ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದರ ಜೊತೆಗೆ ಮೊದಲಿನಿಂದಲೂ ಸಹ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಆರೋಗ್ಯ, ಶಿಕ್ಷಣ, ಸಾಮಾಜಿಕವಾಗಿ ಸಹಕಾರ ನೀಡುತ್ತಾ ಬಂದಿದೆ,

ಕೊಮ್ಮನಹಳ್ಳಿಯಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಿ ಶಾಸಕ ಕೆ.ವೈ.ನಂಜೇಗೌಡ

ಕನ್ನಡಪ್ರಭ ವಾರ್ತೆ ಟೇಕಲ್

ರಾಜಕೀಯವಾಗಿ ಶಕ್ತಿ ನೀಡಿದ ತಾಲೂಕಿನ ಅಭಿವೃದ್ಧಿಯ ಜೊತೆಗೆ ವೈಯಕ್ತಿಕವಾಗಿ ನನ್ನ ತಾಲೂಕಿನ ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ನನ್ನ ಸ್ವಂತ ಖರ್ಚಿನಲ್ಲಿ ಲ್ಯಾಪ್ ಟ್ಯಾಪ್‌ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಟೇಕಲ್‌ನ ಕೊಮ್ಮನಹಳ್ಳಿ ಶಾಸಕರ ನಿವಾಸದ ಆವರಣದಲ್ಲಿ ತಾಲೂಕಿನ ಪದವಿ ಹಾಗೂ ವೃತ್ತಿ ಶಿಕ್ಷಣ ಪಡೆಯುತ್ತಿರುವ ಬಡ ವಿದ್ಯಾರ್ಥಿಗಳ ಶಿಕ್ಷಣದ ಅನುಕೂಲಕ್ಕಾಗಿ ವೈಯುಕ್ತಿಕ ಅನುದಾನದಲ್ಲಿ ೩೫ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಲ್ಯಾಬ್‌ಟಾಪ್‌ಗಳನ್ನು ವಿತರಿಸಿ ಮಾತನಾಡಿದರು.

ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದರ ಜೊತೆಗೆ ಮೊದಲಿನಿಂದಲೂ ಸಹ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಆರೋಗ್ಯ, ಶಿಕ್ಷಣ, ಸಾಮಾಜಿಕವಾಗಿ ಸಹಕಾರ ನೀಡುತ್ತಾ ಬಂದಿದೆ, ಪದವಿ ಹಾಗೂ ಸ್ನಾತ ಕೋತರ ವೃತ್ತಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಶಿಕ್ಷಣದ ಅನುಕೂಲಕ್ಕಾಗಿ ಈ ಲ್ಯಾಬ್‌ಟಾಪ್‌ಗಳನ್ನು ನೀಡುವಂತೆ ಮನವಿ ಮಾಡಿದ್ದರು.

ಅದರಂತೆ ವೈಯಕ್ತಿಕವಾಗಿ ೩೫ ಮಂದಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಮಾಡಲಾಗುತ್ತಿದ್ದು, ಇದು ಕೇವಲ ರಾಜಕೀಯ ಪ್ರಚಾರಕ್ಕಾಗಿ ನೀಡುತ್ತಿಲ್ಲ, ಹಿಂದಿನಿಂದಲೂ ಸಹ ನಾವು ಮತ್ತು ನಮ್ಮ ಕುಟುಂಬದವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಮಹತ್ವ ಹಾಗೂ ಸಹಕಾರ ನೀಡುತ್ತಾ ಬರುತ್ತಿದ್ದೆವೆ. ಮುಂದೆಯೂ ಸಹ ಇನ್ನು ಹೆಚ್ಚಿನ ರೀತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಹಕಾರ ನೀಡುವುದಾಗಿ ತಿಳಿಸಿದರು.

ಶಿಕ್ಷಣ ಇಲಾಖೆ ವ್ಯಾಪ್ತಿಗೆ ಸೇರಿದ ಶಾಲಾ ಕಟ್ಟಡಗಳನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಅನುದಾನ ತಂದು ಅಭಿವೃದ್ಧಿ ಪಡಿಸುತ್ತೇನೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಸತಿ ನಿಲಯಗಳನ್ನು (ಹಾಸ್ಟೆಲ್)ನಿರ್ಮಿಸುತ್ತಿದ್ದು ಬಡ ವಿದ್ಯಾರ್ಥಿಗಳು ಇದರ ಅನುಕೂಲ ಪಡೆಯಬಹುದು ತಾಲೂಕಿನಲ್ಲಿ ಇನ್ನು ಹೆಚ್ಚಿನ ಕೈಗಾರಿಕೆಗಳು ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗ ದೊರೆಯುವಂತೆ ಪ್ರಯತ್ನಿಸುತ್ತೇನೆ ಎಂದರು.

ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸುನಿಲ್ ನಂಜೇಗೌಡ ಮಾತನಾಡಿ, ಯುವ ಜನರಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದು ನಮ್ಮ ಕುಟುಂಬದಿಂದಲೂ ಎಲ್ಲಾ ಕ್ಷೇತ್ರಗಳಲ್ಲೂ ಆದ್ಯತೆ ನೀಡಲಾಗುವುದು ಅದರಂತೆಯೇ ಪ್ರತಿ ವರ್ಷವೂ ಶಿಕ್ಷಣ ಕ್ಷೇತ್ರಕ್ಕೆ ಮೊದಲ ಆದ್ಯತೆಯಂತೆ ಬಡ ವಿದ್ಯಾರ್ಥಿಗಳಿಗೆ ನಮ್ಮ ಕೈಲಾದ ಸಹಕಾರ ನೀಡುತ್ತಿದ್ದೇವೆ ಎಂದರು.

ಮಾಜಿ ಜಿ.ಪಂ. ಅಧ್ಯಕ್ಷೆ ರತ್ನಮ್ಮ ನಂಜೇಗೌಡ, ಜಿಲ್ಲಾ ಕಾಂಗ್ರೆಸ್ ಘಟಕದ ಮಹಿಳಾ ಅಧ್ಯಕ್ಷೆ ಹೇಮಾಮಾಲಿನಿ ನಾರಾಯಣಸ್ವಾಮಿ, ಟಿ.ಎಂ.ಅಶೋಕ ಕುಮಾರ್, ದರ್ಕಾಸ್ತು ಸಮಿತಿ ಸದಸ್ಯ ಸತೀಶ್ ಬಾಬು, ಮುಖಂಡರಾದ ವೀರಭದ್ರಪ್ಪ, ಮೈಲಾಂಡಹಳ್ಳಿ ಶ್ರೀನಿವಾಸ್ ಕೃಷ್ಣಾರೆಡ್ಡಿ, ಮಂಜುನಾಥ್ ರೆಡ್ಡಿ, ನಾರಾಯಣಪ್ಪ, ಶ್ರೀನಿವಾಸ್, ಕೆ.ವೈ.ಈರೇಗೌಡ, ಹರೀಶ್ ನಂಜೇಗೌಡ, ಕೆಜಿಹಳ್ಳಿ ಮಾಜಿ ಗ್ರಾ.ಪಂ ಅಧ್ಯಕ್ಷ ಎಂ.ಮುರುಗೇಶ್, ರಾಜಕುಮಾರ್ ಇದ್ದರು.