ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ರಾಜಕೀಯವನ್ನು ಚುನಾವಣೆಗೆ ಸೀಮಿತಗೊಳಿಸಿ ಸಂಘದ ಅಭಿವೃದ್ಧಿಗೆ ನಿರ್ದೇಶಕರು ಒಗ್ಗಟ್ಟಿನಿಂದ ಕೈ ಜೋಡಿಸಬೇಕು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.ತಾಲೂಕಿನ ಶೆಟ್ಟಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಹಾಗೂ ಸಾಮಾನ್ಯ ಸೇವಾ ಕೇಂದ್ರ ಉದ್ಘಾಟಿಸಿ ಮಾತನಾಡಿ, ಕೃಷಿ ಪತ್ತಿನ ಸಹಕಾರ ಸಂಘವು ಕೃಷಿ ಚಟುವಟಿಕೆಗಳಿಗೆ ಪೂರಕವಾಗುವ ಜೊತೆಗೆ ಸರ್ಕಾರದಿಂದ ಸಿಗುವ ಸೌಲಭ್ಯ ತಲುಪಿಸಲು ಸಹಕಾರಿಯಾಗಿದೆ ಎಂದರು.
ಸಂಕುಚಿತ ಮನಸ್ಥಿತಿ ದೂರಮಾಡಿ ವಿಶಾಲ ಮನೋಭಾವದಿಂದ ಸಂಘದ ಅಭಿವೃದ್ಧಿಗೆ ಮುಂದಾಗಬೇಕು. ತಾಲೂಕಿನಲ್ಲಿ ಹಲವು ಸಹಕಾರ ಸಂಘಗಳು ಉತ್ತಮ ಸ್ಥಿತಿಯಲ್ಲಿವೆ. ಅತ್ಯುತ್ತಮ ಕಟ್ಟಡಗಳನ್ನು ನಿರ್ಮಾಣ ಮಾಡಿಕೊಂಡು ಉತ್ತಮ ರೀತಿಯಲ್ಲಿ ಸಾರ್ವಜನಿಕರ ಸೇವೆಯಲ್ಲಿ ತೊಡಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.ಏಷ್ಯಾ ಖಂಡದಲ್ಲೆ ಅತ್ಯುತ್ತಮ ಸಹಕಾರ ಸಂಘ ಎಂದು ಹೆಸರು ಮಾಡಿದ್ದ ತಾಲೂಕಿನ ಒಂದು ಸಂಘವು ಕೆಳ ಹಂತವನ್ನು ತಲುಪಿದೆ. ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಪಡೆಯಲು ಸಹಕಾರ ಕ್ಷೇತ್ರದಲ್ಲಿ ಒಗ್ಗಟ್ಟು ಮುಖ್ಯ. ಶೆಟ್ಟಹಳ್ಳಿ ಸಂಘ ಉತ್ತಮ ಕಟ್ಟಡ ನಿರ್ಮಾಣ ಮಾಡಿದ್ದು, ಇದೇ ರೀತಿ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂದರು.
ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ಮಾಜಿ ಸಂಸದ ಜಿ.ಮಾದೇಗೌಡ ಅವರಿಂದ ಸುಮಾರು 50 ವರ್ಷಗಳ ಹಿಂದೆ ಉದ್ಘಾಟನೆಗೊಂಡ ಸಹಕಾರ ಸಂಘವು ಹೊಸ ಕಟ್ಟಡ ಹಾಗೂ ವಿವಿಧ ಸೌಲಭ್ಯದೊಂದಿಗೆ ಅತ್ಯುತ್ತಮ ರೀತಿಯಲ್ಲಿ ಮುಂದುವರೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಕೆ.ಎಂ.ಉಪಾಧ್ಯಕ್ಷ ಚಂದ್ರ, ಗ್ರಾಪಂ ಉಪಾಧ್ಯಕ್ಷ ಮನುಅರಸು, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಉಮೇಶ್, ಸಿಇಒ ವೀರಪ್ಪ, ಮುಖಂಡರಾದ ಕೃಷ್ಣಮೂರ್ತಿ, ನಾಗೇಶ್, ಚಿಕ್ಕಣ್ಣ, ದೇವರಾಜು ವಿಶ್ವಾಸ್, ಸಿದ್ದೇಗೌಡ, ಸಿದ್ದರಾಜು, ಮಂಜುನಾಥ್, ಸಿದ್ದರಾಜು, ಪ್ರೇಮಾ, ದೊಡ್ಡಚೌಡಮ್ಮ ಸೇರಿದಂತೆ ಇತರರು ಇದ್ದರು.