ಬಯಲು ಸೀಮೆಯ ಬೆಂಗಾಡಿನಲ್ಲಿ ಉದ್ಯೋಗ ಪರ್ವ ಆರಂಭ

| Published : Jun 08 2024, 12:34 AM IST

ಸಾರಾಂಶ

ಚಳ್ಳಕೆರೆ ನಗರದ ಜಿಟಿಟಿಸಿ ಕೇಂದ್ರದ ಸಭಾಂಗಣದಲ್ಲಿ ಕಂಪನಿಗಳಲ್ಲಿ ಉದ್ಯೋಗ ಪಡೆದ 68 ವಿದ್ಯಾರ್ಥಿಗಳಿಗೆ ಶಾಸಕ ಟಿ. ರಘುಮೂರ್ತಿ ಆದೇಶ ಪತ್ರ ನೀಡಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ರಾಜ್ಯದ ಮಧ್ಯ ಭಾಗದಲ್ಲಿರುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಹಿಂದುಳಿದ ಪ್ರದೇಶವಾಗಿದ್ದು, ಈ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಭಿವೃದ್ಧಿ ಜೊತೆಗೆ ಉದ್ಯೋಗ ಪಡಯುವುದು ಒಂದು ಸವಾಲಾಗಿದೆ, ಆದ್ದರಿಂದ ಜಿಟಿಟಿಸಿ ಕೇಂದ್ರ ಆರಂಭಿಸಿ ತರಬೇತಿ ನೀಡುವ ಮೂಲಕ ಉದ್ಯೋಗ ಒದಗಿಸುವ ಕಾರ್ಯ ನಡೆಯುತ್ತಿದೆ ಎಂದು ಶಾಸಕ, ಸಣ್ಣ ಕೈಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ. ರಘುಮೂರ್ತಿ ತಿಳಿಸಿದರು.

ಶುಕ್ರವಾರ ಬಳ್ಳಾರಿ ರಸ್ತೆಯಲ್ಲಿರುವ ಜಿಟಿಟಿಸಿ ಕೇಂದ್ರದ ಸಭಾಂಗಣದಲ್ಲಿ ಕಳೆದ ಮೂರು ವರ್ಷದ ಅವಧಿಯಲ್ಲಿ ತರಬೇತಿ ಪಡೆದು ರಾಜ್ಯದ ವಿವಿಧ ಕಂಪನಿಗಳಲ್ಲಿ ಉದ್ಯೋಗ ಪಡೆದ 68 ವಿದ್ಯಾರ್ಥಿಗಳಿಗೆ ಆದೇಶ ಪತ್ರ ನೀಡುವ ಹಾಗೂ ಪೋಷಕರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಜಿಟಿಟಿಸಿಯಲ್ಲಿ ತರಬೇತಿ ಪಡೆದ ನೂರಾರು ವಿದ್ಯಾರ್ಥಿಗಳು ಉದ್ಯೋಗ ಪಡೆಯುವ ಜೊತೆಗೆ ತಮ್ಮ ಬದುಕನ್ನು ಸಹ ರೂಪಿಸಿಕೊಳ್ಳುವತ್ತ ಹೆಜ್ಜೆ ಇಟ್ಟಿರುವುದು ಸಂತಸದ ವಿಷಯ.

ಕಳೆದ 2013-18 ರ ಅವಧಿಯಲ್ಲಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಜಿಟಿಟಿಸಿ ಕೇಂದ್ರ ಆರಂಭಕ್ಕೆ ಅನುಮತಿ ಪಡೆದು 2021ರಲ್ಲಿ ಕಾಲೇಜು ಕಾರ್ಯಾರಂಭ ಮಾಡಲಾಯಿತು. ಪ್ರಾರಂಭದಿಂದಲೇ ಜಿಟಿಟಿಸಿ ಕೇಂದ್ರ ಕೌಶಲ್ಯಾಭಿವೃದ್ಧಿ ಅಂಶಗಳನ್ನು ಹೊಂದಿದ್ದು, ಕಳೆದ ಸುಮಾರು ಮೂರು ವರ್ಷದ ಅವಧಿಯಲ್ಲಿ ಈ ಪ್ರಕ್ರಿಯೆ ನಿರಂತರ ಮುಂದುವರೆದಿದೆ. ವಿಶೇಷವಾಗಿ ಕಾಲೇಜಿನ ಪ್ರಾಂಶುಪಾಲ ಜಿ.ಆರ್.ತಿಪ್ಪೇಸ್ವಾಮಿ ಹಾಗೂ ಸಿಬ್ಬಂದಿ ವರ್ಗ ಶಿಸ್ತುಬದ್ಧ ಸಂಸ್ಕಾರದ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಭವಿಷ್ಯದ ಬದುಕನ್ನು ಉಜ್ವಲಗೊಳಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಪ್ರಾಂಶುಪಾಲ ತಿಪ್ಪೇಸ್ವಾಮಿ ಮಾತನಾಡಿ ಬಯಲು ಸೀಮೆಯ ಬೆಂಗಾಡಿನಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವ್ಯಾಪ್ತಿಯ ಸರ್ಕಾರಿ ಉಪಕರಣ ಮತ್ತು ತರಬೇತಿ ಕಾರ್ಯಗಾರ ಈ ಭಾಗದಲ್ಲಿ ಎಲ್ಲಾ ಸೌಲಭ್ಯಗಳೊಂದಿಗೆ ಆರಂಭವಾಗಲು ಭಗೀರಥ ಪ್ರಯತ್ನ ನಡೆಸಿದ ಶಾಸಕ ಟಿ.ರಘುಮೂರ್ತಿಯರೇ ಪ್ರಮುಖ ಕಾರಣಕರ್ತರು.

ಪ್ರಾರಂಭದಲ್ಲಿ ಕೇವಲ ಎರಡು ವಿಷಯಕ್ಕೆ ಮಾತ್ರ ತರಬೇತಿ ನೀಡಲು ಅನುಮತಿ ನೀಡಿದ್ದು, ಶಾಸಕರ ಪ್ರಯತ್ನದಿಂದ ನಾಲ್ಕು ಕೋರ್ಸ್‌ಗಳಿಗೆ ಅನುಮತಿ ದೊರಕಿದೆ. 240 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ದಾಖಲಾಗಲು ಅವಕಾಶ ದೊರಕಿದೆ. ಬಳ್ಳಾರಿ, ಶಿವಮೊಗ್ಗ, ಚಿತ್ರದುರ್ಗ ಮುಂತಾದ ಜಿಲ್ಲೆಗಳ ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆದಿದ್ದಾರೆ ಎಂದರು.

ಪೋಷಕರ ಪರವಾಗಿ ಜೆ.ಮಂಜುನಾಥ, ಕ್ಲಾಸಿಕ್ ಚಂದ್ರಶೇಖರ್ ಮಾತನಾಡಿ, ಚಳ್ಳಕೆರೆಯಲ್ಲಿ ಕೈಗಾರಿಕಾ ಪ್ರದೇಶವನ್ನು ಸ್ಥಾಪನೆ ಮಾಡಿದ್ದಲ್ಲಿ ಉದ್ಯೋಗ ಪಡೆಯದ ವಿದ್ಯಾರ್ಥಿಗಳಿಗೆ ಸ್ವಯಂ ಉದ್ಯೋಗ ಪಡೆಯಲು ಸಹಾಯಕವಾಗುತ್ತದೆ ಎಂದರು. ಇದಕ್ಕೆ ಸ್ಪಂದಿಸಿದ ಶಾಸಕರು ಈಗಾಗಲೇ ದೊಡ್ಡ ಉಳ್ಳಾರ್ತಿ ವ್ಯಾಪ್ತಿಯಲ್ಲಿ 150 ಎಕರೆ ಪ್ರದೇಶ ಹಾಗೂ ಕುದಾಪುರ ಬಳಿ 50 ಎಕರೆ ಪ್ರದೇಶದಲ್ಲಿ ಸಣ್ಣಕೈಗಾರಿಕಾ ಘಟಕಗಳನ್ನು ಪ್ರಾರಂಭಿಸಲು ಸಿದ್ದತೆ ನಡೆದಿವೆ ಎಂದರು.

ಕಾರ್ಯಕ್ರಮದಲ್ಲಿ ಕೈಗಾರಿಕೆ ಇಲಾಖೆ ಜೆ.ಡಿ.ಬಿ.ಆನಂದ, ನಗರಸಭೆಯ ಸದಸ್ಯರಾದ ಕೆ.ವೀರಭದ್ರಪ್ಪ, ಬಿ.ಟಿ.ರಮೇಶ್‌ಗೌಡ, ನಾಮಿನಿ ಸದಸ್ಯರಾದ ಅನ್ವರ್‌ ಮಾಸ್ಟರ್, ನೇತಾಜಿ ಪ್ರಸನ್ನ, ಟಿ.ವೀರಭದ್ರಪ್ಪ, ನಟರಾಜು, ಜಿಟಿಟಿಸಿಯ ಲಕ್ಷ್ಮೀ ಹನುಮೇಶ್, ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.