ಸೇಡಂ ಉದ್ಯೋಗ ಮೇಳಕ್ಕೆ ಭರ್ಜರಿ ಸ್ಪಂದನೆ
KannadaprabhaNewsNetwork | Published : Oct 15 2023, 12:45 AM IST
ಸೇಡಂ ಉದ್ಯೋಗ ಮೇಳಕ್ಕೆ ಭರ್ಜರಿ ಸ್ಪಂದನೆ
ಸಾರಾಂಶ
457 ಜನರಿಗೆ ಸ್ಥಳದಲ್ಲೆ ನೌಕರಿ, 1,350 ಮಂದಿ ಮುಂದಿನ ಹಂತಕ್ಕೆ ಆಯ್ಕೆ, ಅಭ್ಯರ್ಥಿಗಳಿಗೆ ಸ್ಥಳದಲ್ಲೆ ನೇಮಕಾತಿ ಪತ್ರ ನೀಡಿ ಶುಭ ಕೋರಿದ ಸಚಿವ ಶರಣಪ್ರಕಾಶ ಪಾಟೀಲ
ಕಲಬುರಗಿ: ಸೇಡಂ ಪಟ್ಟಣದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ಕಲಬುರಗಿ ಜಿಲ್ಲಾಡಳಿತದಿಂದ ಆಯೋಜಿಸಿದ ಉದ್ಯೋಗ ಮೇಳಕ್ಕೆ ಉದ್ಯೋಗ ಅಕಾಂಕ್ಷಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಸುಮಾರು 457 ಜನರಿಗೆ ಸ್ಥಳದಲ್ಲಿಯೇ ನೇಮಕಾತಿ ಪತ್ರ ನೀಡಲಾಯಿತು. ಇನ್ನು 1,350 ಜನರು ಮುಂದಿನ ಹಂತದ ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ. ಸರಳ ಸಮಾರಂಭದಲ್ಲಿ ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಉದ್ಯೋಗ ಪಡೆದ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೆ ನೇಮಕಾತಿ ಪತ್ರ ನೀಡಿ ಶುಭ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಉದ್ಯೋಗ ಮೇಳಕ್ಕೆ ಗುರುವಾರ ಸಂಜೆವರೆಗೆ ನೋಂದಣಿ ಮಾಡಿಕೊಂಡಿದ್ದ 5,323 ಜನರ ಪೈಕಿ ಶುಕ್ರವಾರ ಮೇಳದಲ್ಲಿ ಸುಮಾರು 4,700 ಜನ ಭಾಗಿಯಾಗಿದ್ದಾರೆ. ಎರಡನೇ ಸುತ್ತಿನ ಸಂದರ್ಶನಕ್ಕೆ ಆಯ್ಕೆಯಾದವರಿಗೂ ಉದ್ಯೋಗದ ಭರವಸೆ ದೊರೆತಿದೆ. ಒಟ್ಟಾರೆ ಸಂದರ್ಶನಕ್ಕೆ ಹಾಜರಾದವರ ಪೈಕಿ 1800ಕ್ಕೂ ಹೆಚ್ಚು (ಶೇ.40ರಷ್ಟು) ಜನರಿಗೆ ಇಂದಿಲ್ಲಿ ಉದ್ಯೋಗ ಸಿಕ್ಕಿದ್ದು, ತಮಗೆ ಖುಷಿ ತಂದಿದೆ ಎಂದರು. ಇಂದಿಲ್ಲಿ ಕೆಲಸ ಸಿಗದವರು ನಿರಾಶರಾಗಬೇಕಿಲ್ಲ. ಅಂತಹವರಿಗೆ ಕೌಶಲ್ಯಾಭಿವೃದ್ಧಿ ನಿಗಮವು ನಿರಂತರ ಸಂಪರ್ಕದಲ್ಲಿದ್ದು, ಉದ್ಯೋಗ ಅರ್ಹತೆಯ ಕೌಶಲ್ಯ ತರಬೇತಿ ನೀಡಲಿದೆ. ನಿರುದ್ಯೋಗಿಗಳು ಉದ್ಯೋಗ ಅರ್ಹತೆಯ ಕೌಶಲ್ಯ ಪಡೆಯಲು ಕಡ್ಡಾಯವಾಗಿ ಕೌಶಲ್ಯಾಭಿವೃದ್ಧಿ ನಿಗಮದ ಅಂತರ್ಜಾಲದಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. 50 ಸಾವಿರ ಸರ್ಕಾರಿ ಹುದ್ದೆ ಭರ್ತಿ: ನಿರುದ್ಯೋಗ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಮುಂದಿನ ಐದು ವರ್ಷದಲ್ಲಿ ನಮ್ಮ ಸರ್ಕಾರವು ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ 50 ಸಾವಿರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು. ಶುಕ್ರವಾರ ಬೆಳಗ್ಗೆ 9 ಗಂಟೆಯಿಂದಲೆ ನೋಂದಣಿ ಪ್ರಕ್ರಿಯೆ ಶುರುವಾಗಿತ್ತು. ಸೇಡಂ ಪಟ್ಟಣ, ಗ್ರಾಮಾಂತರ ಪ್ರದೇಶ ಹಾಗೂ ಜಿಲ್ಲೆಯ ಇತರೆ ಭಾಗಗಳಿಂದ ನಿರುದ್ಯೋಗಿಗಳ ದಂಡು ಸೇಡಂನತ್ತ ಧಾವಿಸಿತ್ತು. ಯುವಕ-ಯುವತಿಯರು, ಗೃಹಿಣಿಯರು ಉದ್ಯೋಗ ಅರಸಿ ಬಂದಿದ್ದರು. ನೋಂದಣಿ, ಸಂದರ್ಶನ ಕೌಂಟರ್‌ಗಳು ಅಭ್ಯರ್ಥಿಗಳಿಂದ ತುಂಬಿ ತುಳುಕಿದವು. ನೋಂದಣಿಗೆ ಹತ್ತಾರು ಕೌಂಟರ್ ತೆರೆದ ಕಾರಣ ಯಾವುದೇ ಸಮಸ್ಯೆ ಕಾಣಲಿಲ್ಲ. ಅಭ್ಯರ್ಥಿಗಳು ಅಲಲ್ಲಿ ಕುಳಿತು ಅರ್ಜಿ ಭರ್ತಿ ಮಾಡುವ ದೃಶ್ಯ ಸಾಮಾನ್ಯವಾಗಿತ್ತು. ಉದ್ಯೋಗ ಮೇಳ ಅಂಗವಾಗಿ ಕೆಜಿಟಿಟಿಐ, ಜಿಟಿಟಿಸಿ, ಐಟಿಐ ಕೇಂದ್ರಗಳು ಮಳಿಗೆ ತರೆದು ತಮ್ಮ ಕೇಂದ್ರದಲ್ಲಿ ಲಭ್ಯವಿರುವ ಕೋರ್ಸ್ ಬಗ್ಗೆ ಮಾಹಿತಿ ನೀಡಿದರು. ಪ್ರಮುಖವಾಗಿ ಎಲ್ ಆಂಡ್ ಟಿ ಫೈನಾನ್ಸ್, ಮಲಬಾರ್ ಗೋಲ್ಡ್ ಆಂಡ್ ಡೈಮೆಂಡ್ಸ್, ಜೆ.ಎಸ್.ಡಬ್ಲ್ಯೂ ಸ್ಟೀಲ್ ಲಿಮಿಟೆಡ್, ಟ್ರೇಡೆಂಟ್ ಆಟೋಮೊಬೈಲ್ಸ್ ಪ್ರೈವೇಟ್ ಲಿಮಿಟೆಡ್, ಆದಿತ್ಯ ಬಿರ್ಲಾ ಸನ್‍ಲೈಫ್ ಇನ್ಸುರೆನ್ಸ್ ಕಂಪನಿ, ಕೆ.ಬಿ.ಎಲ್ ಸರ್ವಿಸಸ್ ಲಿಮಿಟೆಡ್, ಎಲ್‍ಐಸಿ ಆಫ್ ಇಂಡಿಯಾ, ಮಹೇಂದ್ರ ಆಂಡ್ ಮಹೇಂದ್ರಾ ಎ.ಡಿ.-ಜಹೀರಾಬಾದ್, ಅಲ್ಟಾಟೆಕ್ ಸಿಮೆಂಟ್ ಲಿಮಿಟೆಡ್, ಸೇಡಂ ತಾಲೂಕಿನ ಕೋಡ್ಲಾದ ಶ್ರೀ ಸಿಮೆಂಟ್ ಹಾಗೂ ಲೇಬರ್‍ನೆಟ್ ಸರ್ವಿಸಸ್ ಪ್ರೈವೆಟ್ ಲಿಮಿಟೆಡ್ ಸೇರಿದಂತೆ 110ಕ್ಕೂ ಹೆಚ್ಚಿನ ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು.