ಕನ್ನಡಪ್ರಭ ವಾರ್ತೆ ಶಿಕಾರಿಪುರ
ಯಡಿಯೂರಪ್ಪನವರಿಗೆ ರಾಜಕೀಯವಾಗಿ ಜನ್ಮ ನೀಡಿದ ತಾಲೂಕಿನ ಪೋಷಕರ ಮಕ್ಕಳಿಗೆ ಉದ್ಯೋಗ ದೊರಕಿಸುವ ಮಹಾತ್ವಾಕಾಂಕ್ಷೆಯ ಮೇರೆಗೆ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ ವಿಜಯೇಂದ್ರ ತಿಳಿಸಿದರು.ಶುಕ್ರವಾರ ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆವರಣದಲ್ಲಿ ಮಾಜಿ ಸಿ.ಎಂ. ಯಡಿಯೂರಪ್ಪನವರ ಹುಟ್ಟುಹಬ್ಬದ ಅಂಗವಾಗಿ ಮೂಡಬಿದರೆ ಆಳ್ವಾಸ್ ಫೌಂಡೇಶನ್ ಟ್ರಸ್ಟ್ ಸಹಯೋಗದಲ್ಲಿ ಸತತ 2 ದಿನ ಆಯೋಜಿಸಲಾದ ಬೃಹತ್ ಉದ್ಯೋಗ ಮೇಳ 2026ಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾಜಿ ಸಿಎಂ ಯಡಿಯೂರಪ್ಪನವರಿಗೆ ರಾಜಕೀಯ ಜನ್ಮ ನೀಡಿದ ತಾಲೂಕಿನ ಯುವಕ ಯುವತಿಯರಿಗೆ ಉದ್ಯೋಗ ದೊರಕಿಸಿಕೊಡುವ ಬಹು ಮಹತ್ವಾಕಾಂಕ್ಷೆಯ ಕನಸು ಇದೀಗ ನನಸಾಗಿದ್ದು, ಈ ದಿಸೆಯಲ್ಲಿ ಕಳೆದ 2-3 ತಿಂಗಳಿನಿಂದ ಸತತ ಶ್ರಮವಹಿಸಿ ಯಶಸ್ವಿಯಾಗಲು ಸಹಕರಿಸಿದ ಆಳ್ವಾಸ್ ಫೌಂಡೇಶನ್ ಟ್ರಸ್ಟಿ ವಿವೇಕ್ ಆಳ್ವ ಸಹಿತ ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸಿದರು.ತಾಲೂಕು ಇದೀಗ ಜಿಲ್ಲಾ ಕೇಂದ್ರಕ್ಕೆ ಆಗತ್ಯವಾದ ಸಕಲ ಸೌಲಭ್ಯ ಹೊಂದಿದ್ದು, ನೀರಾವರಿ, ಶಿಕ್ಷಣ, ಆರೋಗ್ಯ ಸಹಿತ ಮೂಲಭೂತ ಸೌಲಭ್ಯದ ಮೂಲಕ ಕ್ರಾಂತಿಕಾರಕ ಬದಲಾವಣೆಯಾಗಿದೆ ಎಂದ ಅವರು, ಉದ್ಯೋಗಾಕಾಂಕ್ಷಿಗಳು ವೇತನ, ಹುದ್ದೆ, ಸ್ಥಳದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಸಂಕೋಚ ಮುಜುಗರ ತೊರೆದು ಮನೆಯಲ್ಲಿ ಕುಳಿತುಕೊಳ್ಳದೆ ಅವಕಾಶ ಸದ್ಭಳಕೆ ಮೂಲಕ ಭವಿಷ್ಯಕ್ಕೆ ಹೆಚ್ಚು ಗಮನ ನೀಡುವಂತೆ ಕಿವಿಮಾತು ಹೇಳಿದರು.
ಮೋದಿ ಪ್ರಧಾನಿಯಾದ 12 ವರ್ಷದಲ್ಲಿ ಉದ್ಯೋಗ ಸೃಷ್ಟಿಗಾಗಿ ಹಲವು ಯೋಜನೆ ಜಾರಿಗೊಳಿಸಿದ್ದು, ಭ್ರಷ್ಟಾಚಾರದ ಆಡಳಿತ ಊಹಿಸಿಕೊಳ್ಳಲು ಸಾದ್ಯವಿಲ್ಲ. ಜಗತ್ತಿನಲ್ಲಿ ಭಾರತ 4ನೇ ಬಹುದೊಡ್ಡ ಎಕಾನಮಿ ಪಾಲಿಸಿ ಹೊಂದಿದೆ. ರು.1 ಲಕ್ಷ ಕೋಟಿ ಬಡ್ಡಿ ರಹಿತ ಸಾಲ ನೀಡಿ ಕೇಂದ್ರ ಸರ್ಕಾರ ಖಾಸಗಿ ಕಂಪನಿಗಳ ಮೂಲಕ ಉದ್ಯೋಗ ಸೃಷ್ಟಿಗೆ ಪ್ರೋತ್ಸಾಹಿಸಲಾಗಿದೆ ಎಂದು ತಿಳಿಸಿದರು.
ಯಡಿಯೂರಪ್ಪನವರ ಹುಟ್ಟುಹಬ್ಬದ ಅಂಗವಾಗಿ ಇದೇ 27ರಂದು ಕುಮದ್ವತಿ ಕಾಲೇಜಿನ ಏಕಲವ್ಯ ಕ್ರೀಡಾಂಗಣದಲ್ಲಿ ಸುದೀರ್ಘ ಕಾಲ ರಾಜಕೀಯ ಕ್ಷೇತ್ರದಲ್ಲಿ ಹರಸಿ ಬೆಳೆಸಿದ ತಾಲೂಕಿನ ಎಲ್ಲ ಸಮಾಜದ ಮುಖಂಡರಿಗೆ ಸಂಜೆ 4ಕ್ಕೆ ಗೌರವ ಸಮರ್ಪಣೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಪಾಲ್ಗೊಳ್ಳಲಿದ್ದು, ಆನಂದಪುರ ಮುರುಘಾಮಠದ ಶ್ರೀ ಮ.ನಿ.ಪ್ರ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಸಾನ್ನಿದ್ಯ ವಹಿಸಲಿದ್ದಾರೆ. ನಂತರದಲ್ಲಿ ಹೆಸರಾಂತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ತಂಡದಿಂದ ಸಂಗೀತ ಕಾರ್ಯಕ್ರಮದಲ್ಲಿ ಗಾಯಕಿ ಮಂಗ್ಲೀಬಾಯಿ, ಹನುಮಂತ ನಾಯ್ಕ, ಗಿಲ್ಲಿ ಮತ್ತಿತರರು ಪಾಲ್ಗೊಳ್ಳಲಿದ್ದಾರೆ, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವಂತೆ ಮನವಿ ಮಾಡಿದರು.
ಸಂಸದ ರಾಘವೇಂದ್ರ ಮಾತನಾಡಿ, ಕಳೆದ 5 ವರ್ಷದ ಹಿಂದೆ ನಡೆದ ಉದ್ಯೋಗ ಮೇಳದಲ್ಲಿ 8.5 ಸಾವಿರ ಅಭ್ಯರ್ಥಿಗಳು ಹಾಜರಾಗಿದ್ದು, ಕೇವಲ 100 ಆಕಾಂಕ್ಷಿಗಳು ಆಯ್ಕೆಯಾಗಿದ್ದಾರೆ. ಕೌಶಲ್ಯ ಪ್ರತಿಭೆ ಮುಖ್ಯವಾಗಿದ್ದು, ಪೂರಕವಾಗಿ ಕಂಪನಿಗಳು ಗೌರವಯುತ ವೇತನ ನೀಡಿ ಪ್ರೋತ್ಸಾಹಿಸಬೇಕಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮ ಉದ್ಟಾಟಿಸಿದ ಆಳ್ವಾಸ್ ಫೌಂಡೇಶನ್ ಟ್ರಸ್ಟಿ ವಿವೇಕ್ ಆಳ್ವ, ರಾಜ್ಯ ರಾಜಕಾರಣದಲ್ಲಿ ಯಡಿಯೂರಪ್ಪನವರು ವಿಶೇಷವಾಗಿ ಗುರುತಿಸಿಕೊಂಡಿದ್ದು, ರಾಜ್ಯಾದ್ಯಂತ ಅವರಿಗೆ ದೊರೆಯುವ ಪ್ರಾತಿನಿದ್ಯತೆ ಇತರೆ ರಾಜಕಾರಣಿಗಳಿಗೆ ಕಾಣಲು ಸಾದ್ಯವಿಲ್ಲ. ಇದೀಗ ಅಪ್ಪನ ಹಾದಿಯಲ್ಲಿ ಮಕ್ಕಳು ಸಾಗುತ್ತಿದ್ದಾರೆ ಎಂದು ತಿಳಿಸಿ ಯಡಿಯೂರಪ್ಪನವರ ಹುಟ್ಟುಹಬ್ಬಕ್ಕೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವ ಮೂಲಕ ಉಡುಗೊರೆ ನೀಡುವಂತೆ ತಿಳಿಸಿದರು.
ವಿವೇಕ್ ಆಳ್ವರನ್ನು ಸನ್ಮಾನಿಸಲಾಯಿತು. ಅಂದಾಜು 83 ಕಂಪನಿಗಳು ಹಾಗೂ 2 ಸಾವಿರ ಅಧಿಕ ಆಕಾಂಕ್ಷಿಗಳು ಹಾಜರಿದ್ದರು. ವೇದಿಕೆಯಲ್ಲಿ ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ಸಂಸ್ಥೆ ಅಧ್ಯಕ್ಷ ಶಿವಕುಮಾರ್, ಮುಖಂಡ ಚನ್ನವೀರಪ್ಪ, ವಸಂತಗೌಡ, ಡಿ.ಎಲ್ ಬಸವರಾಜ್, ಬಿ.ಡಿ ಭೂಕಾಂತ್, ಟಿ.ಡಿ ಮೇಘರಾಜ್ ಮತ್ತಿತರರು ಉಪಸ್ಥಿತರಿದ್ದರು.ಡಾ.ಶಿವಕುಮಾರ್ ಸ್ವಾಗತಿಸಿ, ಕೋಟೋಜಿರಾವ್ ನಿರೂಪಿಸಿ ವಂದಿಸಿದರು.