ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಸ್ಥಳೀಯ ವೀ.ವಿ.ಸಂಘದ ಶ್ರೀ ಖಾಸ್ಗತೇಶ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಫೆ.೩ ರಂದು ಆಯೋಜಿಸಲಾಗಿರುವ ಉದ್ಯೋಗ ಮೇಳದಲ್ಲಿ ೧೦ ಸಾವಿರಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷೀಗಳಿಗೆ ಉದ್ಯೋಗ ಒದಗಿಬರಲಿದ್ದು ಉದ್ಯೋಗ ಬಯಸುವ ಎಲ್ಲ ವಿದ್ಯಾರ್ಥಿಗಳು ಈ ಮೇಳದಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಬೇಕು ಎಂದು ವೀ.ವಿ.ಸಂಘದ ಅಧ್ಯಕ್ಷ ವಿ.ಸಿ.ಹಿರೇಮಠ(ಹಂಪಿಮುತ್ಯಾ), ಮಹಾ ವಿದ್ಯಾಲಯದ ಪ್ರಾಚಾರ್ಯ ಆರ್.ವಿ.ಜಾಲವಾದಿ ಹೇಳಿದರು.ವೀ.ವಿ.ಸಂಘದ ಸಭಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಡೆಯಲಿರುವ ಈ ಉದ್ಯೋಗ ಮೇಳದಲ್ಲಿ ೨೦ಕ್ಕಿಂತ ಹೆಚ್ಚು ಕಂಪನಿಗಳು ಇದರಲ್ಲಿ ಭಾಗವಹಿಸಿ ಉದ್ಯೋಗಕಾಂಕ್ಷಿಗಳಿಗೆ ಉದ್ಯೋಗ ಕಲ್ಪಿಸಲಿದ್ದಾರೆ. ಉದ್ಯೋಗ ಮೇಳದಲ್ಲಿ ತಾಳಿಕೋಟೆ ಮತ್ತು ಸುತ್ತ-ಮುತ್ತಲಿನ ಅಲ್ಲದೇ ವಿಜಯಪುರ, ಅನ್ಯ ಜಿಲ್ಲೆಗಳಾದ ಬಾಗಲಕೋಟೆ, ಯಾದಗಿರಿ, ಕಲಬುರಗಿ, ರಾಯಚೂರು ಮುಂತಾದ ಜಿಲ್ಲೆಗಳ ಉದ್ಯೋಗಾಕಾಂಕ್ಷಿಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಈ ಉದ್ಯೋಗ ಮೇಳಕ್ಕೆ ಸಂಬಂದಿಸಿ ಭಾಗವಹಿಸಲಿರುವ ೨೦ಕ್ಕೂ ಹೆಚ್ಚು ಕಂಪನಿಗಳಿಗೆ ಸ್ಟಾಲ್‌ಗಳ ನಿರ್ಮಾಣಕ್ಕೆ ಮಹಾವಿದ್ಯಾಲಯದ ಪ್ರತ್ಯೇಕ ಕೊಠಡಿಗಳನ್ನು ನೀಡಲಾಗಿದೆ. ಈ ಮೇಳದ ಯಶಸ್ವಿಗೆ ಸಂಬಂಧಿಸಿ ಎಲ್ಲ ರೀತಿಯಿಂದಲೂ ತಯಾರಿ ಮಾಡಿಕೊಳ್ಳಲಾಗಿದೆ. ಉದ್ಯೋಗಮೇಳದಲ್ಲಿ ಕೇವಲ ಶಿಕ್ಷಣ ಕಲಿತ ವಿದ್ಯಾರ್ಥಿಗಳಲ್ಲದೇ ಅನಕ್ಷರಸ್ಥರಿಗೆ ಉದ್ಯೋಗ ಒದಗಿಸಲು ಅವಕಾಶ ಸಿಗುತ್ತಿರುವುದು ಇದೇ ಮೊದಲಾಗಿದೆ. ಉದ್ಯೋಗಮೇಳದಲ್ಲಿ ಎಲ್ಲರೂ ತಮ್ಮ ಸ್ವವಿವರದ ದಾಖಲೆಗಳೊಂದಿಗೆ ಭಾಗವಹಿಸುವುದರೊಂದಿಗೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಘದ ಅಧ್ಯಕ್ಷ ವಿ.ಸಿ.ಹಿರೇಮಠ ಮನವಿ ಮಾಡಿದರು.ಉದ್ಯೋಗ ಮೇಳದ ಉದ್ಘಾಟನೆಯನ್ನು ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಧಾರವಾಡದ ವಿಕಾಸ ಕೇರೇರ ಅಕಾಡೆಮಿಯ ಸಂಸ್ಥಾಪಕ ನಿರ್ದೇಶಕ ಅಮೀದ್ ಮುಜಾವರ, ವೀ.ವಿ.ಸಂಘದ ಉಪಾಧ್ಯಕ್ಷ ಬಿ.ಎನ್.ಹಿಪ್ಪರಗಿ, ಕಾರ್ಯದರ್ಶಿ ಎಂ.ಎಸ್.ಸರಶೆಟ್ಟಿ, ಸಹ ಕಾರ್ಯದರ್ಶಿ ಕೆ.ಎಸ್.ಮುರಾಳ, ಪ್ರಾಚಾರ್ಯ ಆರ್.ವಿ.ಜಾಲವಾದಿ ಹಾಗೂ ಸ್ನೇಹಾ ನಾವದಗಿ, ರಮೇಶ ಜಾಧವ ಆಗಮಿಸಲಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ವಿ.ಸಿ.ಹಿರೇಮಠ ವಹಿಸಲಿದ್ದಾರೆ.
ಈ ಸಮಯದಲ್ಲಿ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಚಾರ್ಯ ರಮೇಶ ಭಂಟನೂರ ಹಾಗೂ ವಿವಿಧ ಕಂಪನಿಗಳ ಮುಖ್ಯಸ್ಥರು ಉಪಸ್ಥಿತರಿದ್ದರು.