ಕನ್ನಡಪ್ರಭ ವಾರ್ತೆ ರಾಮನಗರ
ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಮಾರ್ಚ್ 5ರಂದು ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದು, ವ್ಯಾಪಕ ಪ್ರಚಾರ ನೀಡಿ ಹೆಚ್ಚಿನ ಸಂಖ್ಯೆಯ ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ಭಾಗವಹಿಸಿ ಉದ್ಯೋಗ ಪಡೆದುಕೊಳ್ಳಲು ಸಂಬಂಧಿಸಿದ ಇಲಾಖೆಗಳು ಸಹಕಾರ ನೀಡಬೇಕೆಂದು ಶಾಸಕ ಇಕ್ಬಾಲ್ ಹುಸೇನ್ ನಿರ್ದೇಶನ ನೀಡಿದರು.ನಗರದ ಜಿಪಂ ಮಿನಿ ಸಭಾಂಗಣದಲ್ಲಿ ಉದ್ಯೋಗ ಮೇಳ ಸಂಬಂಧ ಹಮ್ಮಿಕೊಂಡಿದ್ದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಿಕೊಡುವ ನಿಟ್ಟಿನಲ್ಲಿ ಉದ್ಯೋಗ ಮೇಳ ಉತ್ತಮ ವೇದಿಕೆಯಾಗಿದೆ. ಅದರ ಯಶಸ್ಸಿಗೆ ಸಂಬಂಧಿಸಿದ ಇಲಾಖೆಗಳು ಶ್ರಮಿಸಬೇಕು ಎಂದರು.
ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯತ್‌ಗಳ ಕಾರ್ಯನಿರ್ವಹಣಾ ಅಧಿಕಾರಿಗಳು ಪಂಚಾಯತ್ ಮಟ್ಟದಲ್ಲಿ ಆಟೋ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಪ್ರತಿ ಮನೆ ಮನೆಗೂ ಈ ಕುರಿತ ಪೋಸ್ಟರ್ ತಲುಪಿಸುವ ವ್ಯವಸ್ಥೆ ಮಾಡಬೇಕು. ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲೂ ಈ ಕುರಿತಂತೆ ಪ್ರಚಾರ ನೀಡಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ, ನೋಂದಾಯಿಸಿಕೊಳ್ಳುವಂತೆ ಮನವೊಲಿಸಬೇಕು. ಶಿಕ್ಷಣ ಇಲಾಖೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಉದ್ಯೋಗ ಮೇಳದ ಮಾಹಿತಿ ಹಾಗೂ ಪೋಸ್ಟರ್ ತಲುಪಿಸಬೇಕು ಎಂದು ಸೂಚನೆ ನೀಡಿದರು.
ಉದ್ಯೋಗ ಮೇಳಕ್ಕೆ ಈಗಾಗಲೇ ಜಿಲ್ಲೆಯಲ್ಲಿ 171 ಕಂಪನಿಗಳು ನೋಂದಣಿಯಾಗಿವೆ. ಈ ಕಂಪನಿಗಳ ಸಂಖ್ಯೆಯನ್ನು ಹೆಚ್ಚಿಸಲು ಮತ್ತಷ್ಟು ಕ್ರಮ ಕೈಗೊಳ್ಳಲಾಗುತ್ತಿದೆ. ಮೇಳದಲ್ಲಿ ಭಾಗವಹಿಸುವ ಕಂಪನಿಗಳ ಅನುಕೂಲಕ್ಕಾಗಿ ಕಾಲೇಜು ಆವರಣ ಹಾಗೂ ಮೈದಾನದಲ್ಲಿ 200 ಮಳಿಗೆಗಳನ್ನು ತೆರೆಯಲಾಗುವುದು. ಉದ್ಯೋಗಾಕಾಂಕ್ಷಿಗಳ ನೆರವಿಗಾಗಿ ಅಗತ್ಯ ಸಂಖ್ಯೆಯ ಹೆಲ್ಪ್ ಡೆಸ್ಕ್ ಗಳನ್ನು ತೆರೆಯಲಾಗುವುದು. ಈ ಕೆಲಸದಲ್ಲಿ ಆಸಕ್ತಿ ಇರುವವರನ್ನು ಮಾತ್ರ ಅಲ್ಲಿ ನಿಯೋಜಿಸಬೇಕು. ಕೆಲಸ ಕೇಳಿಕೊಂಡು ಬಂದ ಆಕಾಂಕ್ಷಿಗಳಿಗೆ ಉತ್ತಮ ಮಾಹಿತಿ ಒದಗಿಸಬೇಕು. ಅದೇ ರೀತಿ ಶೌಚಾಲಯಗಳು, ಬೇಸಿಗೆ ಕಾಲವಾಗಿರುವುದರಿಂದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಬೇಕು. ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗುವುದು ಎಂದರು.
ರಾಮನಗರ ನಗರ ಸಭೆಯಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ತಿಳಿಸಿದ ಅವರು, ಉದ್ಯೋಗ ಮೇಳ ನಡೆಯುವ ಆವರಣದ ಮಧ್ಯದಲ್ಲಿ ಸಣ್ಣ ವೇದಿಕೆಯೊಂದನ್ನು ನಿರ್ಮಿಸಬೇಕು, ಅಲ್ಲಿ ಉದ್ಯೋಗಾಕಾಂಕ್ಷಿಗಳು ಹಾಗೂ ಕಂಪನಿಯವರು ಅಭಿಪ್ರಾಯಗಳನ್ನು ಹೇಳಿಕೊಳ್ಳಲು ಅನುಕೂಲವಾಗಲಿದೆ, ಆರೋಗ್ಯ ಇಲಾಖೆಯಿಂದ ಸ್ಥಳದಲ್ಲಿ ಎರಡು ಆ್ಯಂಬುಲೆನ್ಸ್ ಗಳ ವ್ಯವಸ್ಥೆ ಮಾಡಬೇಕು. ಸಂಜೆಗೆ ಲೈಟಿಂಗ್ ವ್ಯವಸ್ಥೆ, ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ಆಸನಗಳು ಹಾಗೂ ಟೇಬಲ್‌ಗಳ ವ್ಯವಸ್ಥೆ ಮಾಡಲಾಗುವುದು. ಮೇಳದಲ್ಲಿ ನೇರವಾಗಿ ನೇಮಕ ಮಾಡಿಕೊಳ್ಳಬೇಕೆಂದು ಉದ್ಯೋಗಾಸಕ್ತ ಕಂಪನಿಗಳಿಗೆ ಮನವಿ ಮಾಡಲಾಗಿದೆ. ಜಿಲ್ಲೆಯಲ್ಲಿರುವ ಎಲ್ಲಾ ಕೈಗಾರಿಕೆಗಳು ಈ ಮೇಳದಲ್ಲಿ ಭಾಗವಹಿಸಿ ಸ್ಟಾಲ್ ಹಾಕಬೇಕೆಂದು ಕೋರಲಾಗಿದೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಟರಾಜ್ ಗಾಣಕಲ್ ಮಾತನಾಡಿ, ಉದ್ಯೋಗ ಮೇಳದಲ್ಲಿ ಭಾಗವಹಿಸುವ ಉದ್ಯೋಗಾಕಾಂಕ್ಷಿಗಳನ್ನು ಗ್ರಾಮಮಟ್ಟದಿಂದ ಕರೆತರಲು ಅವಕಾಶವಿದ್ದಲ್ಲಿ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನ್ಮೋಲ್ ಜೈನ್ ಮಾತನಾಡಿ, ಜಿಲ್ಲೆಯಲ್ಲಿ 4,707 ಅಭ್ಯರ್ಥಿಗಳು ಇದೂವರೆಗೂ ಯುವನಿಧಿ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಅವರೆಲ್ಲರೂ ಉದ್ಯೋಗ ಮೇಳದಲ್ಲಿ ಭಾಗವಹಿಸುವಂತೆ ಸಂಬಂಧಪಟ್ಟ ಇಲಾಖೆಯವರು ಸೂಚಿಸಬೇಕು ಎಂದು ಹೇಳಿದರು.
ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಕೆ. ರಾಜು ಮಾತನಾಡಿದರು.ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
-------171 ಕಂಪನಿಗಳ ನೋಂದಣಿಈ ಉದ್ಯೋಗ ಮೇಳದಲ್ಲಿ ಈಗಾಗಲೇ 171 ಕಂಪನಿಗಳು ನೋಂದಾಯಿಸಿಕೊಂಡಿದ್ದು, ಅಂದಾಜು 200 ಕ್ಕೂ ಹೆಚ್ಚಿನ ಪ್ರತಿಷ್ಠಿತ ಉದ್ಯೋಗದಾತ ಕಂಪನಿಗಳು ಭಾಗವಹಿಸಲಿವೆ, 20,000ಕ್ಕೂ ಹೆಚ್ಚು ಉದ್ಯೋಗಗಳು ಲಭ್ಯವಿರುತ್ತವೆ. ಎಲ್ಲಾ ರೀತಿಯ ವಿದ್ಯಾರ್ಹತೆಗೆ ತಕ್ಕಂತೆ ಉತ್ಪಾದನಾ ವಲಯ, ಬ್ಯಾಂಕಿಂಗ್ ಕ್ಷೇತ್ರ, ಮಾರಾಟ ವಲಯ, ಮಾಹಿತಿ ತಂತ್ರಜ್ಞಾನ ಕ್ಷೇತ್ರ, ಗಾರ್ಮೆಂಟ್ಸ್, ಸೇವಾ ಮತ್ತು ಪ್ರವಾಸೋದ್ಯಮಗಳ ಕ್ಷೇತ್ರ, ಹಣಕಾಸು ಮತ್ತು ನಿರ್ವಹಣಾ ಕ್ಷೇತ್ರ ಹಾಗೂ ಇತರೆ ಕ್ಷೇತ್ರಗಳಲ್ಲಿ ಉದ್ಯೋಗಗಳು ಲಭ್ಯವಿದೆ.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಉತ್ತೀರ್ಣ/ಅನುತ್ತೀರ್ಣರಾದವರಿಗೆ 1,221, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪಾಸ್ ಆದವರಿಗೆ 3,118, ಐಟಿಐ 3,482, ಡಿಪ್ಲೊಮಾ (ಮೆಕ್ಯಾನಿಕಲ್/ಎಲೆಕ್ಟ್ರಿಕಲ್) 503, ಡಿಪ್ಲೊಮಾ (ಸೇಪ್ಟಿ) 16, ಐಟಿಐ ಹಾಗೂ ಡಿಪ್ಲೊಮಾ 2,793, ಬಿಸಿಎ, ಎಂಸಿಎ, ಬಿಕಾಂ, ಬಿಎಸ್‌ಸಿ, ಎಂಎಸ್‌ಸಿ 217, ಎಸ್ಸೆಸ್ಸೆಲ್ಸಿಯಿಂದ ಪದವಿವರೆಗೆ 8,200, ಯಾವುದೇ ಪದವಿ ವಿದ್ಯಾರ್ಹತೆಗೆ 7,022, ಬಿಇ (ಮೆಕ್ಯಾನಿಕಲ್/ಎಲೆಕ್ಟ್ರಿಕಲ್) 270, ಬಿಇ (ಕೆಮಿಕಲ್) 10, ಬಿ-ಟೆಕ್/ಎಂಬಿಎ 01, ಇತರೆ 2,963, ಡೈರಿ ಟೆಕ್ನಾಲಜಿ 4, ಡಿಪ್ಲೊಮಾ ಇನ್ ಪ್ರಿಂಟಿಂಗ್ 26, ಎಂಎಸ್‌ಸಿ ಕೆಮಿಸ್ಟ್ 20 ಉದ್ಯೋಗಾವಕಾಶಗಳಿವೆ.-----
ಅಭ್ಯರ್ಥಿಗಳ ನೋಂದಣಿ ಹೇಗೆ ?ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡುತ್ತಿದ್ದು ಯಾವುದೇ ವಿದ್ಯಾರ್ಹತೆಯ 18 ವರ್ಷ ಮೇಲ್ಪಟ್ಟ ಪುರುಷ/ಮಹಿಳಾ ಅಭ್ಯರ್ಥಿಗಳು ಭಾಗವಹಿಸಿ ಸಂದರ್ಶನ ನೀಡಿ ಉದ್ಯೋಗ ಪಡೆದುಕೊಳ್ಳಬಹುದು. https://docs.google.com/forms/d/e/1FAIpQLSc07MZrMxk3jOe8ggmCSRJe2b67VIjqDe3L05tB8I1OS14Gg/viewform ಗೂಗಲ್ ಫಾರಂ ಲಿಂಕ್ ಬಳಸಿ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳುವುದು. ನೋಂದಣಿ ಮಾಡದವರೂ ಸಹ ಮೇಳದ ದಿನದಂದು ನೇರವಾಗಿ ಹಾಜರಾಗಿ ಸಂದರ್ಶನ ನೀಡಿ ಉದ್ಯೋಗ ಪಡೆದುಕೊಳ್ಳಬಹುದಾಗಿದೆ.