ಜೋಡಿ ತಿಮ್ಮಾಪುರ ಗ್ರಾಪಂಗೆ ಗಾಳಿಹಳ್ಳಿ ಆನಂದ್ ಅಧ್ಯಕ್ಷ

| Published : Feb 13 2025, 12:45 AM IST

ಸಾರಾಂಶ

ಬೀರೂರು, ಪಟ್ಟಣ ಸಮೀಪದ ಜೋಡಿತಿಮ್ಮಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಗಾಳಿಹಳ್ಳಿಯ ಜಿ. ಎಲ್.ಆನಂದ್ ಬಹುಮತ ಪಡೆದು ಅಧ್ಯಕ್ಷರಾಗಿದ್ದಾರೆ ಎಂದು ಚುನಾವಣಾಧಿಕಾರಿ ತಾಲೂಕು ಸಮಾಜ ಕಲ್ಯಾಣಧಿಕಾರಿ ನಟರಾಜ್ ಘೋಷಿಸಿದರು.

ಚುನಾವಣೆಯಲ್ಲಿ ಬಹುಮತದಿಂದ ಆನಂದ್ ಗೆಲುವು: ಚುನಾವಣಾಧಿಕಾರಿ ನಟರಾಜ್‌ ಘೋಷಣೆ

ಕನ್ನಡಪ್ರಭ ವಾರ್ತೆ, ಬೀರೂರು.ಪಟ್ಟಣ ಸಮೀಪದ ಜೋಡಿತಿಮ್ಮಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಗಾಳಿಹಳ್ಳಿಯ ಜಿ. ಎಲ್.ಆನಂದ್ ಬಹುಮತ ಪಡೆದು ಅಧ್ಯಕ್ಷರಾಗಿದ್ದಾರೆ ಎಂದು ಚುನಾವಣಾಧಿಕಾರಿ ತಾಲೂಕು ಸಮಾಜ ಕಲ್ಯಾಣಧಿಕಾರಿ ನಟರಾಜ್ ಘೋಷಿಸಿದರು.ಕಳೆದ 15ದಿನಗಳ ಹಿಂದೆ ತರೀಕೆರೆ ಎಸಿ ಕಾಂತರಾಜ್ ಅಧ್ಯಕ್ಷತೆಯಲ್ಲಿ ಗ್ರಾಪಂ ಅಧ್ಯಕ್ಷರ ವರ್ತನೆಯಿಂದ ಸದಸ್ಯರೆಲ್ಲ ಸೇರಿ ಅವಿಶ್ವಾಸ ನಿರ್ಣಯ ಮಂಡಿಸಿ ಯಶಸ್ವಿಯಾಗಿ ಗ್ರಾಪಂ ಉಪಾಧ್ಯಕ್ಷೆ ನೀಲಮ್ಮಗೆ ಚುನಾವಣೆ ವರೆಗು ತಾತ್ಕಲಿಕ ಅಧ್ಯಕ್ಷ ಹುದ್ದೆ ನಿಭಾಯಿಸುವಂತೆ ಆದೇಶ ನೀಡಿದ್ದರು. ನಂತರದ ದಿನಗಳಲ್ಲಿ ಅಧ್ಯಕ್ಷರ ಹುದ್ದೆಗೆ ಚುನಾವಣೆ ನಡೆಸಲು ಗ್ರಾ.ಪಂ. ಸದಸ್ಯರಿಗೆ ನೋಟಿಸ್ ನೀಡಿ ಚುನಾವಣೆಯನ್ನು ಫೆ.12ಕ್ಕೆ ನಿಗದಿ ಮಾಡಲಾಗಿತ್ತು.9 ಜನ ಗ್ರಾಪಂ ಸದಸ್ಯ ಬಲದ ಅಧ್ಯಕ್ಷರ ಚುನಾವಣೆಗೆ ಜೋಡಿತಿಮ್ಮಾಪುರ ಗ್ರಾಮದ ವೆಂಕಟೇಶ್, ಗಾಳಿಹಳ್ಳಿ ಜಿ.ಎಲ್. ಆನಂದ್ ನಾಮಪತ್ರ ಸಲ್ಲಿಸಿದ್ದರು. ಸದಸ್ಯರು ಜಿ.ಎಲ್.ಆನಂದ್ 6 ಮತ ಪಡೆದರೇ, ವೆಂಕಟೇಶ್ ಕೇವಲ 3ಮತ ಪಡೆದರು. ಆನಂದ್ ಜಯಶೀಲರಾಗಿರುವುದನ್ನು ಎಂದು ಘೋಷಿಸಿದ ಚುನಾವಣಾದಿಕಾರಿ ಪ್ರಮಾಣ ಪತ್ರ ವಿತರಿಸಿದರು.ನಂತರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಜೋಡಿತಿಮ್ಮಾಪುರ ಗ್ರಾಮದ ತಾಪಂ ಮಾಜಿ ಸದಸ್ಯ ಗೋವಿಂದ ಸ್ವಾಮಿ, ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಸೌಹಾರ್ದಯುತ ಜೀವನ ನಡೆಸಲು ನಾವು ಗ್ರಾ.ಪಂ ಚುನಾವಣೆಯಲ್ಲಿ ಸದಸ್ಯರನ್ನು ಆಯ್ಕೆ ಮಾಡಿರುತ್ತೇವೆ. ಅಂತಹ ವ್ಯಕ್ತಿಗಳಲ್ಲಿ ಆನಂದ್ ಸಹ ಒಬ್ಬರು ಎಂದರು.

ಕೆಲವು ವರ್ಷಗಳ ಹಿಂದೆ ದೇಶದ ಯಾವುದೇ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಗೌರವ ಮತ್ತು ಬೆಲೆ ಇರಲಿಲ್ಲ. ಆದರೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗ್ರಾಮ ಪಂಚಾಯ್ತಿಯಲ್ಲಿ ಜಾರಿ ಮಾಡಿದ ಮಹಾತ್ಮಗಾಂಧಿ ಗ್ರಾಮೀಣ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಿಂದ ಗ್ರಾಮದ ಪ್ರತಿ ಕುಟುಂಬದ ವ್ಯಕ್ತಿಗೆ ವರ್ಷಕ್ಕೆ 100 ದಿನಗಳ ಉದ್ಯೋಗ ದ ಕಾನೂನು ಗ್ರಾಮೀಣರು, ರೈತರು ಹಾಗೂ ಗ್ರಾಪಂ ಸದಸ್ಯರನ್ನು ಗೌರವಯುತವಾಗಿ ಕಾಣಲು ಕಾರಣವಾಯಿತು. ಸಾಕಷ್ಟು ಸವಾಲು ಗಳಿರುವ ಈ ಗ್ರಾ.ಪಂ.ವ್ಯಾಪ್ತಿಯ ಹಳ್ಳಿಗಳಿಗೆ ನೂತನ ಅಧ್ಯಕ್ಷರು ಭೇಟಿ ನೀಡಿ ಸಮಸ್ಯೆ ಬಗೆಹರಿಸುವಂತೆ ಕೋರಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷ ಜಿ.ಎಲ್.ಆನಂದ್ , ಕಳೆದ 15 ವರ್ಷಗಳಿಂದಲೂ ಗ್ರಾ.ಪಂ. ಸದಸ್ಯನಾಗಿರುವ ನನಗೆ ಅಧಿಕಾರದ ವ್ಯಾಮೋಹ ಇರಲಿಲ್ಲ. ಆದರೆ ಇಂದು ನನಗೆ ಅದಾಗಿಯೇ ಒದಗಿ ಬಂದಿದೆ. ಕ್ಷೇತ್ರದ ಶಾಸಕರು, ಗ್ರಾ.ಪಂ ನ ಎಲ್ಲಾ ಸದಸ್ಯರು, ಸಿಬ್ಬಂದಿ ಸಹಕಾರ ಪಡೆದು ಗ್ರಾಮಗಳ ಅಭಿವೃದ್ದಿಗೆ ಬದ್ಧನಾಗಿದ್ದು, ಮುಂದಿನ ದಿನಗಳಲ್ಲಿ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಭೇಟಿ ನೀಡಿ ಕಳೆದ ಸಾಲಿನಲ್ಲಿ ಗ್ರಾಪಂ ಪಡೆದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಪೂರಕವಾಗಿ ಉತ್ತಮ ಆಡಳಿತ ನೀಡುವ ಮೂಲಕ ಹಗಲು ರಾತ್ರಿ ದುಡಿಯುತ್ತೇನೆ. ಮಾದರಿ ಗ್ರಾಪಂ. ಮಾಡಲು ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.ನೂತನ ಅಧ್ಯಕ್ಷರಿಗೆ ತೆಲುಗುಗೌಡ ಸಮಾಜ, ಗ್ರಾಮಸ್ಥರು ಹಾಗೂ ಸದಸ್ಯರು ಅಭಿನಂದಿಸಿದರು. ಪಿಡಿಒ ದಯಾನಂದ್, ಉಪಾಧ್ಯಕ್ಷೆ ನೀಲಮ್ಮ, ಸದಸ್ಯರಾದ ಶಾಂತಮ್ಮ, ಕುಮಾರಸ್ವಾಮಿ, ಗೌರಮ್ಮ, ವೆಂಕಟೇಶ್, ಅನ್ನಪೂರ್ಣ, ಗೋವಿಂದಪ್ಪ, ಬಸಮ್ಮ, ಹಾಗೂ ತೆಲುಗುಗೌಡ ಸಮಾಜದ ಅಧ್ಯಕ್ಷ ಲೋಕೇಶ್, ರಾಜು, ಬೀರೂರು ಪುರಸಭಾ ಸದಸ್ಯ ಶಶಿಧರ್, ಬಿ.ಜಿ.ಬಸಣ್ಣ, ಮೂರ್ತಣ್ಣ, ನರಸಿಂಹಮೂರ್ತಿ, ಸೇರಿದಂತೆ ಮತ್ತಿತರು ನೂತನ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಿ ಸಿಹಿ ಹಂಚಿದರು.

12 ಬೀರೂರು 1ಬೀರೂರು ಸಮೀಪದ ಜೋಡಿತಿಮ್ಮಾಪುರ ಗ್ರಾ.ಪಂ.ಅಧ್ಯಕ್ಷರ ಚುನಾವಣೆಯಲ್ಲಿ ಗಾಳಿಹಳ್ಳಿ ಆನಂದ್ ಅತಿಹೆಚ್ಚು ಮತ ಪಡೆಯುವ ಮೂಲಕ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ತೆಲುಗುಗೌಡ ಸಮಾಜದ ಅಧ್ಯಕ್ಷ ಲೋಕೇಶ್, ರಾಜು, ಬೀರೂರು ಪುರಸಭಾ ಸದಸ್ಯ ಶಶಿಧರ್, ಬಿ.ಜಿ.ಬಸಣ್ಣ, ಮೂರ್ತಣ್ಣ, ನರಸಿಂಹಮೂರ್ತಿ ಇದ್ದರು.