ಸಾರಾಂಶ
ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಆಯೋಜನೆ । 35ಕ್ಕೂ ಹೆಚ್ಚು ಕಂಪನಿಗಳು ಭಾಗಿ । ಜಿಪಂ ಸಿಇಒ ಮಾಹಿತಿಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮಾರ್ಚ್ 1ರಂದು ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ನಡೆಯು ಬೃಹತ್ ಉದ್ಯೋಗ ಮೇಳದಲ್ಲಿ 35ಕ್ಕೂ ಹೆಚ್ಚು ವಿವಿಧ ಕಂಪನಿಗಳು ಆಗಮಿಸಲಿವೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಸೋಮಶೇಖರ್ ತಿಳಿಸಿದರು.ಬೃಹತ್ ಉದ್ಯೋಗ ಮೇಳ ಆಯೋಜನೆ ಸಂಬಂಧ ಜಿಲ್ಲಾ ಪಂಚಾಯತಿಯ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಬಹಳಷ್ಟು ಅಭ್ಯರ್ಥಿಗಳಿಗೆ ಉದ್ಯೋಗ ದೊರಕುವಂತಾಗಬೇಕು. ಈ ನಿಟ್ಟಿನಲ್ಲಿ ಸೂಕ್ತ ಸಿದ್ಧತೆ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೃಹತ್ ಉದ್ಯೋಗ ಮೇಳ ಆಯೋಜನೆಗೆ ಸಂಬಂದಿಸಿದಂತೆ ಈಗಾಗಲೆ ಜಿಲ್ಲಾ ಮಟ್ಟದಲ್ಲಿ ಮೊದಲ ಹಂತದಲ್ಲಿ ಜಿಲ್ಲಾಧಿಕಾರಿಗಳು ಪೂರ್ವಸಿದ್ಧತಾ ಸಭೆ ಕೈಗೊಂಡು, ಸಲಹೆ ಸೂಚನೆಗಳನ್ನು ನೀಡಿದ್ದಾರೆ, ಅಲ್ಲದೆ ಉದ್ಯೋಗ ಮೇಳವನ್ನು ಯಶಸ್ವಿಗೆ ಒಟ್ಟು 07 ಉಪಸಮಿತಿಗಳನ್ನು ಕೂಡ ರಚಿಸಿದ್ದಾರೆ ಎಂದರು.ಚಿತ್ರದುರ್ಗ ಜಿಲ್ಲೆಯಲ್ಲಿ ಉನ್ನತ ವ್ಯಾಸಂಗ ಮಾಡಿದವರ ಸಂಖ್ಯೆ ಬಹಳಷ್ಟಿದ್ದು, ಇಂತಹವರಿಗೆ ಉದ್ಯೋಗ ದೊರಕಿಸಿಕೊಟ್ಟಲ್ಲಿ, ಅವರು ತಮ್ಮ ಭವಿಷ್ಯದ ಬದುಕನ್ನು ಕಟ್ಟಿಕೊಂಡು, ಸಮಾಜಕ್ಕೆ ಹಾಗೂ ದೇಶಕ್ಕೆ ತಮ್ಮ ಕೊಡುಗೆ ನೀಡುತ್ತಾರೆ. ಹೀಗಾಗಿ ಉದ್ಯೋಗ ಮೇಳವ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಆಸಕ್ತಿ ವಹಿಸಿ, ಯಶಸ್ವಿಯಾಗಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ದೊರಕಿಸುವ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು.
ಪ್ರತಿಯೊಂದು ಗ್ರಾಮ ಪಂಚಾಯಿತಿ, ತಾಲೂಕು ಕೇಂದ್ರಗಳಲ್ಲಿ, ನಗರ, ಸ್ಥಳೀಯ ಸಂಸ್ಥೆಗಳ ಕಚೇರಿ ಆವರಣದಲ್ಲಿ ಉದ್ಯೋಗ ಮೇಳ ಆಯೋಜನೆ ಕುರಿತಂತೆ ಫ್ಲೆಕ್ಸ್ ಬೋರ್ಡ್ ಅಳವಡಿಸಿ ಪ್ರಚಾರ ನೀಡಬೇಕು. ಗ್ರಾಮ ಪಂಚಾಯತಿಗಳು, ನಗರ, ಸ್ಥಳೀಯ ಸಂಸ್ಥೆಗಳು ಕಸ ವಿಲೇವಾರಿ ವಾಹನದಲ್ಲಿನ ಧ್ವನಿವರ್ಧಕಗಳ ಮೂಲಕ ಜಿಂಗಲ್ಸ್‍ಗಳನ್ನು ಹಾಕಿ ಪ್ರಚುರಪಡಿಸಬೇಕು, ಕಾಲೇಜುಗಳ ಮುಖ್ಯಸ್ಥರು ತಮ್ಮ ವಿದ್ಯಾರ್ಥಿಗಳೊಂದಿಗಿನ ವಾಟ್ಸಾಪ್ ಗ್ರೂಪ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳ ಮೂಲಕ ಮಾಹಿತಿ ಹಂಚಿಕೆ ಮಾಡಬೇಕು ಎಂದು ಸೂಚನೆ ನೀಡಿದರು.ಉದ್ಯೋಗ ಮೇಳದಲ್ಲಿ ಪಾಲ್ಗೊಂಡು, ಅಭ್ಯರ್ಥಿಗಳಿಗೆ ಉದ್ಯೋಗ ನೀಡಲು ಈಗಾಗಲೆ ಸುಮಾರು 35ಕ್ಕೂ ಹೆಚ್ಚು ಉತ್ತಮ ಕಂಪನಿಗಳು ಆಸಕ್ತಿ ವಹಿಸಿ, ತಮ್ಮ ಸಹಮತಿ ವ್ಯಕ್ತಪಡಿಸಿವೆ. ಇನ್ನೂ ಹೆಚ್ಚಿನ ಕಂಪನಿಗಳು ಉದ್ಯೋಗ ಮೇಳಕ್ಕೆ ಆಗಮಿಸುವಂತಾಗಲು ಕೈಗಾರಿಕಾ ಇಲಾಖೆ, ಜಿಟಿಟಿಸಿ, ಕೌಶಲ್ಯಾಭಿವೃದ್ಧಿ ಇಲಾಖೆಗಳು ಶ್ರಮಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ ಪದವಿಧರರು, ಡಿಪ್ಲೋಮಾ ವ್ಯಾಸಂಗ ಮಾಡಿರುವ 4,300 ಅಭ್ಯರ್ಥಿಗಳು ನಿರುದ್ಯೋಗ ಭತ್ಯೆಯನ್ನು ಪಡೆಯುತ್ತಿದ್ದು, ಈ ಎಲ್ಲ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವಂತೆ ಉದ್ಯೋಗಾಧಿಕಾರಿಗಳು ಹಾಗೂ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು, ಅಭ್ಯರ್ಥಿಗಳಿಗೆ ಸಂದೇಶ ತಲುಪಿಸುವ ಕಾರ್ಯ ಕೈಗೊಳ್ಳಬೇಕು ಹಾಗೂ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕೈಗಾರಿಕೆಗಳನ್ನು ಸಂಪರ್ಕಿಸಿ, ಖಾಲಿ ಇರುವ ಹುದ್ದೆಗಳ ಸಂಖ್ಯೆ, ಅರ್ಹತಾ ಮಾನದಂಡಗಳ ವಿವರಣೆ ಪಡೆದು, ಇದಕ್ಕೆ ಅನುಗುಣವಾಗಿ ಮಾಹಿತಿ ಪ್ರಚುರಪಡಿಸಬೇಕು. ಪದವಿ ಕಾಲೇಜುಗಳು, ತಾಂತ್ರಿಕ ಶಿಕ್ಷಣ ಕಾಲೇಜುಗಳ ಮುಖ್ಯಸ್ಥರು, ಪ್ಲೇಸ್‍ಮೆಂಟ್ ಅಧಿಕಾರಿಗಳ ಮೂಲಕ ಎಲ್ಲ ಅರ್ಹ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕು. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳ ನೋಂದಣಿಗಾಗಿ ಗೂಗಲ್ ಫಾರಂ ಸಿದ್ಧಪಡಿಸಿ, ಸರಳವಾಗಿ ಜಿಲ್ಲೆಯ ಅಧಿಕೃತ ವೈಬ್‍ಸೈಟ್ ಅಥವಾ ಇಲಾಖಾ ವೆಬ್‍ಸೈಟ್ ಮೂಲಕ ನೋಂದಣಿ ಹಾಗೂ ಪ್ರಚಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.ಉದ್ಯೋಗ ಮೇಳದಲ್ಲಿ ಸಾಕಷ್ಟು ನೋಂದಣಿ ಕೌಂಟರ್ ಗಳನ್ನು ಸ್ಥಾಪಿಸಿ, ಅಭ್ಯರ್ಥಿಗಳಿಗೆ ಗೊಂದಲಕ್ಕೆ ಅವಕಾಶ ಇಲ್ಲದಂತೆ, ಮಾಹಿತಿ ನೀಡಲು ಸೂಕ್ತ ಸಹಾಯಕೇಂದ್ರ ಸ್ಥಾಪಿಸಬೇಕು. ವೇದಿಕೆ ಬಳಿ ಮುಂಜಾಗ್ರತಾ ಕ್ರಮವಾಗಿ ಸುಸಜ್ಜಿತ ಆಂಬುಲೆನ್ಸ್, ವೈದ್ಯರ ನಿಯೋಜನೆ, ಅಗ್ನಿಶಾಮಕ ವಾಹನ ಇರುವಂತೆ ನೋಡಿಕೊಳ್ಳಬೇಕು. ಸೂಕ್ತ ರೀತಿಯಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸಿಇಒ ಸೋಮಶೇಖರ್ ಸೂಚನೆ ನೀಡಿದರು.
ಉದ್ಯೋಗ ಮೇಳದ ಸಂಪೂರ್ಣ ಮೇಲುಸ್ತುವಾರಿ ಹೊಣೆಯನ್ನು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್ ಅವರಿಗೆ ವಹಿಸಿ ಜಿಲ್ಲಾಧಿಕಾರಿಗಳು ಈಗಾಗಲೆ ಆದೇಶ ಹೊರಡಿಸಿದ್ದು, ಇವರು ವಿವಿಧ ಉಪಸಮಿತಿಗಳೊಂದಿಗೆ ಸಮನ್ವಯ ಮಾಡಿಕೊಂಡು, ಯಾವುದೇ ಗೊಂದಲಗಳಿಲ್ಲದೆ, ಉದ್ಯೋಗಮೇಳವನ್ನು ಸುಗಮವಾಗಿ ನಡೆಸಲು ಮುಂದಾಗಬೇಕು ಎಂದರು.ಈ ಸಂದರ್ಭದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಗಾಯತ್ರಿ, ಡಿವೈಎಸ್‍ಪಿ ದಿನಕರ್, ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿ ವೇಮಣ್ಣ, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂಧನ್ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.