ಉದ್ಯೋಗ ಮೇಳ: 1035 ಅಭ್ಯರ್ಥಿಗಳು ನೇಮಕ

| Published : Dec 08 2024, 01:16 AM IST

ಸಾರಾಂಶ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸರ್ಕಾರಿ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಗ್ರಹಣ ಹಿಡಿದಿದೆ. ನೇಮಕಾತಿಗಳೂ ವಿನಾಕಾರಣ ವಿಳಂಬಗೊಳ್ಳುತ್ತಿವೆ.

ಧಾರವಾಡ:

ಇಲ್ಲಿನ ಕೆಎಲ್‌ಇ ಸಂಸ್ಥೆಯ ಮೃತ್ಯುಂಜಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಬೃಹತ್‌ ಉದ್ಯೋಗ ಮೇಳವೂ ಯಶಸ್ವಿಯಾಗಿ ಪೂರ್ಣಗೊಂಡಿದೆ. ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದ 67ಕ್ಕೂ ಅಧಿಕ ಕಂಪನಿ, 2890 ಉದ್ಯೋಗಾಕಾಂಕ್ಷಿಗಳ ಸಂದರ್ಶನ ನಡೆಸಿದವು. ಇದರಲ್ಲಿ 1035 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

ಮೇಳ ಉದ್ಘಾಟಿಸಿದ ಶಾಸಕ ಅರವಿಂದ ಬೆಲ್ಲದ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸರ್ಕಾರಿ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಗ್ರಹಣ ಹಿಡಿದಿದೆ. ನೇಮಕಾತಿಗಳೂ ವಿನಾಕಾರಣ ವಿಳಂಬಗೊಳ್ಳುತ್ತಿವೆ. ಆಯ್ಕೆ ಪರೀಕ್ಷೆ ನಡೆಸುವಲ್ಲೂ ನಿರ್ಲಕ್ಷ್ಯತನ ತೋರುತ್ತಿರುವುದರಿಂದ, ನಡೆದ ಪರೀಕ್ಷೆಗಳಲ್ಲಿಯೂ ಎಡವಟ್ಟುಗಳಾಗಿ, ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ.ಈ ಹಿನ್ನೆಲೆಯಲ್ಲಿ ನಿರುದ್ಯೋಗ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ, ಉತ್ತರ ಕರ್ನಾಟಕದ ಉದ್ಯೋಗಾಕಾಂಕ್ಷಿ ಯುವಜನತೆಗೆ ಪಾರದರ್ಶಕ ಹಾಗೂ ಪಕ್ಷಪಾತವಿಲ್ಲದ ಸೂಕ್ತ ವೇದಿಕೆಯನ್ನು ಸ್ಥಾಪಿಸುವ ನಮ್ಮ ಪ್ರಯತ್ನಕ್ಕೆ ಈ ಬೃಹತ್ ಉದ್ಯೋಗ ಮೇಳ ಮುನ್ನುಡಿಯಾಗಿದೆ.‌ ಸ್ವಾಮಿ ವಿವೇಕಾನಂದರು ಹೇಳಿದಂತೆ, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ, ನಾವು ಯುವ ಸಮುದಾಯವನ್ನು ಸದೃಢಗೊಳಿಸಬೇಕಿದೆ ಎಂದರು.