ಸಾರಾಂಶ
ಜಿಲ್ಲಾ ಉದ್ಯೋಗ ಮೇಳ ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಿದ ಶಾಸಕ ರುದ್ರಪ್ಪ ಲಮಾಣಿಕನ್ನಡಪ್ರಭ ವಾರ್ತೆ ಹಾವೇರಿ
ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಉದ್ಯೋಗ ಮೇಳ ಮಾ.೩ರಂದು ನಗರದ ಶ್ರೀ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದಲ್ಲಿ ಜರುಗಲಿದೆ. ಉದ್ಯೋಗ ಮೇಳದ ಪ್ರಚಾರ ಸಾಮಗ್ರಿಗಳನ್ನು ವಿಧಾನಸಭಾ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಬಿಡುಗಡೆಗೊಳಿಸಿದರು.ಭಾನುವಾರ ಬೆಳಗ್ಗೆ ೯.೩೦ಕ್ಕೆ ಜಿಲ್ಲಾ ಮಟ್ಟದ ಉದ್ಯೋಗ ಮೇಳದ ಉದ್ಘಾಟನೆ ಜರುಗಲಿದೆ. ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದು, ಸಚಿವ ಪ್ರಹ್ಲಾದ ಜೋಶಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಉದ್ಘಾಟನೆ ನೆರವೇರಿಸುವರು.
ವಿಧಾನಸಭಾ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ವಾಣಿಜ್ಯೋದ್ಯಮ ಮಂಡಳಿ ಅಧ್ಯಕ್ಷ ರವಿ ಮೆಣಸಿನಕಾಯಿ, ಜಿಲ್ಲಾ ಕೈಗಾರಿಕಾ ಸಂಸ್ಥೆಗಳ ಅಧ್ಯಕ್ಷ ರಮೇಶ ಬಳ್ಳಾರಿ, ಜಿಲ್ಲಾ ವಾಣಿಜ್ಯೋದ್ಯಮ ಮಂಡಳಿ ಕಾರ್ಯದರ್ಶಿ ಮಲ್ಲಿಕಾರ್ಜುನ ಹಂದ್ರಾಳ, ರೋಟರಿ ಕ್ಲಬ್ ಅಧ್ಯಕ್ಷ ಸುಜಿತ್ ಜೈನ್, ಹಾವೇರಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಅಜಿತ ಮಾಗಾವಿ, ಎಸ್.ಕೆ.ಡಿ.ಆರ್.ಡಿ.ಸಿ. ಬಿಸಿ ಟ್ರಸ್ಟ್ ನಿರ್ದೇಶಕ ನಾಗರಾಜ ಶೆಟ್ಟಿ, ರೆಡ್ ಕ್ರಾಸ್ ಸೊಸೈಟಿ ಕಾರ್ಯದರ್ಶಿ ರವಿ ಹಿಂಚಿಗೇರಿ ಹಾಗೂ ಮಹಿಳಾ ಸ್ವ ಸಹಾಯ ಕ್ಷೇತ್ರ ಮಟ್ಟದ ಒಕ್ಕೂಟಗಳ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಲಿದ್ದಾರೆ.೨೦ಕ್ಕೂ ಅಧಿಕ ಉದ್ಯೋಗದಾತ ಕಂಪನಿಗಳು ಭಾಗಿ:
ಜಿಲ್ಲೆಯ ನಿರುದ್ಯೋಗಿ ಯುವ ಸಮೂಹಕ್ಕೆ ಉದ್ಯೋಗ ಒದಗಿಸಲು ಅನುಕೂಲವಾಗುವಂತೆ ಮಾ.೩ರಂದು ಜಿಲ್ಲಾ ಉದ್ಯೋಗ ಮೇಳವನ್ನು ಹಾವೇರಿ ನಗರದ ಶಿವಲಿಂಗೇಶ್ವರ ಮಹಿಳಾ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ. ೨೫ರಿಂದ ೩೦ ಉದ್ಯೋಗದಾತ ಕಂಪನಿಗಳು ಭಾಗವಹಿಸಲಿವೆ ಎಂದು ಶಾಸಕರು ಹಾಗೂ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಛೇಂಬರ್ ಆಫ್ ಕಾಮರ್ಸ, ಕೈಗಾರಿಕಾ ಸಂಘ ಸಂಸ್ಥೆಗಳ ಸಂಘ ಒಳಗೊಂಡಂತೆ ಹಲವು ಸಂಘ-ಸಂಸ್ಥೆಗಳು ಸಹಯೋಗ ನೀಡಿವೆ. ಅಭ್ಯರ್ಥಿಗಳ ನೋಂದಣಿಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಉದ್ಯೋಗದಾತರು ಹಾಗೂ ಉದ್ಯೋಗಾಕಾಂಕ್ಷಿಗಳ ನೋಂದಣಿಗಾಗಿ ಪ್ರತ್ಯೇಕ ಅಂತರ್ಜಾಲ https://haverijobfair2024.com ಸೃಷ್ಟಿಸಲಾಗಿದೆ. ವಿವಿಧ ಸಂಸ್ಥೆಗಳಲ್ಲಿ ಖಾಲಿ ಇರುವ ಅಂದಾಜು ಎರಡು ಸಾವಿರ ಉದ್ಯೋಗಿಗಳ ಬೇಡಿಕೆ ಸಲ್ಲಿಸಿದ್ದು, ಈಗಾಗಲೇ ಉದ್ಯೋಗ ಮೇಳದ ಕುರಿತು ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ ಎಂದರು.ಉದ್ಯೋಗ ಮೇಳದಲ್ಲಿ ಹಾಸನದ ಸ್ಥಿತ ಉತ್ಪನ್ನಗಳ ಬಹುರಾಷ್ಟ್ರೀಯ ಕಂಪನಿಗೆ ನಾನ್ ಮ್ಯಾಟ್ರಿಕ್, ಮ್ಯಾಟ್ರಿಕೋತ್ತರ ಅಭ್ಯರ್ಥಿಗಳು ಹಾಗೂ ಟೆಲಿ ಮಾರ್ಕೆಟಿಂಗ್ ಕಚೇರಿ ಆಧಾರಿತ ಕೆಲಸಕ್ಕೆ ಕನ್ನಡ ಮತ್ತು ಹಿಂದಿ ಮಾತನಾಡುವ ಅಭ್ಯರ್ಥಿಗಳು ಬೇಕಾಗಿದ್ದಾರೆ ಎಂದರು.
ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ರೋಟರಿ ಕ್ಲಬ್‌ನ ಎಸ್.ಎ. ವಜ್ರಕುಮಾರ, ಕೌಶಲ್ಯಾಧಿಕಾರಿ ಹುಲಿರಾಜ, ಅಭಿಯಾನ ವ್ಯವಸ್ಥಾಪಕ ಸಂಜೀವಕುಮಾರ ಇತರರು ಉಪಸ್ಥಿತರಿದ್ದರು.