ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಪೂರಿಗಾಲಿ ಹನಿ ನೀರಾವರಿ ಯೋಜನೆ ಸದ್ಭಳಕೆ ಬಗ್ಗೆ ರೈತರು ಅರಿವು ಪಡೆದು ಯೋಜನೆ ಯಶಸ್ವಿಗೆ ಕೈ ಜೋಡಿಸಬೇಕು ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಮನವಿ ಮಾಡಿದರು.ತಾಲೂಕು ಪಂಚಾಯಿತಿ ಶಾಸಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜಿಪುರ ಹೋಬಳಿಯ ಭೂಮಿಯಲ್ಲಿ ಹಸಿರು ಕಂಡು ರೈತರ ಬದುಕು ಹಸನಾಗಬೇಕೆಂಬ ಹಂಬಲದೊಂದಿಗೆ ಹನಿ ನೀರಾವರಿ ಯೋಜನೆ ಜಾರಿಗೆ ತರಲಾಗಿದೆ. ರೈತರ ಸಹಕಾರದಿಂದ ಮಾತ್ರ ಯೋಜನೆ ಫಲವನ್ನು ಪಡೆಯಲು ಸಾಧ್ಯ ಎಂದರು.ಹನಿ ನೀರಾವರಿ ಯೋಜನೆಯೂ 7 ವರ್ಷಗಳ ನಂತರ ರೈತ ಬಂಧುಗಳಿಗೆ ಫಲ ದೊರೆಯುವ ಕಾಲ ಸನ್ನಿಹವಾಗಿದೆ. ರೈತರು ಯೋಜನೆ ಸಫಲತೆ ಪಡೆದುಕೊಳ್ಳಬೇಕಾದರೇ ಸಂಪೂರ್ಣ ಸಹಕಾರ ಆಗತ್ಯವಾಗಿದೆ ಎಂದು ತಿಳಿಸಿದರು. ಹನಿ ನೀರಾವರಿ ಯೋಜನೆಯಲ್ಲಿ ರೈತರ ಜವಾಬ್ದಾರಿ, ಭವಿಷತ್ ಮತ್ತು ಬೆಳೆ ಪದ್ದತಿ ನಿರಂತರವಾಗಿರುತ್ತದೆ. ಸಾಮೂಹಿಕ ಕೃಷಿ ಪದ್ದತಿ ಮತ್ತು ಏಕ ಬೆಳೆ ಪದ್ದತಿಯಿಂದ ಮಾತ್ರ ಲಾಭದಾಯಕ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯ ಎಂಬುದನ್ನು ರೈತರಿಗೆ ತಿಳಿಸಬೇಕು. ರೈತರು ಸಾಂಘೀಕ ಕೃಷಿ ಚಟುವಟಿಕೆಗೆ ಪ್ರಾಮಾಣಿಕವಾಗಿ ತೊಡಗಿಕೊಳ್ಳುವಂತೆ ಮಾಡಿ ಅವರ ಒಪ್ಪಿಗೆ ಆಧಾರದ ಮೇಲೆ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಬಿಜಿಪುರ ಹೋಬಳಿಯಾಧ್ಯಂತ ಮಾಹಿತಿ ಕೊರತೆ ಇರುವ ಫಲಾನುಭವಿಗಳ ಸಭೆ ನಡೆಸಿ ಯೋಜನೆ ಅನುಕೂಲಗಳ ಬಗ್ಗೆ ಅರಿವು ಮೂಡಿಸಲಾಗಿತ್ತು. ಮತ್ತೊಂದು ಬಾರಿ ನೀರಾವರಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಸಂಪೂರ್ಣ ಅರ್ಥ ಮಾಡಿಸುವ ಪ್ರಯತ್ನ ಮಾಡಲಾಗುವುದು. ನೂತನ ಕೃಷಿ ಪದ್ಧತಿ, ಹೊಸ ಆವಿಷ್ಕಾರ ರೈತನೇ ಯಜಮಾನ, ರೈತನೇ ತೀರ್ಮಾನ, ರೈತನೇ ಭವಿಷತ್, ರೈತನೇ ಎಲ್ಲಾ ರೀತಿಯಲ್ಲಿ ಆದಾಯ ಕಾಣುಬೇಕೆಂದು ಹನಿ ನೀರಾವರಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ರೈತರು ಅಭಿವೃದ್ದಿಯಲ್ಲಿ ರಾಜಕೀಯ ಮಾಡದೇ ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ಸಹಕಾರ ನೀಡಿ ಅಭಿವೃದ್ದಿಯಲ್ಲಿ ಮುನ್ನುಡಿ ಬರೆಯಬೇಕೆಂದು ಕರೆ ನೀಡಿದರು.ಯೋಜನೆಯಡಿ ಈಗಾಗಲೇ 26 ಸಂಘವನ್ನು ಸ್ಥಾಪಿಸಿ ಒಂದು ಸಾವಿರ ಎಕರೆಗೆ ಒಂದು ಸಂಘದಂತೆ ಭೂ ಮಾಲೀಕತ್ವದ ಆಧಾರದ ಮೇಲೆ 100 ರಿಂದ 200 ರೈತರು ಸಂಘದ ಸದಸ್ಯರನ್ನಾಗಿ ಮಾಡಲಾಗಿದೆ. ಸಾಮೂಹಿಕ ಕೃಷಿಯಲ್ಲಿ ಎಷ್ಟು ಅವಧಿಯಲ್ಲಿ ಯಾವ ಬೆಳೆ ಬೆಳೆಯಬೇಕು ಎನ್ನುವ ನಿರ್ಧಾರವನ್ನು ಸಂಘದ ಸದಸ್ಯರೇ ತೆಗೆದುಕೊಳ್ಳಬಹುದು ಎಂದರು.
ಬೆಲೆ ನಿಗದಿಯ ಹಕ್ಕನ್ನು ರೈತರೇ ಹೊಂದಿರುವುದರಿಂದ ಆಧುನಿಕ ಕೃಷಿಯಲ್ಲಿ ಬರುವ ಲಾಭವನ್ನು ಜಮೀನಿನ ಆಧಾರದ ಮೇಲೆ ಹಂಚಿಕೊಳ್ಳವ ಅವಕಾಶ ಇದ್ದು, ಬೆಳೆ ಮತ್ತು ಮಾರುಕಟ್ಟೆ ಮಳವಳ್ಳಿಯಲ್ಲಿ ಪ್ರಾರಂಭವಾಗುತ್ತದೆ ಎನ್ನುವ ಯೋಜನೆಯ ನಿಜವಾದ ಅರ್ಥವನ್ನು ರೈತರು ತಿಳಿದುಕೊಳ್ಳಬೇಕಿದೆ ಎಂದು ಶಾಸಕರು ಮನವರಿಕೆ ಮಾಡಿದರು. ಚುನಾವಣಾ ನೀತಿ ಸಂಹಿತೆಯಿಂದಾಗಿ ಮಂದಗತಿಯಲ್ಲಿದ್ದ ಅಭಿವೃದ್ದಿ ಕಾರ್ಯಗಳಿಗೆ ಚುರುಕುಗೊಳಿಸಲು ಅಧಿಕಾರಿಗಳ ಸಭೆ ನಡೆಸಿ ಹಲವು ಸೂಚನೆಗಳನ್ನು ನೀಡಲಾಗಿದೆ. ಸಾವಿರಾರು ಎಕರೆ ಸರ್ಕಾರಿ ಭೂಮಿ ಅಕ್ರಮವಾಗಿ ಖಾತೆಯಾಗಿರುವ ಬಗ್ಗೆ ತನಿಖೆಯ ವೇಗ ಹೆಚ್ಚಿಸಲಾಗಿದೆ. ತಾಲೂಕಿನಲ್ಲಿ ಅಕ್ರಮಗಳ ದಂಧೆಗೆ ಕಡಿವಾಣ ಹಾಕಲು ತಾಲೂಕು ಆಡಳಿತದ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳಲು ಸಲಹೆ ನೀಡಲಾಗಿದೆ ಎಂದು ಹೇಳಿದರು.