ಮನಸ್ಸಿನ ಮಾಯೆಯ ಆಟವೇ ಕಥೆ, ಒದಗುವ ಭಾವನೆಗಳ ಆಟವೇ ಕವನ. ಜೀವನದಲ್ಲಿ ನೇರವಾಗಿ ಸಾಗುವ ಸಂಗತಿಗಳಿಗೆ ಒಂದು ತಿರುವು ಸಿಕ್ಕಾಗ ಅದು ಕಥೆಯಾಗುತ್ತದೆ.
ಕಾರವಾರ: ಬದುಕಿನ ನೇರ ಹಾದಿಯಲ್ಲಿ ಎದುರಾಗುವ ಅನಿರೀಕ್ಷಿತ ತಿರುವುಗಳೇ ಕಥೆಗಳಾಗಿ ರೂಪುಗೊಳ್ಳುತ್ತವೆ. ಮನಸ್ಸಿನೊಳಗೆ ನಡೆಯುವ ಭಾವನೆಗಳ ತಾಕಲಾಟಕ್ಕೆ ಕಥೆಯ ರೂಪ ಕೊಡುವುದೇ ಬರವಣಿಗೆಯ ಸೊಗಸು. ಅದೇ ರೀತಿ, ಕೆಲವೇ ಪದಗಳಲ್ಲಿ ಬದುಕಿನ ಆಳವಾದ ಅರ್ಥವನ್ನು ಕಟ್ಟಿಕೊಡುವುದೇ ಹನಿಗವನದ ವೈಶಿಷ್ಟ್ಯ ಎಂದು ಕನ್ನಡಪ್ರಭ ಸಂಪಾದಕ, ಖ್ಯಾತ ಕಥೆಗಾರ ಜೋಗಿ ಹಾಗೂ ಹನಿಗವನಗಳ ಮೂಲಕ ಜನಪ್ರಿಯರಾಗಿರುವ ಕವಿ ಡುಂಡಿರಾಜ್ ಅಭಿಪ್ರಾಯಪಟ್ಟರು.
ಹೊನ್ನಾವರದ ಆಶ್ರಯಂ ರೆಸಾರ್ಟ್ನಲ್ಲಿ ಅನುಭವ ಮಂಟಪ ಸಮಾಗಮ 2026ರ ವತಿಯಿಂದ ಭಾನುವಾರ ಆಯೋಜಿಸಿದ್ದ ''''''''''''''''ಹನಿಕಥಾ ಕಮ್ಮಟ ಹಾಗೂ ಸರಸ ಸಂವಾದ'''''''''''''''' ಕಾರ್ಯಕ್ರಮದಲ್ಲಿ ಕಥೆ ಕಟ್ಟುವ ಕಲೆ ಮತ್ತು ಹನಿಗವನ ರಚನೆಯ ಕೌಶಲದ ಕುರಿತು ಅವರು ಮಾತನಾಡಿದರು.ಕಥೆಯೆಂದರೆ ಮನಸ್ಸಿನ ಮಾಯೆಯ ಆಟ
ಜೋಗಿ ಮಾತನಾಡಿ, "ಮನಸ್ಸಿನ ಮಾಯೆಯ ಆಟವೇ ಕಥೆ, ಒದಗುವ ಭಾವನೆಗಳ ಆಟವೇ ಕವನ. ಜೀವನದಲ್ಲಿ ನೇರವಾಗಿ ಸಾಗುವ ಸಂಗತಿಗಳಿಗೆ ಒಂದು ತಿರುವು ಸಿಕ್ಕಾಗ ಅದು ಕಥೆಯಾಗುತ್ತದೆ. ಒಂದು ಸಂಗತಿ ಸುಸ್ಥಿತಿಗೆ ಬರುವವರೆಗಿನ ಪಯಣವೂ ಕಥೆಯೇ ಆಗಿರುತ್ತದೆ. ಕಥೆಗೆ ಹಲವು ಮನಸ್ಸುಗಳು, ಹಲವು ಮಜಲುಗಳು ಇರುತ್ತವೆ. ಬದುಕಿನ ಎಲ್ಲ ಅವಕಾಶಗಳ ನಡುವೆ ನಾವು ಕಳೆದುಕೊಂಡಿದ್ದೇ ಕೆಲವೊಮ್ಮೆ ಕಥೆಯ ವಸ್ತುವಾಗುತ್ತದೆ " ಎಂದು ವಿಶ್ಲೇಷಿಸಿದರು.ಇನ್ನೊಬ್ಬರ ಒಳ್ಳೆಯತನವನ್ನು ಕಂಡಾಗ ನಮ್ಮ ಮೌಲ್ಯಗಳು ಬದಲಾಗುತ್ತವೆ. ಪ್ರತಿಯೊಬ್ಬರ ಮನಸ್ಸಿನೊಳಗೆ ಏನು ನಡೆಯುತ್ತಿದೆ ಎಂಬುದಕ್ಕೆ ಅವರೇ ಜವಾಬ್ದಾರರು. ಐತಿಹಾಸಿಕ ಕಾದಂಬರಿಗಳಿಗಿಂತ ವರ್ತಮಾನದ ಸನ್ನಿವೇಶಗಳಿಗೆ ಬರಹದ ಮೂಲಕ ಸ್ಪಂದಿಸುವುದು ಹೆಚ್ಚು ಇಷ್ಟ. ಪ್ರತಿ ಕಾಲಘಟ್ಟದಲ್ಲೂ ಹುಟ್ಟುವ ಕಥೆಗಳು ಆ ಕಾಲದ ಬದುಕು ಮತ್ತು ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ. ಹೀಗಾಗಿ ಆಯಾ ಕಾಲಘಟ್ಟದ ಕಥೆಗಳೂ ಅತ್ಯುತ್ತಮ ಕಥೆಗಳಾಗುವ ಸಾಧ್ಯತೆ ಹೊಂದಿವೆ ಎಂದು ಹೇಳಿದರು.
ಪದಗಳಿಗಿಂತ ಪದಗಳ ಜೋಡಣೆ ಮುಖ್ಯ: ಹನಿಗವನ ರಚನೆಯ ಸೂಕ್ಷ್ಮತೆಗಳನ್ನು ಬಿಡಿಸಿಟ್ಟ ಡುಂಡಿರಾಜ್, "ಅವಸರದಲ್ಲಿ ಬರೆದದ್ದು ಉತ್ತಮ ಕವನವಾಗಲಾರದು. ಸವಕಲು ಪ್ರಾಸಗಳಿಗಿಂತ ಓದುಗರಿಗೆ ಅನಿರೀಕ್ಷಿತವಾಗಿ ಎದುರಾಗುವ ಪ್ರಾಸಗಳು ಕವನಕ್ಕೆ ಹೊಸತನ ನೀಡುತ್ತವೆ. ಕವನದಲ್ಲಿ ಉತ್ತಮ ಶಬ್ದಗಳಿದ್ದರೆ ಮಾತ್ರ ಸಾಲದು; ಆ ಶಬ್ದಗಳನ್ನು ಯಾವ ಕ್ರಮದಲ್ಲಿ ಜೋಡಿಸುತ್ತೇವೆ ಎನ್ನುವುದೂ ಅಷ್ಟೇ ಮುಖ್ಯ. ಪದಗಳ ಆಯ್ಕೆ ಮತ್ತು ಜೋಡಣೆಯಲ್ಲೇ ಕವನದ ಸೊಗಸು ಅಡಗಿದೆ " ಎಂದು ವಿವರಿಸಿದರು.ಅವರ ಹನಿಗವನಗಳಲ್ಲಿನ ಪದಚಮತ್ಕಾರ, ಅನಿರೀಕ್ಷಿತ ತಿರುವು ಹಾಗೂ ಹಾಸ್ಯಪ್ರಜ್ಞೆ ಸಭಿಕರನ್ನು ನಗೆಗಡಲಲ್ಲಿ ತೇಲಿಸಿತು. ಜೋಗಿ ಅವರ ಕಥೆ ಕಟ್ಟುವ ಶೈಲಿಯೂ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚಿತು. ಇಬ್ಬರ ಮಾತುಗಳಿಗೂ ಸಭಿಕರಿಂದ ನಿರಂತರ ಚಪ್ಪಾಳೆ ವ್ಯಕ್ತವಾಯಿತು.
ಪ್ರಶ್ನೆಗಳಲ್ಲೂ ಇತ್ತು ಸಾಹಿತ್ಯದ ಸೊಗಡು: ಸಂವಾದಕಾರರಾಗಿ ಪಾಲ್ಗೊಂಡ ಮಾರುತಿ ಎನ್.ಎನ್. ಹಾಗೂ ಸುಶಾಂತ ಮುಂಗರವಳ್ಳಿ ತಮ್ಮ ಚುರುಕಾದ ಮತ್ತು ವಿಚಾರಪೂರ್ಣ ಪ್ರಶ್ನೆಗಳ ಮೂಲಕ ಸಂವಾದಕ್ಕೆ ಮತ್ತಷ್ಟು ಜೀವ ತುಂಬಿದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಎಡಿ ಹಾಗೂ ಇಓ ಮಟ್ಟದ ಅಧಿಕಾರಿಗಳು ಕಥೆ, ಕವನ ಬರವಣಿಗೆಯಲ್ಲಿ ತಮಗೆ ಎದುರಾಗುವ ಗೊಂದಲ ಮತ್ತು ಸವಾಲುಗಳನ್ನು ಮುಂದಿಟ್ಟರು. ಅವುಗಳಿಗೆ ಜೋಗಿ ಹಾಗೂ ಡುಂಡಿರಾಜ್ ತಮ್ಮ ಅನುಭವ, ಉದಾಹರಣೆ ಮತ್ತು ಸರಳ ವಿವರಣೆಗಳ ಮೂಲಕ ಪರಿಹಾರ ಸೂಚಿಸಿದರು.ಕೇವಲ ಉಪನ್ಯಾಸಕ್ಕೆ ಸೀಮಿತವಾಗದೆ, ಬರವಣಿಗೆಯ ಆಸಕ್ತರಿಗೆ ತಮ್ಮೊಳಗಿನ ಸೃಜನಶೀಲತೆಯನ್ನು ಗುರುತಿಸಿಕೊಳ್ಳಲು ಹಾಗೂ ಅಭಿವ್ಯಕ್ತಿಯ ಹೊಸ ದಾರಿಗಳನ್ನು ಕಂಡುಕೊಳ್ಳಲು ಈ ಕಮ್ಮಟ ವೇದಿಕೆಯಾಯಿತು.
ಕವನಕುಮಾರ್, ಸಂತೋಷ ಪಾಟೀಲ್, ವತ್ಸಲಾ ಮತ್ತಿತರರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿದ್ದರು.