂಚಾಲಕ ಮದಕರಿ ನಾಯಕ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಸಾಕ್ಷರತಾ ಪ್ರಮಾಣ ಕೇವಲ ಶೇ.51ರಷ್ಟು ಮಾತ್ರ ಇದೆ. ಅದರಲ್ಲಿ ಪರಿಶಿಷ್ಟರ ಪ್ರಮಾಣ ಇನ್ನು ನೆಲಕಚ್ಚಿದೆ. ಬಡತನ ಹಾಗೂ ಅನಕ್ಷರತೆ ನಾಗರಿಕ ಸಮಾಜಕ್ಕೆ ಅಂಟಿದ ಶಾಪ. ಇದರ ಮುಕ್ತಿಗಾಗಿ ನಾವೆಲ್ಲರೂ ಶಿಕ್ಷಣದ ಕಡೆ ಸಾಗಬೇಕು ಎಂದರು.

ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಹಣಮಂತರಾಯ ದೊರೆ, ಸಂಸ್ಥೆಯ ಮುಖ್ಯಸ್ಥ ಆರ್. ಚೆನ್ನಬಸ್ಸು ವಕೀಲರು, ಶಿಕ್ಷಣ ಪ್ರೇಮಿ ನಾರಾಯಣಚಾರ್ಯ ಸಗರ, ಮಲ್ಲಣ್ಣಗೌಡ ಪಾಟೀಲ್ ಕನ್ಯಾಕೋಳೂರು, ರೈತ ಮುಖಂಡ ಹಣಮೇಶ ಕುಲಕರ್ಣಿ ಇದ್ದರು. ಈ ವೇಳೆ ಈಚೆಗೆ ಹೃದಯಘಾತದಿಂದ ನಿಧನರಾದ ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ಭಾವಪೂರ್ಣ ನುಡಿ ನಮನ ಸಲ್ಲಿಸಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.