ರಥಗಳು ಶಿಥಿಲವಾಗಿದೆ ಎಂಬ ನೆಪದಲ್ಲಿ ಮುಜರಾಯಿ ಇಲಾಖೆ ಕಳೆದ ನಾಲ್ಕು ವರ್ಷಗಳಿಂದ ಜಾತ್ರೆಯಲ್ಲಿ ರಥಗಳನ್ನು ಎಳೆಯಲಾಗುತ್ತಿಲ್ಲ. ಕಳೆದ ವರ್ಷ ಸೋಮೇಶ್ವರ, ಶಂಭುಲಿಂಗೇಶ್ವರ ಉತ್ಸವ ಮೂರ್ತಿಗಳನ್ನು ಎರಡು ರಥಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸಿ ಭಕ್ತರು ನಿಧಾನವಾಗಿ ಎಳೆಯುವಂತೆ ಅವಕಾಶ ಕಲ್ಪಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಹೋಬಳಿಯ ಸಾಸಲು ಕ್ಷೇತ್ರದಲ್ಲಿ ಸೋಮೇಶ್ವರ, ಶಂಭುಲಿಂಗೇಶ್ವರ ಜಾತ್ರೆಯಲ್ಲಿ ಜೋಡಿ ರಥಗಳು ರಥಬೀದಿಯಲ್ಲಿ ಚಲಿಸದೆ ಇರುವುದಕ್ಕೆ ಭಕ್ತರು ಮುಜರಾಯಿ ಅಧಿಕಾರಿಗಳಿಗೆ ಶಾಪ ಹಾಕಿದರು.ಊರಿನ ಗ್ರಾಮಸ್ಥರ ನಿಶ್ಚಯಿಸಿದಂತೆ ಸೋಮವಾರ ಜಾತ್ರೋತ್ಸವ ನಿಗದಿಯಾಗಿತ್ತು. ಗ್ರಾಮದ ಜಾತ್ರೆ, ರಥೋತ್ಸವಕ್ಕೆ ಜಿಲ್ಲೆ, ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು. ಜಾತ್ರೆಯಲ್ಲಿ ರಥೋತ್ಸವ ಜರುಗುವುದಿಲ್ಲ ಎಂಬ ಅನುಮಾನದಿಂದ ವಿರಳವಾಗಿ ಭಕ್ತರು ಆಗಮಿಸಿದ್ದರು.
ರಥಗಳು ಶಿಥಿಲವಾಗಿದೆ ಎಂಬ ನೆಪದಲ್ಲಿ ಮುಜರಾಯಿ ಇಲಾಖೆ ಕಳೆದ ನಾಲ್ಕು ವರ್ಷಗಳಿಂದ ಜಾತ್ರೆಯಲ್ಲಿ ರಥಗಳನ್ನು ಎಳೆಯಲಾಗುತ್ತಿಲ್ಲ. ಕಳೆದ ವರ್ಷ ಸೋಮೇಶ್ವರ, ಶಂಭುಲಿಂಗೇಶ್ವರ ಉತ್ಸವ ಮೂರ್ತಿಗಳನ್ನು ಎರಡು ರಥಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸಿ ಭಕ್ತರು ನಿಧಾನವಾಗಿ ಎಳೆಯುವಂತೆ ಅವಕಾಶ ಕಲ್ಪಿಸಲಾಗಿತ್ತು.ಆದರೆ, ಈ ಬಾರಿ ಉತ್ಸವ ಮೂರ್ತಿಯನ್ನು ಕನಿಷ್ಠ ರಥಬೀದಿಯಲ್ಲಿ ಮೆರವಣಿಗೆ ಮಾಡಿಸದೆ, ರಥದಲ್ಲಿಯೂ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸದೆ ಖಾಲಿ ರಥಗಳಿಗೆ ಮಾತ್ರ ಪೂಜೆಗೆ ಅಧಿಕಾರಿಗಳು ಅವಕಾಶ ಮಾಡಿದ್ದರು. ರಥಗಳಿಗೆ ಕನಿಷ್ಠ ಬಣ್ಣದ ಬಾವುಟ, ಹೂವಿನ ಅಲಂಕಾರಕ್ಕೂ ಅವಕಾಶ ಕಲ್ಪಿಸದೆ ಕಾಟಾಚಾರಕ್ಕೆ ರಥಗಳಿಗೆ ಪೂಜಿಸುವ ವ್ಯವಸ್ಥೆ ಮಾಡಲಾಗಿತ್ತು.
ಅರ್ಚಕರು ರಥಗಳಿಗೆ ಸಾಂಕೇತಿಕವಾಗಿ ಪೂಜಿಸಿದರು. ಭಕ್ತರು ಬೇಸರದಿಂದಲೇ ರಥಗಳಿಗೆ ಹಣ್ಣುಕಾಯಿಯೊಂದಿಗೆ ಪೂಜಿಸಿ ಮನೆಗೆ ಹಿಂತಿರುಗಿದರು. ಮುಜರಾಯಿ ದೇಗುಲವಾಗಿರುವುದರಿಂದ ವಾರ್ಷಿಕ ಲಕ್ಷಾಂತರ ರು. ಆದಾಯ ಇಲಾಖೆಗೆ ಬರಲಿದೆ. ಜೀರ್ಣೋದ್ಧಾರ ನೆಪದಲ್ಲಿ ಶಂಭುಲಿಂಗೇಶ್ವರ, ಸೋಮೇಶ್ವರ ದೇಗುಲವನ್ನು ಕೆಡವಲಾಗಿದೆ. ಇನ್ನು ದೇಗುಲ ಕಾಮಗಾರಿ ಮುಗಿದಿಲ್ಲ. ಭಕ್ತರಿಗೆ ದೇವರದರ್ಶನ, ಪೂಜೆಗೆ ತೊಂದರೆಯಾಗುತ್ತಿದೆ. ಕನಿಷ್ಠ ರಥಗಳಲ್ಲಿ ದೇವರ ಮೂರ್ತಿ ಕೂರಿಸಿ ಪೂಜಿಸಲು ಅನುಕೂಲ ಮಾಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಭಕ್ತರು ದೂರಿದರು.