ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಕೈ ಜೋಡಿಸಿ: ಎಲ್.ಆರ್.ಮಹದೇವಸ್ವಾಮಿ

| Published : Sep 05 2024, 12:32 AM IST

ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಕೈ ಜೋಡಿಸಿ: ಎಲ್.ಆರ್.ಮಹದೇವಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿಗಳು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದು, ದೇಶದ ಮೂಲೆ ಮೂಲೆಯಲ್ಲಿ ಬಿಜೆಪಿಗೆ ಹೆಚ್ಚು ಮಂದಿ ಸದಸ್ಯತ್ವ ಪಡೆಯುತ್ತಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರದ ಜನಪರ ಮತ್ತು ರೈತ ಪರ ಕಾರ್ಯಕ್ರಮಗಳು ಕಾರಣ. ಕೇಂದ್ರದ ಯೋಜನೆಗಳು ಗ್ರಾಮೀಣ ಪ್ರದೇಶವನ್ನೂ ತಲುಪುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಕೈಜೋಡಿಸಿ ಅತಿ ಹೆಚ್ಚು ಸದಸ್ಯರನ್ನು ನೋಂದಾಯಿಸಬೇಕು ಎಂದು ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ಬಿಜೆಪಿ ಎಸ್.ಸಿ ಮೋರ್ಚಾ ಪದಾಧಿಕಾರಿಗಳ ನೇತೃತ್ವದಲ್ಲಿ ಬಿಜೆಪಿ ಸದಸ್ಯತ್ವ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಪಕ್ಷದಲ್ಲಿ ಎಸ್ಸಿ ಮೋರ್ಚಾ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ದಿನದಿಂದ ಇಂದಿನವರೆಗೆ ದೇಶದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅದರಲ್ಲಿಯೂ ಭಾರತದ ಉದ್ಯಮ ಶೀಲತಾ ಶಕ್ತಿಯನ್ನು ಅವರ ಹೆಚ್ಚಿಸಿದ್ದಾರೆ ಎಂದರು.

ಪ್ರಧಾನಿಗಳು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದು, ದೇಶದ ಮೂಲೆ ಮೂಲೆಯಲ್ಲಿ ಬಿಜೆಪಿಗೆ ಹೆಚ್ಚು ಮಂದಿ ಸದಸ್ಯತ್ವ ಪಡೆಯುತ್ತಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರದ ಜನಪರ ಮತ್ತು ರೈತ ಪರ ಕಾರ್ಯಕ್ರಮಗಳು ಕಾರಣ ಎಂದರು.

ಕೇಂದ್ರದ ಯೋಜನೆಗಳು ಗ್ರಾಮೀಣ ಪ್ರದೇಶವನ್ನೂ ತಲುಪುತ್ತಿದೆ. ರಾಜ್ಯದಲ್ಲಿಯೂ ಕೂಡ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಹೋರಾಟ, ನಾಯಕತ್ವವನ್ನು ಮೆಚ್ಚಿ ಜನ ಬಿಜೆಪಿ ಸದಸ್ಯತ್ವ ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದ ಮೂಲೆ ಮೂಲೆಯಲ್ಲೂ ಕೂಡ ನಮ್ಮ ಪಕ್ಷ ಬಿಜೆಪಿ ಗೆ ಅತೀ ಹೆಚ್ಚಿನ ಸದಸ್ಯರನ್ನು ಪಡೆಯುತ್ತಿದ್ದಾರೆ. ಕಳೆದ ಬಾರಿಯ ಸದಸ್ಯತಾ ಅಭಿಯಾನಕ್ಕಿಂತ ಈ ಬಾರಿ ಹೆಚ್ಚಿನ ಸಂಖ್ಯಾಬಲವನ್ನು ಜನತೆ ನೀಡುತ್ತಾರೆ ಎಂಬ ಅಭಿಪ್ರಾಯವಿದೆ. ಭಾರತವು ಅತ್ಯಂತ ಹೆಚ್ಚಿನ ಔದ್ಯಮಿಕ ಸಾಮರ್ಥ್ಯವನ್ನು ಹೊಂದಿದ್ದು ನಮ್ಮ ದೇಶವನ್ನು ಉದ್ಯೋಗ ಅರಸುವ ದೇಶದ ಬದಲಿಗೆ ಉದ್ಯೋಗ ಹೊರ ಹೊಮ್ಮಿಸಬೇಕಿದೆ ಎಂದರು.

ಹೊಸ ಮೂಲಸೌಕರ್ಯ ಆಧುನಿಕ ಮತ್ತು ಸರಿಯಾದ ಸವಲತ್ತುಗಳನ್ನು ಒದಗಿಸುವುದು ಕೈಗಾರಿಕೆಗಳ ಬೆಳವಣಿಗೆಗೆ ಅತ್ಯಗತ್ಯ. ಕೇಂದ್ರ ಸರ್ಕಾರವು ಕೈಗಾರಿಕಾ ಕಾರಿಡಾರ್ ಗಳು ಮತ್ತು ಸ್ಮಾರ್ಟ್ ಸಿಟಿಗಳನ್ನು ರಚಿಸುವ ಮೂಲಕ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಅತಿವೇಗದ ಸಂವಹನ ಹಾಗೂ ಏಕೀಕೃತ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ. ಹೊಸ ವಲಯವಾದ ಮೇಕ್ ಇನ್ ಇಂಡಿಯಾವು ಉತ್ಪಾದನಾ, ಮೂಲಸೌಕರ್ಯ ಮತ್ತು ಸೇವಾ ಕ್ಷೇತ್ರದಲ್ಲಿ ಮಹೋನ್ನತ ಗುರಿಯತ್ತ ಮುಂದೆ ಸಾಗುತ್ತಿದೆ ಎಂದರು.

ಮಾಜಿ ಶಾಸಕ ಬಿ.ಹರ್ಷವರ್ಧನ್ ಮಾತನಾಡಿ, ನಮ್ಮ ರಾಷ್ಟ್ರವನ್ನು ಬಲಿಷ್ಠಗೊಳಿಸಲು ವಿಶ್ವ ಗುರು ಭಾರತವನ್ನು ನಿರ್ಮಿಸಲು ನಾವೆಲ್ಲರೂ ಕೂಡ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡು ಅತೀ ಹೆಚ್ಚು ಸದಸ್ಯರ ನೋಂದಣಿ ಮಾಡಿಸುವ ಮೂಲಕ ಭಾರತ ನೆಲದಲ್ಲಿ ಬಿಜೆಪಿ ಯನ್ನು ಗಟ್ಟಿಗೊಳಿಸಬೇಕು. ವಿಸಿತ ಭಾರತದ ಗುರಿಗೆ ನಾವೆಲ್ಲರೂ ಮೋದಿ ಅವರೊಟ್ಟಿಗೆ ಕೈ ಜೋಡಿಸಬೇಕು ಎಂದರು.

ಬಿಜೆಪಿ ಜಿಲ್ಲಾ ಮಾಜಿ ಅಧ್ಯಕೆ ಮಂಗಳಾ ಸೋಮಶೇಖರ್, ಎಸ್. ಮಹದೇವಯ್ಯ, ಎಸ್ಸಿ ಮೋರ್ಚಾದ ಅನಿಲ್, ಸಿ.ಎಂ. ಮಹದೇವಯ್ಯ, ಎಸ್ಸಿ ಮೋರ್ಚಾ ಪದಾಧಿಕಾರಿಗಳು, ಮಂಡಲದ ಅಧ್ಯಕ್ಷರು ಇದ್ದರು.