ಕ್ಷೇತ್ರದ ನಿರುದ್ಯೋಗಿಗಳಿಗೆ ಅಪೂರ್ವ ಅವಕಾಶ ಕಲ್ಪಿಸಿ ವಿದ್ಯಾರ್ಹತೆ ಮತ್ತು ಗುಣಮಟ್ಟಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಲು 97 ಕಂಪನಿಗಳು ಬಂದಿದ್ದು ಯುವ ನಿರುದ್ಯೋಗಿಗಳು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕ ಕೆ.ಎನ್.ರಾಜಣ್ಣ ಕರೆ ನೀಡಿದರು

ಕನ್ನಡಪ್ರಭ ವಾರ್ತೆ ಮಧುಗಿರಿ

ಕ್ಷೇತ್ರದ ನಿರುದ್ಯೋಗಿಗಳಿಗೆ ಅಪೂರ್ವ ಅವಕಾಶ ಕಲ್ಪಿಸಿ ವಿದ್ಯಾರ್ಹತೆ ಮತ್ತು ಗುಣಮಟ್ಟಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಲು 97 ಕಂಪನಿಗಳು ಬಂದಿದ್ದು ಯುವ ನಿರುದ್ಯೋಗಿಗಳು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕ ಕೆ.ಎನ್.ರಾಜಣ್ಣ ಕರೆ ನೀಡಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕೆ.ಎನ್. ರಾಜಣ್ಣ ರವರ 76ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಬುಧವಾರ ಎಂಎಲ್‌ಸಿ ಆರ್. ರಾಜೇಂದ್ರರವರ ನೇತೃತ್ವದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ತುಮಕೂರು, ತಾ. ಆಡಳಿತ, ತಾ. ಪಂಚಾಯಿತಿ, ಪುರಸಭೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ ಹಾಗೂ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ನನ್ನ ಮತ ಕ್ಷೇತ್ರವು ಅತ್ಯಂತ ಹಿಂದುಳಿದ ಬರಪೀಡಿತ ಪ್ರದೇಶವಾಗಿದ್ದು, ಹಲವು ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿತಿದ್ದರೂ ಯಾವ ಕಂಪನಿಯಲ್ಲಿ ಉದ್ಯೋಗ ಖಾಲಿಯಿದೆ ಎಂಬ ಅರಿವಿಲ್ಲದೆ ಅಲೆದಾಡುತ್ತಾರೆ. ಹಾಗಾಗಿ ಪ್ರಸ್ತುತ 97ಕ್ಕೂ ಅಧಿಕ ಕಂಪನಿಗಳು ಬಂದಿದ್ದು, ಈಗಾಗಲೇ ಆನ್ಲೈನ್‌ನಲ್ಲಿ 2 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ನೊಂದಾಯಿಸಿದ್ದು, ಯುವಕರು ಉದ್ಯೋಗ ಗಿಟ್ಟಿಸಿ ಕೊಳ್ಳಲು ಇದು ಸುವರ್ಣಾವಕಾಶ, ಉದ್ಯೋಗ ಹುಡುಕುವ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಉದ್ಯೋಗ ಮೇಳ ಏರ್ಪಡಿಸಿದೆ. ಈ ಮೇಳ ಗ್ರಾಮೀಣ ನಿರುದ್ಯೋಗಿ ಯುವಕ-ಯುವತಿಯರಿಗೆ ವರದಾನ ಎಂದರು.

ತಾಲೂಕಿನಲ್ಲಿ ಶಿಕ್ಷಣ ಮೂಲಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ವಿವಿಧೆಡೆ ಕಾಲೇಜುಗಳು , ಹಾಸ್ಟೆಲ್‌ಗಳನ್ನು ಪ್ರಾರಂಭಿಸಿದ್ದು ಬಡ ವಿದ್ಯಾರ್ಥಿಗಳಿಗೂ ಶಿಕ್ಷಣ ಸಿಗುವಂತೆ ಕ್ರಮ ಕೈಗೊಳ್ಳಲಾಗಿದೆ. ಶಾಲಾ ಮಕ್ಕಳಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಜೊತೆಗೆ ನೋಟು ಪುಸ್ತಕಗಳನ್ನು ವಿತರಿಸುತ್ತಿದ್ದು, ಈ ವರ್ಷದಿಂದ ಅಂಗನವಾಡಿ ಮಕ್ಕಳಿಗೂ ಯುನಿಫಾರ್ಮ್ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದರು.

ತಾಲೂಕಿನ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಬಡವನಹಳ್ಳಿ ಬಳಿ 9.5 ಎಕರೆ ಜಾಗದಲ್ಲಿ ₹74.5 ಕೋಟಿ ವೆಚ್ಚದಲ್ಲಿ ಜಿಟಿಟಿಸಿ (GTTC) ಕಾಲೇಜು ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಇದು ಗ್ರಾಮೀಣ ಭಾಗದ ಯುವಕರಿಗೆ ತಾಂತ್ರಿಕ ಕೌಶಲ್ಯಾಭಿವೃದ್ಧಿ ಪಡೆದು ಉದ್ಯೋಗ ಪಡೆಯಲು ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಇಂಡಸ್ಟ್ರಿಯಲ್ ಏರಿಯಾ ಸ್ಥಾಪನೆ ಮತ್ತು ಗಾರ್ಮೆಂಟ್ಸ್ ತೆರೆದು ಸ್ಥಳೀಯ ಮಟ್ಟದಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಯೋಜನೆ ರೂಪಿಸಲಾಗುತ್ತಿದೆ ಎಂದರು.

ಎತ್ತಿನಹೊಳೆ ಯೋಜನೆಯ ಮೂಲಕ ತಾಲೂಕಿನ 54 ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ. ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿಯೊಂದಿಗೆ ಯುವಜನತೆಗೆ ಉದ್ಯೋಗಾವಕಾಶ ಕಲ್ಪಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು.

ಮುಖಂಡ ಹರ್ಷ ಮಾತನಾಡಿ, ಕ್ಷೇತ್ರದ ಯುವಜನತೆಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಈ ಮೇಳವನ್ನು ಆಯೋಜಿಸಲಾಗಿದೆ ಎಂದರು. ಕಳೆದ 15-20 ವರ್ಷಗಳಲ್ಲಿ ಶಾಸಕ ರಾಜಣ್ಣ ಹಾಗೂ ರಾಜೇಂದ್ರ ಸಾವಿರಾರು ಜನರಿಗೆ ಬ್ಯಾಂಕ್, ಡೈರಿ ಹಾಗೂ ಇತರೆ ಕ್ಷೇತ್ರಗಳಲ್ಲಿ ಉದ್ಯೋಗ ಒದಗಿಸಲು ಸಹಕಾರ ನೀಡಿದ್ದಾರೆ. ಮೇಳದ ಆಯೋಜನೆ ಕುರಿತು ಚರ್ಚೆ ನಡೆಸಿದಾಗ ಶಾಸಕರು ತಕ್ಷಣ ಸ್ಪಂದಿಸಿ, ಹೆಚ್ಚಿನ ಕಂಪನಿಗಳನ್ನು ಸಂಪರ್ಕಿಸಿ ಯುವಕರಿಗೆ ಅನುಕೂಲವಾಗುವಂತೆ ಮೇಳವನ್ನು ಯಶಸ್ವಿಯಾಗಿ ನಡೆಸಲು ಸೂಚನೆ ನೀಡಿದರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ,ಜಿಪಂ ಮಾಜಿ ಅಧ್ಯಕ್ಷೆ ಶಾಂತಲಾ ರಾಜಣ್ಣ, ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ತಹಸೀಲ್ದಾರ್ ಶ್ರೀನಿವಾಸ್, ಕಾಲೇಜು ಪ್ರಾಂಶುಪಾಲ ಪ್ರೊ. ಕುಮಾರ್, ನೌಕರರ ಸಂಘದ ಜಿಲ್ಲಾಧ್ಯಕ್ಷ ರಂಗಪ್ಪ, ಡಿಡಿಪಿಐ ಮಾಧವ ರೆಡ್ಡಿ ಬಿಇಒ ಹನುಮಂತರಾಯಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿಜೆ ರಾಜಣ್ಣ, ಮಾಜಿ ಪುರಸಭಾ ಅಧ್ಯಕ್ಷರುಗಳಾದ ಎಂ ಎನ್ ಕೆ ನಂಜುಂಡ ರಾಜು, ಗಂಗಣ್ಣ, ಲಾಲಪೇಟೆ ಮಂಜುನಾಥ್, ಮುಖಂಡರುಗಳಾದ ಮಲ್ಲಿಕಾರ್ಜುನಯ್ಯ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಆದಿ ನಾರಾಯಣ ರೆಡ್ಡಿ, ಕಲ್ಲಳ್ಳಿ ದೇವರಾಜ್ ತುಮಕೂರು ವಿಶ್ವವಿದ್ಯಾಲಯದ ಶೇಖರ್, ಸಿಂಡಿಕೇಟ್ ಸದಸ್ಯ ಶಿವಣ್ಣ ಇತರರಿದ್ದರು.