ಮಿಷನ್ ವಿದ್ಯಾಕಾಶಿ ಯಶಸ್ಸಿಗೆ ಕೈಜೋಡಿಸಿ: ಡಿಸಿ

| Published : Feb 08 2025, 12:34 AM IST

ಸಾರಾಂಶ

ಮಕ್ಕಳಲ್ಲಿ ಕನ್ನಡ ಓದುವ ಹವ್ಯಾಸ ಬೆಳೆಸಬೇಕು. ಕಥೆ, ಲೇಖನ, ದಿನಪತ್ರಿಕೆ ಓದುವುದನ್ನು ರೂಢಿಗತ ಮಾಡಿಸಬೇಕು. ಕಿರು ಪರೀಕ್ಷೆಗಳಲ್ಲಿ ಕನ್ನಡ ವಿಷಯದಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಚಾಕಲೇಟ್ ನೀಡಿ ಪ್ರೋತ್ಸಾಹಿಬೇಕು.

ಹುಬ್ಬಳ್ಳಿ:

ಧಾರವಾಡ ಜಿಲ್ಲೆಯು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ರ‍್ಯಾಂಕ್ ಪಡೆಯುವಲ್ಲಿ ವಿಫಲವಾಗುತ್ತಿದೆ. ಹೀಗಾಗಿ ಮಿಷನ್ ವಿದ್ಯಾಕಾಶಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶ ಸಾಧಿಸಲು ಶಿಕ್ಷಕರು ಹಾಗೂ ಪಾಲಕರ ಸಹಕಾರ ಅಗತ್ಯ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಇಲ್ಲಿನ ಸದಾಶಿವನಗರದ ಸರ್ಕಾರಿ ಉರ್ದು ಪ್ರೌಢಶಾಲೆಗೆ ಶುಕ್ರವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು.

ಈ ಪ್ರೌಢಶಾಲೆಯಲ್ಲಿ ಕನ್ನಡ ವಿಷಯದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದಾರೆ. ಹೀಗಾಗಿ ಮಕ್ಕಳಲ್ಲಿ ಕನ್ನಡ ಓದುವ ಹವ್ಯಾಸ ಬೆಳೆಸಬೇಕು. ಕಥೆ, ಲೇಖನ, ದಿನಪತ್ರಿಕೆ ಓದುವುದನ್ನು ರೂಢಿಗತ ಮಾಡಿಸಬೇಕು. ಕಿರು ಪರೀಕ್ಷೆಗಳಲ್ಲಿ ಕನ್ನಡ ವಿಷಯದಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಚಾಕಲೇಟ್ ನೀಡಿ ಪ್ರೋತ್ಸಾಹಿಬೇಕು. ಬೇರೆ ವಿದ್ಯಾರ್ಥಿಗಳು ಸಹ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳಿಸುವರು. ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕಿದೆ ಎಂದರು.

ಶಿಕ್ಷಕರು, ಪಾಲಕರು, ಎಸ್‌ಡಿಎಂಸಿ ಸದಸ್ಯರು ಜಂಟಿಯಾಗಿ ಮಕ್ಕಳು ಅಭ್ಯಾಸ ಮಾಡುವಂತೆ ಪ್ರೋತ್ಸಾಹಿಸಬೇಕು. ಮಕ್ಕಳ ಆತ್ಮವಿಶ್ವಾಸ ವೃದ್ಧಿಸುವ ಕೆಲಸಗಳಾಗಬೇಕಿದೆ. ನಾಲ್ಕೈದು ದಿನ ಮಕ್ಕಳು ಶಾಲೆಗೆ ಹಾಜರಾಗದಿದ್ದರೆ, ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ, ಅವರ ಮನವೊಲಿಸಬೇಕು ಎಂದು ತಿಳಿಸಿದರು.

ಇದೇ ವೇಳೆ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಕುರಿತು ಜಿಲ್ಲಾಧಿಕಾರಿಗಳು ಪಾಲಕರ ಸಭೆ ನಡೆಸಿ ಫಲಿತಾಂಶ ಸುಧಾರಣೆಗೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.

ಜಿಪಂ ಸಿಇಒ ಭುವನೇಶ ಪಾಟೀಲ, ಮುಖ್ಯೋಪಾಧ್ಯಾಯರಾದ ಅಷ್ಪಾಕ್ ಹಿರೇಕುಂಬಿ ಮಾತನಾಡಿದರು. ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪಗೌಡ್ರ, ಎಸ್‌ಡಿಎಂಸಿ ಸದಸ್ಯ ಸಲೀಂ ಹೆಬ್ಬಳ್ಳಿ, ಅಂಜು ಕತ್ತಿಬ್, ಜರತಾರಘರ, ಮಹ್ಮದ್ ಶರೀಫ್ ಮೊರಬ ಸೇರಿದಂತೆ ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು.