ಸಾರಾಂಶ
ಕಲಗಾರು ಲಕ್ಷ್ಮಿ ನಾರಾಯಣ ಹೆಗಡೆಕನ್ನಡಪ್ರಭ ವಾರ್ತೆ ತಾಳಗುಪ್ಪ / ಸಾಗರ/ ಬೆಂಗಳೂರು
ಶ್ರೀಮದ್ಗಾಂಭೀರ್ಯದಿಂದ ಧೀರ ಧಾರೆಯಾಗಿ ಧುಮ್ಮಿಕ್ಕುವ ರಾಜ, ಆರ್ಭಟಿಸುತ್ತ ಸೊಕ್ಕಿ ಭೋರ್ಗರೆವ ರೋರರ್ ಭುವನದಿಂದ ಬಾನಿಗೆ ಚಿಮ್ಮಿ ತೂರುತ್ತಿರುವಂತೆ ಕಾಣುವ ರಾಕೆಟ್, ವನಪು ಒಯ್ಯಾರದಿಂದ ಸುತ್ತಲ ಹಸಿರು ಪತ್ತಲದ ಸೆರಗು ಹೊತ್ತು ಬಾಗಿ ಬಳುಕಿ ತುಳುಕುವ ರಾಣಿ - ಹೀಗೆ ನಾಲ್ಕು ಧಾರೆಗಳಾಗಿ ಕಣಿವೆಗೆ ಕುಪ್ಪಳಿಸಿ ಜಿಗಿಯುವ ಶರಾವತಿ ನಾಕವನ್ನು ಲೋಕಕ್ಕೆ ಇಳಿಸುವ ಸುರಸುಂದರಿ.ಈ ಜಲಪಾತದ ಧೀರ ಗಂಭೀರ ರುದ್ರ ರಮಣೀಯತೆಯ ಎದುರು ಮಾತು ಮೌನವಾಗುತ್ತದೆ. ಬುದ್ಧಿ ಶರಣಾಗುತ್ತದೆ. ಈ ಜಲಪಾತವನ್ನು ಕುರಿತು ಮೈಸೂರು ಗೆಜೆಟೆಯರ್‌ನನಲ್ಲಿ ಲೆವಿಸ್ ಪ್ರಪಂಚದ ಅತಿ ಎತ್ತರದ ಜಲಪಾತಗಳನ್ನು ಗಾತ್ರದಲ್ಲಿ, ಅತಿಗಾತ್ರದ ಜಲಪಾತಗಳನ್ನು ಎತ್ತರದಲ್ಲಿ ಮತ್ತು ಎರಡೂ ಜಲಪಾತಗಳನ್ನು ಸೌಂದರ್ಯದಲ್ಲಿ ಮೀರಿಸುವ ಜೋಗ ಜಲಪಾತ ಪ್ರಪಂಚದಲ್ಲಿಯೇ ಅತ್ಯಂತ ಸುಂದರವಾಗಿದೆ ಎಂದು ಬಣ್ಣಿಸಿದ್ದಾನೆ.
ಸೌಂದರ್ಯದಲ್ಲಿ ಅದ್ವಿತೀಯವೆನಿಸಿದ ಜೋಗ ಜಲಪಾತದ ವರ್ಣನೆಯನ್ನು ಮಾಡದ ಕವಿಗಳೇ ಇಲ್ಲ. ಜೋಗಕ್ಕೆ ಬಂದು ನಿಸರ್ಗ ವೈಭವಕ್ಕೆ ಮನಸೋತ ವಿಶ್ವಕವಿ ರವೀಂದ್ರನಾಥ ಟಾಗೋರ್‌ರವರಿಂದ ಹಿಡಿದು ದ.ರಾ.ಬೇಂದ್ರೆಯವರೆಗೆ ಹಲವು ಉತ್ತುಂಗ ಪ್ರತಿಭೆಗಳು ಜಲಪಾತದ ರುದ್ರ ರಮಣೀಯತೆಯನ್ನು ಕಂಡು ಬೆರಗಾಗಿ ಹಾಡಿದ್ದಾರೆ. ಸ್ಥಳದಲ್ಲಿಯೇ ಹಾಡು ಕಟ್ಟಿ ಹಾಡಿದ ಲಾವಣಿಕಾರರು, ಜನಪದ ಕವಿಗಳು, ತಮ್ಮ ಕಲ್ಪನೆಯ ಭಂಡಾರವನ್ನು ತುಂಬಿಕೊಂಡು ಹೋದ ಸಾಹಿತಿಗಳು, ಸ್ಫೂರ್ತಿಯಿಂದ ಚಿತ್ರ ಬಿಡಿಸಿದ ಕಲಾವಿದರು, ವಿದೇಶಿ ಪ್ರವಾಸಿಗರು ಜೋಗವನ್ನು ನೋಡುವುದೇ ಅದ್ಭುತ ಅನುಭವ ಎಂದು ಹಾಡಿ ಹೊಗಳಿದ್ದಾರೆ.ಜೋಗ ಜಲಪಾತದ ಎದುರು ನಿಂತರೆ ಪಕೃತಿಯ ಈ ಅದ್ಭುತ ರಮ್ಯ ವಿಶ್ವ ರೂಪದೆದುರು ನಾವು ಅಣುವಿನಂತೆ ಬಿಂದುವಾಗಿ ಬಿಡುತ್ತೇವೆ. ಜಲಪಾತವನ್ನು ಕುರಿತು ವರಕವಿ ಬೇಂದ್ರೆಯವರು ತಮ್ಮ ‘ತಡಸಲು ತಡಸಲು ಅಗೋ ಅಲ್ಲಿ ಎಂದು ಪ್ರಾರಂಭಗೊಳ್ಳುವ ಪದ್ಯದಲ್ಲಿ ನಿಂತಲ್ಲಿಯೇ ಕಾಲಂಟಿತ್ತು, ಊಹೆ ದಿಗಂತಕ್ಕೆ ಹೊಂಟಿತ್ತು’ ಎಂದು ಹಾಡಿದ್ದಾರೆ.
ವಿದ್ಯುತ್ ಯೋಜನೆಗಳು ಪ್ರಾರಂಭಗೊಳ್ಳುವ ಮುನ್ನ ಮಳೆಗಾಲದಲ್ಲಿ ನಾಲ್ಕು ಧಾರೆಗಳೂ ಒಂದಾಗಿ ಧುಮುಕುತ್ತಿತ್ತು. ಅದರ ಶಬ್ದ ನಾಲ್ಕಾರು ಮೈಲಿಗಳವರೆಗೂ ಕೇಳಿಸುತ್ತಿತ್ತು. ಆಲಾಪಾತದ ಎದುರಿನ ಪ್ರವಾಸಿ ಮಂದಿರದ ಕಿಟಿಕಿಗಳು ಜಲ-ಪಾತದ ಶಬ್ದಕ್ಕೆ ಅದರುತ್ತಿದ್ದವು. ಸೌಂದರ್ಯದ ಜೊತೆಗೆ ಭಯವೂ ಉಂಟಾಗು ವಂತೆ ಜಲಪಾತದ ವೈಖರಿಯಿತ್ತು ಎಂದು ಸ್ಥಳೀಯ ಹಿರಿಯರೇ ಹೇಳುತ್ತಾರೆ. ಇದೀಗ 18 ಸಾವಿರ ಕ್ಯುಸೆಕ್ ನೀರು ಒಮ್ಮೆಲೇ ಧುಮ್ಮಿಕ್ಕಿ ಜೋಗ ತನ್ನ ರುದ್ರ ರಮಣೀಯತೆಯನ್ನು ಮರು ಸ್ಥಾಪಿಸಿದೆ.ಶರಾವತಿ ಪಂಪ್ಡ್ ಸ್ಟೋರೇಜ್ ವಿಸ್ತೃತ ಯೋಜನೆಗೆ ಕೇಂದ್ರ ಒಪ್ಪಿಗೆ: ಜಾರ್ಜ್ಬೆಂಗಳೂರು: ಕರ್ನಾಟಕ ವಿದ್ಯುತ್ ನಿಗಮದಿಂದ ತಲಾ 250 ಮೆ.ವ್ಯಾಟ್‌ನ ಎಂಟು ಜಲವಿದ್ಯುತ್ ಘಟಕಗಳ ಮೂಲಕ 2,000 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಗೆ ಉದ್ದೇಶಿಸಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್)ಗೆ ಕೇಂದ್ರ ವಿದ್ಯುತ್ ಪ್ರಾಧಿಕಾರ ಶುಕ್ರವಾರ ಅನುಮೋದನೆ ನೀಡಿದೆ.ಲಿಂಗನಮಕ್ಕಿ ಜಲಾಶಯದ ಕೆಳಭಾಗದಲ್ಲಿರುವ ಶಿವಮೊಗ್ಗದ ತಲಕಳಲೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪ ಜಲಾಶಯಗಳ ಮಧ್ಯಭಾಗದಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ.ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಇಂಧನ ಸಚಿವ ಕೆ.ಜೆ.ಜಾರ್ಜ್, ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಗೆ ಶರಾವತಿ ಯೋಜನೆ ಅನಿವಾರ್ಯವಾಗಿದ್ದು, ಪರಿಸರಕ್ಕೆ ಹಾನಿಯಾಗದಂತೆ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗುತ್ತದೆ. ಕೇಂದ್ರವು ಡಿಪಿಆರ್‌ಗೆ ಅನುಮತಿ ನೀಡಿದ್ದು, ಉಳಿದ ಅನುಮತಿಗಳನ್ನು ಶೀಘ್ರದಲ್ಲೇ ಪಡೆದು ಯೋಜನೆಯ ಅನುಷ್ಠಾನಕ್ಕೆ ಬದ್ಧವಾಗಿದ್ದೇವೆ ಎಂದಿದ್ದಾರೆ.ನೀರನ್ನು ಮರು ಪಂಪ್ ಮಾಡಿ ಬಳಕೆ:ಯೋಜನೆ ಬಗ್ಗೆ ವಿವರಿಸಿರುವ ಕೆ.ಜೆ.ಜಾರ್ಜ್, ಒಮ್ಮೆ ವಿದ್ಯುತ್ ಉತ್ಪಾದನೆಗೆ ಬಳಸಿಕೊಂಡು ಹರಿದುಹೋದ ನೀರನ್ನೇ ಮತ್ತೆ ಮೇಲಕ್ಕೆ ಪಂಪ್ ಮಾಡಿ ಅದೇ ನೀರಿನಿಂದ ಎರಡನೇ ಬಾರಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಇದಕ್ಕೆ ಸ್ವಲ್ಪ ವಿದ್ಯುತ್ ವೆಚ್ಚವಾಗುತ್ತದೆಯೇ ಹೊರತು ಮತ್ತೇನೂ ಬೇಕಿಲ್ಲ. ಒಂದು ಹನಿ ನೀರನ್ನೇ ಹಲವಾರು ಬಾರಿ ಬಳಕೆ ಮಾಡಿ ವಿದ್ಯುತ್ ಉತ್ಪಾದನೆ ಮಾಡುವುದು ಉತ್ತಮ ವಿಧಾನ ಎಂದು ಹೇಳಿದ್ದಾರೆ.ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೆಚ್ಚಿಸಲು ಹೈಡ್ರೋ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್‌ಗಳು (ಪಿಎಸ್‌ಪಿ) ಅಗತ್ಯ. ನೀರನ್ನು ಪುನರ್ಬಳಕೆ ಮಾಡುವುದರಿಂದ, ನೀರಾವರಿ ಯೋಜನೆಗೆ ನೀರಿನ ಕೊರತೆಯಾಗುವುದಿಲ್ಲ, ಬೇಸಿಗೆಯಲ್ಲಿ ನೀರಿನ ಕೊರತೆ ಇದ್ದಾಗಲೂ ನಿರಂತರವಾಗಿ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತದೆ ಎಂದು ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಹೇಳಿದರು.
21ನೇ ಬಾರಿ ಭರ್ತಿಯಾದ ಲಿಂಗನಮಕ್ಕಿ ಜಲಾಶಯಸಾಗರ: ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹಾಗೂ ವಿದ್ಯುತ್ ಉತ್ಪಾದನೆಯ ಉದ್ದೇಶದಿಂದ ನಿರ್ಮಿಸಲಾಗಿರುವ ಲಿಂಗನಮಕ್ಕಿ ಜಲಾಶಯ 21ನೇ ಬಾರಿ ಭರ್ತಿಯಾಗಿದೆ. ಗರಿಷ್ಠ 1819 ಅಡಿಗಳಷ್ಟಿರುವ ಜಲಾಶಯದಲ್ಲಿ ನೀರಿನ ಮಟ್ಟ ಶುಕ್ರವಾರ 1815 ಅಡಿಗೆ ತಲುಪಿದ ಹಿನ್ನೆಲೆಯಲ್ಲಿ ಎಲ್ಲ 11 ರೇಡಿಯಲ್ ಗೇಟ್‍ಗಳ ಮೂಲಕ ಸುಮಾರು 40 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿದೆ.
ಗುರುವಾರ ಬೆಳಗ್ಗೆಯೇ ಮೂರು ಗೇಟ್‍ಗಳನ್ನು ತೆರೆದು ಸುಮಾರು 10 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗಿತ್ತು. ಸಂಜೆಯ ಹೊತ್ತಿಗೆ ನೀರಿನ ಒಳಹರಿವಿನ ಪ್ರಮಾಣ ಜಾಸ್ತಿಯಾಗಿದ್ದರಿಂದ 9 ಬಾಗಿಲುಗಳನ್ನು ತೆರೆದು ಸುಮಾರು 18 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಯಿತು. ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಜಲಾಶಯಕ್ಕೆ ಸುಮಾರು ಒಂದು ಲಕ್ಷ ಕ್ಯುಸೆಕ್ ನೀರು ಹರಿದುಬರುತ್ತಿರುವುದರಿಂದ ಎಲ್ಲ 11 ಗೇಟ್‍ಗಳನ್ನು 3ಅಡಿಗಳಷ್ಟು ತೆರೆದು 40ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಮಳೆ ಮುಂದುವರೆದು ಒಳಹರಿವಿನ ಪ್ರಮಾಣ ಜಾಸ್ತಿಯಾದರೆ ಗೇಟ್‍ಗಳನ್ನು ಇನ್ನಷ್ಟು ಎತ್ತರಿಸಿ ಮತ್ತಷ್ಟು ನೀರನ್ನು ಹೊರಬಿಡಲಾಗುವುದು.ವಿದ್ಯುತ್ ಉತ್ಪಾದನೆಯ ಏಕೈಕ ಉದ್ದೇಶದಿಂದ 1964ರಲ್ಲಿ ನಿರ್ಮಿಸಲಾಗಿರುವ ಲಿಂಗನಮಕ್ಕಿ ಜಲಾಶಯ ಇದುವರೆಗೆ 23 ಬಾರಿ ಭರ್ತಿಯಾಗಿದೆ. ಶರಾವತಿ ಜಲಾನಯನ ಪ್ರದೇಶದಲ್ಲಿ ಕಳೆದ ಎರಡು ತಿಂಗಳಿನಿಂದ ವ್ಯಾಪಕ ಮಳೆಯಾಗಿದೆ. ಈ ಕಾರಣದಿಂದ ಜಲಾಶಯ ನಿರೀಕ್ಷೆಗಿಂತ ಮುನ್ನವೇ ಭರ್ತಿಯಾಗಿ ಆಗಸ್ಟ್ ಆರಂಭದಲ್ಲಿಯೇ ಗೇಟ್ ತೆರೆದು ನೀರನ್ನು ಬಿಟ್ಟಿರುವುದು ಇದೇ ಮೊದಲು. 2019ರಲ್ಲಿ ಆಗಸ್ಟ್ ತಿಂಗಳೊಂದರಲ್ಲಿ ಜಲಾಶಯಕ್ಕೆ 104 ಟಿಎಂಸಿ ನೀರು ಹರಿದು ಬಂದಿರುವುದು ಇದುವರೆಗಿನ ದಾಖಲೆಯಾಗಿತ್ತು. ಆ ವರ್ಷ ಆಗಸ್ಟ್ ಎರಡನೇ ವಾರದಲ್ಲಿ ಜಲಾಶಯ ಭರ್ತಿಯಾಗಿ ನದಿಗೆ ನೀರು ಬಿಡಲಾಗಿತ್ತು. ಆದರೆ ಈ ಬಾರಿ ಜಲಾಶಯಕ್ಕೆ ಜುಲೈ ತಿಂಗಳಿನಲ್ಲಿಯೇ 115 ಟಿಎಂಸಿ ನೀರು ಹರಿದುಬಂದು ಹಿಂದಿನ ದಾಖಲೆಯನ್ನು ಮುರಿದಿದೆ.ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹುಟ್ಟುವ ಶರಾವತಿ ನದಿ ಹೊಸನಗರ, ಸಾಗರ, ಗೇರುಸೊಪ್ಪ ಮಾರ್ಗವಾಗಿ ಹರಿದು ಹೊನ್ನಾವರದಲ್ಲಿ ಸಮುದ್ರವನ್ನು ಸೇರುತ್ತದೆ. ಈ ನಡುವೆ ನದಿಗೆ ಎರಡು ಅಣೆಕಟ್ಟುಗಳನ್ನು (ಗೇರುಸೊಪ್ಪ ಟೇಲ್‍ರೇಸ್ ಸೇರಿದಂತೆ) ಕಟ್ಟಲಾಗಿದ್ದು, ಈ ಎರಡು ಜಲಾಶಯಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಲಿಂಗನಮಕ್ಕಿ ಜಲಾಶಯದಲ್ಲಿ ಮೂರು ವಿದ್ಯುತ್ ಉತ್ಪಾದನಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿಯೇ ಹೆಚ್ಚಿನ ಪ್ರಮಾಣದ ವಿದ್ಯುತ್ ಉತಾದನೆಯಾಗುತ್ತದೆ. ಉಳಿದಂತೆ ಚಕ್ರಾ-ಸಾವೆಹಕ್ಲು ಹಾಗೂ ಗೇರುಸೊಪ್ಪ ಟೇಲ್‍ರೇಸ್‍ಗಳಲ್ಲಿ ಕೂಡ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಎಲ್ಲ ಜಲಾಶಯಗಳಿಂದ ಕನಿಷ್ಟ ವೆಚ್ಚದಲ್ಲಿ ವಿದ್ಯುತ್ ಉತ್ಪಾದನೆಯಾಗುವುದರಿಂದ ಲಿಂಗನಮಕ್ಕಿ ಜಲಾಶಯ ತುಂಬಿದರೆ ಆಳುವ ಸರ್ಕಾರಗಳಿಗೆ, ಜನರಿಗೆ ಎಲ್ಲಿಲ್ಲದೆ ಸಂತೋಷವನ್ನುಂಟುಮಾಡುತ್ತದೆ.ನದಿಪಾತ್ರದ ಜನರಿಗೆ ಆತಂಕ:
ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿರುವುದು ಒಂದೆಡೆ ಸಂತೋಷದ ಸಂಗತಿಯಾದರೆ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರನ್ನು ಹೊರಬಿಡುವುದ ರಿಂದ ನದಿಪಾತ್ರದ ಜನರಿಗೆ ಆತಂಕದ ಸಂಗತಿಯಾಗಿದೆ. ನದಿ ನೀರು ಸಾಗರದಿಂದ ಹೊನ್ನಾವರದಲ್ಲಿ ಸಮುದ್ರ ಸೇರುವವರೆಗೆ ನದಿಪಾತ್ರದಲ್ಲಿ ನೂರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಜಲಾಶಯದಿಂದ ಬಿಡುವ ಅಪಾರ ಪ್ರಮಾಣದ ನೀರಿನಿಂದ ಉಂಟಾಗುವ ಪ್ರವಾಹದಿಂದ ನದಿಪಾತ್ರದ ಜನರ ಮನೆ, ಕೊಟ್ಟಿಗೆ, ಕೃಷಿಭೂಮಿ, ಅಡಕೆ ತೋಟಗಳು ಜಲಾವೃತವಾಗುತ್ತವೆ. ಹಾಗಾಗಿ ಇಲ್ಲಿನ ಜನರು ಕ್ಷಣಕ್ಷಣಕ್ಕೂ ಆತಂಕದಲ್ಲಿ ಕಾಲಕಳೆಯುತ್ತಾರೆ.ಬಾಕ್ಸ್: 1ದೀಪದ ಬುಡ ಕತ್ತಲುಗಾದೆ ಮಾತಿನಂತೆ ರಾಜ್ಯಕ್ಕೆ ಬೆಳಕು ನೀಡುತ್ತಿರುವ ಲಿಂಗನಮಕ್ಕಿ ಜಲಾಶಯ ನಿರ್ಮಾಣದಿಂದ ಸಾಗರ ತಾಲ್ಲೂಕಿನ ತುಮರಿ, ಬ್ಯಾಕೋಡು ಹೋಬಳಿಯ ನೂರಾರು ಕುಟುಂಬಗಳ ಸಾವಿರಾರು ಜನ ತಮ್ಮ ಇಡೀ ಬದುಕನ್ನೇ ಕಳೆದುಕೊಂಡಿರುವುದು ಈಗ ಇತಿಹಾಸ. ಮೊದಲು ಮಡೆನೂರಿನಲ್ಲಿ ಅಣೆಕಟ್ಟು ಕಟ್ಟಲಾಗಿತ್ತು. ಆಗ ಒಂದಷ್ಟು ಜನರು ಬದುಕನ್ನು ಕಳೆದಕೊಂಡಿದ್ದರು. ನಂತರ ಮಡೆನೂರಿನಿಂದ ಕೆಲವೇ ಕಿ.ಮೀ. ದೂರದಲ್ಲಿ ಹೆಚ್ಚು ನೀರಿನ ಸಂಗ್ರಹಣಾ ಸಾಮರ್ಥ್ಯದ ಲಿಂಗನಮಕ್ಕಿ ಜಲಾಶಯ ನಿರ್ಮಾಣ ಮಾಡಿದಾಗ ಮುಳುಗಡೆ ಸಂತ್ರಸ್ತರ ಸಂಖ್ಯೆ ಜಾಸ್ತಿಯಾಯಿತು. ಆದರೆ ಖೇದದ ಸಂಗತಿಯೆಂದರೆ ಇಷ್ಟು ವರ್ಷಗಳಾದರೂ ಈ ಭಾಗದ ಮುಳುಗಡೆ ಸಂತ್ರಸ್ತರ ಬವಣೆ ಕೊನೆಗೊಂಡಿಲ್ಲ. ಯಾವ ಸರ್ಕಾರಗಳೂ ಪುನರ್ವಸತಿ ಸೌಲಭ್ಯ, ಮೂಲಭೂತ ಸೌಕರ್ಯದ ವಿಷಯದಲ್ಲಿ ಗಂಭೀರ ಕ್ರಮಗಳನ್ನು ಕೈಗೊಂಡಿಲ್ಲ ಎನ್ನಲೇಬೇಕು. ಇಂದಿಗೂ ಶರಾವತಿ ಮುಳುಗಡೆ ಸಂತ್ರಸ್ತರ ಬವಣೆ ಚುನಾವಣಾ ರಾಜಕೀಯದ ವಿಷಯಕ್ಕೆ ಸೀಮಿತವಾಗಿದೆ.---------------------------ಬಾಕ್ಸ್...2
2000ರಿಂದ 2024 ರವರೆಗೆ ಗರಿಷ್ಠ ನೀರು ಸಂಗ್ರಹದ ವಿವರವರ್ಷ ಅಡಿ2000- 1816.952001-1795
2002-1789.092003-17952004-18082005-1819
2006-18192007-18192008-1807.092009-1819
2010-1814.552011-1817.072012-1809.552013-1819
2014-18192015-1793.102016-1796.852017-1799.20
2018-18192019-18192020-1816.102021-1815.90
2022-1814.102023- 1788.252024- 1815------------------------------
ಪೋಟೊ:20ಸಾಗರ01ಲಿಂಗನಮಕ್ಕಿ ಜಲಾಶಯದಿಂದ ಗುರುವಾರ ನೀರು ಹೊರಬಿಡಲಾಯಿತು.-----------------ಪೋಟೊ:20ಸಾಗರ02
ಲಿಂಗನಮಕ್ಕಿ ಜಲಾಶಯದಿಂದ ಗುರುವಾರ ರಾತ್ರಿ ನೀರು ಹೊರಬಿಟ್ಟ ದೃಶ್ಯ.