ನಾಕುತಂತಿ ಕೃತಿಗೆ ಜ್ಞಾನಪೀಠದ ಸುವರ್ಣ ಸಂಭ್ರಮ: 12ರಂದು ‍ವಿಶೇಷ ಉಪನ್ಯಾಸ ಮಾಲೆ

| Published : Jul 09 2025, 12:18 AM IST

ನಾಕುತಂತಿ ಕೃತಿಗೆ ಜ್ಞಾನಪೀಠದ ಸುವರ್ಣ ಸಂಭ್ರಮ: 12ರಂದು ‍ವಿಶೇಷ ಉಪನ್ಯಾಸ ಮಾಲೆ
Share this Article
  • FB
  • TW
  • Linkdin
  • Email

ಸಾರಾಂಶ

22 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಬೇಂದ್ರೆ ಭವನಕ್ಕೆ ನಿರ್ವಹಣೆ ಕೊರತೆ ಉಂಟಾಗಿದೆ. ಬರೋಬ್ಬರಿ 22 ವರ್ಷಗಳಿಂದ ಸಂಪೂರ್ಣ ಕಟ್ಟಡದ ಬಣ್ಣದ ಭಾಗ್ಯ ಸಿಕ್ಕಿಲ್ಲ. ಅನುದಾನ ಕೊರತೆಯಿಂದ ಬಣ್ಣ ಕಾಣದೇ, ಶಿಥಿಲಗೊಂಡಿರುವ ಕಟ್ಟಡ ಸೊರಗಿದೆ.

ಧಾರವಾಡ: ಡಾ. ದ.ರಾ. ಬೇಂದ್ರೆ ಅವರ ನಾಕುತಂತಿ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಬಂದು ಐದು ದಶಕಗಳು ಕಳೆದ ಹಿನ್ನೆಲೆಯಲ್ಲಿ ಸುವರ್ಣ ಸಂಭ್ರಮದ ನಿಮಿತ್ತ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ ಜು. 12ರಂದು ವಿಶೇಷ ಉಪನ್ಯಾಸ ಮಾಲೆ ಆರಂಭಿಸಿದೆ.

ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಟ್ರಸ್ಟ್‌ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ, ಅಂದು ಬೇಂದ್ರೆ ಭವನದಲ್ಲಿ ಬೆಳಗ್ಗೆ 10.30ಕ್ಕೆ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಉಪನ್ಯಾಸ ಮಾಲೆಯನ್ನು ಉದ್ಘಾಟಿಸುವರು ಎಂದರು.

ನಾಕುತಂತಿ ಮತ್ತು ಭಾರತೀಯ ತತ್ವದರ್ಶನಗಳು ಕುರಿತು ಬೆಂಗಳೂರಿನ ವಂದೇ ಮಾತರಂ ಪಾಠಾಶಾಲಾ ಸಂಸ್ಥಾಪಕರು, ಸಾಹಿತಿ ಡಾ. ಜಿ.ಬಿ. ಹರೀಶ್‌ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕಲಬುರ್ಗಿ ಕೇಂದ್ರೀಯ ವಿವಿ ನಿರ್ದೇಶಕ ಪ್ರೊ. ಬಸವರಾಜ ಡೋಣೂರ ಸಂಚಾಲಕತ್ವ ವಹಿಸಲಿದ್ದು, ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯೆ ಡಾ. ಗಿರಿಜಾ ಹಿರೇಮಠ ಭಾಗವಹಿಸುತ್ತಾರೆ. ತಾವು ಅಧ್ಯಕ್ಷತೆ ವಹಿಸಲಿದ್ದು, ಬೇರೆ ಬೇರೆ ಕಾಲೇಜುಗಳ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ ಸದಸ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸೊಲಗಿ, ಸಂಯೋಜಕ ಪ್ರಕಾಶ ಬಾಳಿಕಾಯಿ ಇದ್ದರು.

ಬೇಂದ್ರೆ ಭವನಕ್ಕೆ ಸಿಗದ ಬಣ್ಣದ ಭಾಗ್ಯ: 22 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಬೇಂದ್ರೆ ಭವನಕ್ಕೆ ನಿರ್ವಹಣೆ ಕೊರತೆ ಉಂಟಾಗಿದೆ. ಬರೋಬ್ಬರಿ 22 ವರ್ಷಗಳಿಂದ ಸಂಪೂರ್ಣ ಕಟ್ಟಡದ ಬಣ್ಣದ ಭಾಗ್ಯ ಸಿಕ್ಕಿಲ್ಲ. ಅನುದಾನ ಕೊರತೆಯಿಂದ ಬಣ್ಣ ಕಾಣದೇ, ಶಿಥಿಲಗೊಂಡಿರುವ ಕಟ್ಟಡ ಸೊರಗಿದೆ ಎಂದು ಟ್ರಸ್ಟ್‌ ಅಧ್ಯಕ್ಷ ಡಾ.ಡಿ.ಎಂ. ಹಿರೇಮಠ ಹೇಳಿದರು.

ಬೇಂದ್ರೆ ಭವನವನ್ನು ಸುಸಜ್ಜಿತಗೊಳಿಸಬೇಕು. ಈ ವಿಚಾರವಾಗಿ ಈಗಾಗಲೇ ಹಲವು ಬಾರಿ ಸರ್ಕಾರಕ್ಕೆ ಕೋರಿಕೆ ಸಲ್ಲಿಸಲಾಗಿದೆ. ಆದರೆ, ಸರ್ಕಾರ ಮಾತ್ರ ಸ್ಪಂದಿಸಿಲ್ಲ. ಟ್ರಸ್ಟ್‌ ಕಾರ್ಯದರ್ಶಿಗಳು ₹2 ಕೋಟಿ ವೆಚ್ಚದ ಅಭಿವೃದ್ಧಿ ಪ್ರಸ್ತಾವನೆ ಸಲ್ಲಿಸಿದ್ದು ಇದಕ್ಕೂ ಸರ್ಕಾರದಿಂದ ಪ್ರತಿಕ್ರಿಯೆ ಇಲ್ಲ. ವಾರ್ಷಿಕ ₹9 ಲಕ್ಷದಲ್ಲಿ ಸಿಬ್ಬಂದಿ ಸಂಬಳ, ವಾರ್ಷಿಕ ಪ್ರಶಸ್ತಿ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ನಿರ್ವಹಿಸಬೇಕಿದೆ ಎಂದು ಡಾ. ಡಿ.ಎಂ. ಹಿರೇಮಠ ಬೇಂದ್ರೆ ಭವನದ ಬಗ್ಗೆ ಸರ್ಕಾರದ ನಿರ್ಲಕ್ಷ್ಯವನ್ನು ಬೇಸರದಿಂದ ಹೇಳಿದರು.