ಭಾರತದ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಯನ್ನು ಯಶಸ್ವಿಯಾಗಿಸಲು ದೇಶದ ಎಲ್ಲಾ ವಿವಿಗಳು, ಸಂಶೋಧನಾ ಸಂಸ್ಥೆಗಳು, ವಿಜ್ಞಾನಿಗಳು ಕೈಜೋಡಿಸುವ ಅಗತ್ಯವಿದೆ ಎಂದು ಇಸ್ರೋ ಮಾನವ ಬಾಹ್ಯಾಕಾಶ ಯಾನ ಕೇಂದ್ರದ ನಿಯಂತ್ರಕ ಎನ್.ಎಸ್.ಗೋವಿಂದರಾಜು ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಭಾರತದ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಯನ್ನು ಯಶಸ್ವಿಯಾಗಿಸಲು ದೇಶದ ಎಲ್ಲಾ ವಿವಿಗಳು, ಸಂಶೋಧನಾ ಸಂಸ್ಥೆಗಳು, ವಿಜ್ಞಾನಿಗಳು ಕೈಜೋಡಿಸುವ ಅಗತ್ಯವಿದೆ ಎಂದು ಇಸ್ರೋ ಮಾನವ ಬಾಹ್ಯಾಕಾಶ ಯಾನ ಕೇಂದ್ರದ ನಿಯಂತ್ರಕ ಎನ್.ಎಸ್.ಗೋವಿಂದರಾಜು ಕರೆ ನೀಡಿದರು.ತಾಲೂಕಿನ ತೋಳಹುಣಸೆ ಶಿವಗಂಗೋತ್ರಿಯ ದಾವಣಗೆರೆ ವಿವಿಯ ಎಂಬಿಎಂ ಸಭಾಂಗಣದಲ್ಲಿ ಬುಧವಾರ ದಾವಿವಿ ಹಾಗೂ ಇಸ್ರೋ ಮಾನವ ಬಾಹ್ಯಾಕಾಶ ಯಾನ ಕೇಂದ್ರದಿಂದ ಹಮ್ಮಿಕೊಂಡಿದ್ದ ಭಾರತದ ಮಾನವ ಬಾಹ್ಯಾಕಾಶ ಯಾನ ಸಂಶೋಧನೆಗೆ ಸಹಸ್ರ ಸಾಧ್ಯತೆಗಳು ಕುರಿತ ವಿಶೇಷ ಶೈಕ್ಷಣಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಗಗನಯಾನ ಯೋಜನೆಗೆ ದೇಶದ ವಿವಿಗಳ ಸಂಶೋಧನಾ ಸಹಕಾರ ಅಗತ್ಯ ಎಂದರು.
ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆ ಸಾಧಿಸುವ ಜತೆಗೆ ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಅಗತ್ಯ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಶೈಕ್ಷಣಿಕ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಾನವ ಸಹಿತ ಬಾಹ್ಯಾಕಾಶ ಯಾನ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹಲವು ಹಂತದ ಸಿದ್ಧತೆ ನಡೆದಿದ್ದು, ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿ ಸುಮಾರು 18 ದಿನ ವಿವಿಧ ಸಂಶೋಧನಾ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದು, ದೇಶದ ಬಾಹ್ಯಾಕಾಶ ಸಾಧನೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.ಇಸ್ರೋ ಮಾನವ ಬಾಹ್ಯಾಕಾಶ ಯಾನ ಕೇಂದ್ರದಲ್ಲಿ ನಾಲ್ವರು ಗಗನಯಾತ್ರಿಗಳಿಗೆ ತರಬೇತಿ ನೀಡಲಾಗುತ್ತಿದ್ದು, ಭಾರತೀಯ ತಂತ್ರಜ್ಞಾನದಲ್ಲಿಯೇ ಮಾನವ ಸಹಿತ ಬಾಹ್ಯಾಕಾಶ ನೌಕೆಯನ್ನು ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಗಗನಯಾನ ಯೋಜನೆಯಡಿ ಮೊದಲಿಗೆ ಮೂರು ಮಾನವ ರಹಿತ ಪರೀಕ್ಷಾ ಉಡಾವಣೆ ನಡೆಸಿ, ನಂತರ ಮಾನವ ಸಹಿತ ಎಚ್1 ಮಿಷನ್ ಕೈಗೊಳ್ಳುವ ಉದ್ದೇಶವಿದೆ. ಯೋಜನೆ ಯಶಸ್ಸಿಗೆ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಜೀವವಿಜ್ಞಾನ, ಗಣಿತ, ಎಂಜಿನಿಯರಿಂಗ್ ವಿಭಾಗಗಳ ಸಂಶೋಧಕರ ಸಹಕಾರ ಅತ್ಯಗತ್ಯ ಎಂದರು.
ವಿವಿಗಳು ಇಸ್ರೋದೊಂದಿಗೆ ಒಡಂಬಡಿಕೆ ಮಾಡಿಕೊಂಡು ಸಂಶೋಧನಾ ಯೋಜನೆ ರೂಪಿಸಬಹುದು. ಸಂಶೋಧನಾ ಪ್ರಸ್ತಾವನೆ ಸಿದ್ಧಪಡಿಸುವುದು, ಅನುದಾನ ಪಡೆಯುವುದು, ರಾಷ್ಟ್ರೀಯ ಮಟ್ಟದ ಯೋಜನೆಗಳಲ್ಲಿ ಭಾಗವಹಿಸುವ ಕುರಿತು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಹೆಚ್ಚಿನ ಆಸಕ್ತಿ ವಹಿಸಬೇಕು. ಇಸ್ರೋದ ಸ್ಟೆಮ್ ಪೋರ್ಟಲ್, ಯುವಿಕಾ, ಉನ್ನತಿ, ಇ-ಲರ್ನಿಂಗ್ ಹಾಗೂ ಭುವನ್ನಂತಹ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ವಿಜ್ಞಾನ, ಸಂಶೋಧನೆ ಬಗ್ಗೆ ತಿಳಿದುಕೊಳ್ಳಲು ಅವಕಾಶವಿದೆ ಎಂದು ವಿವರಿಸಿದರು.ಇಸ್ರೋ ಮಾನವ ಬಾಹ್ಯಾಕಾಶ ಯಾನ ಕೇಂದ್ರದ ಉಪ ನಿರ್ದೇಶಕ ರಾಜೇಂದ್ರ ಸಿಂಗ್ ಬ್ಯಾಳಿ ಮಾತನಾಡಿ, ಗ್ರಾಮೀಣ ಪ್ರದೇಶ, ಸಣ್ಣ ಪಟ್ಟಣಗಳ ವಿದ್ಯಾರ್ಥಿಗಳು ತಮ್ಮನ್ನು ನಗರಗಳ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಓದಿದ ವಿದ್ಯಾರ್ಥಿಗಳಿಗಿಂತ ಕಡಿಮೆಯೆಂದು ಭಾವಿಸಬಾರದು. ಪ್ರತಿಭೆ, ಪರಿಶ್ರಮ,ಆತ್ಮವಿಶ್ವಾಸವಿದ್ದರೆ ಐಐಟಿ, ಎನ್ಐಟಿ ಸೇರಿದಂತೆ ದೇಶದ ಯಾವುದೇ ಪ್ರತಿಷ್ಠಿತ ಸಂಸ್ಥೆಗಳ ವಿದ್ಯಾರ್ಥಿಗಳೊಂದಿಗೆ ಸಮಾನವಾಗಿ ಸ್ಪರ್ಧಿಸಬಹುದು ಎಂದರು.
ಉಪಗ್ರಹ ತಂತ್ರಜ್ಞಾನದ ದೈನಂದಿನ ಬಳಕೆ ಬಗ್ಗೆ ಎಲ್ಲರಿಗೂ ತಿಳಿದಿರಬೇಕು. ಬರ ಪರಿಸ್ಥಿತಿ ನಿರ್ಧರಿಸಲು ಉಪಗ್ರಹ ಚಿತ್ರ ಬಳಸಲಾಗುತ್ತದೆ. ಮೋಡಗಳ ಚಲನೆ, ಮಳೆಯ ಮುನ್ಸೂಚನೆ, ಗೂಗಲ್ ಮ್ಯಾಪ್ನಲ್ಲಿ ಸ್ಥಳ ಗುರುತಿಸುವಿಕೆ, ಉಪಗ್ರಹ ಆಧಾರಿತ ಪೊಸಿಷನಿಂಗ್, ನ್ಯಾವಿಗೇಷನ್ ಮತ್ತು ಟೈಮಿಂಗ್ ಸಂಪೂರ್ಣ ತಂತ್ರಜ್ಞಾನ ಅವಲಂಬಿಸಿದೆ. ಚಂದ್ರಯಾನ ಸೇರಿದಂತೆ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ಮೂಲತತ್ವಗಳು ಅತ್ಯಂತ ಪ್ರಮುಖವಾಗಿವೆ ಎಂದು ಹೇಳಿದರು.ಉಪಗ್ರಹಗಳ ಚಲನೆ ಮಾರ್ಗ ನಿರ್ಧಾರ, ಸೂರ್ಯ ಮತ್ತು ನಕ್ಷತ್ರ ಸಂವೇದಕಗಳ ಮೂಲಕ ದಿಕ್ಕು ಗುರುತಿಸುವಿಕೆ, ಗಣಿತದ ಮಾದರಿಗಳ ಸಿದ್ಧತೆ ಹಾಗೂ ಕಂಪ್ಯೂಟರ್ ಸಾಫ್ಟ್ವೇರ್ ಅಭಿವೃದ್ಧಿಯಲ್ಲಿ ಮೂಲ ವಿಜ್ಞಾನಗಳ ಜ್ಞಾನ ಬಳಕೆಯಾಗುತ್ತದೆ ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಪದವಿ ಹಂತದ ಮೂಲ ವಿಷಯಗಳಲ್ಲಿ ಉತ್ತಮ ಜ್ಞಾನ ಸಂಪಾದಿಸಬೇಕು. ಭಾರತದ ಗಗನಯಾನ ಯೋಜನೆ ಸುಮಾರು 400 ಕಿಮೀ ಎತ್ತರದ ಕಕ್ಷೆಗೆ ಇಬ್ಬರು ಗಗನಯಾತ್ರಿಗಳನ್ನು ಕಳುಹಿಸಿ, ಸುಮಾರು 2-3 ದಿನ ಬಾಹ್ಯಾಕಾಶದಲ್ಲಿರಿಸಿ ಸುರಕ್ಷಿತವಾಗಿ ಭೂಮಿಗೆ ಮರಳಿ ಕರೆ ತರುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ ಎಂದರು.
ಇಸ್ರೋ ಮಾನವ ಬಾಹ್ಯಾಕಾಶ ಯಾನ ಕೇಂದ್ರದ ವಿಜ್ಞಾನಿ ಡಾ.ಬಿ.ಎಚ್.ಎಂ.ದಾರುಕೇಶ ವಿಶೇಷ ಉಪನ್ಯಾಸ ನೀಡಿದರು. ದಾವಿವಿ ಕುಲ ಸಚಿವ ಎಸ್.ಬಿ.ಗಂಟಿ, ಪ್ರೊ.ಡಿ.ಜಿ.ಪ್ರಕಾಶ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ ನಿರ್ದೇಶಕ ಡಾ.ಹುಚ್ಚೇಗೌಡ ಸ್ವಾಗತಿಸಿ, ಸಹಾಯಕ ಪ್ರಾಧ್ಯಾಪಕಿ ಡಾ.ಅಶ್ವಿನಿ ನಿರೂಪಿಸಿ, ಡಾ.ಸತೀಶ್ ವಂದಿಸಿದರು.2040ಕ್ಕೆ ಚಂದ್ರನ ಮೇಲೆ ಗಗನಯಾತ್ರಿ ಯೋಜನೆ: ರಾಜೇಂದ್ರ ಸಿಂಗ್ ಬ್ಯಾಳಿ
ದಾವಣಗೆರೆ: ನಮ್ಮ ದೇಶದ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಯಲ್ಲಿ ಮಾನವ ಜೀವದ ಸುರಕ್ಷತೆ ಅತ್ಯಂತ ಮುಖ್ಯವಾಗಿರುವುದರಿಂದ ಪ್ಯಾರಾಚೂಟ್ ಪರೀಕ್ಷೆ, ಕ್ರ್ಯೂ ಎಸ್ಕೇಪ್ ವ್ಯವಸ್ಥೆ, ಪ್ಯಾಡ್ ಅಬಾರ್ಟ್ ಪರೀಕ್ಷೆ, ನೀರಿನಲ್ಲಿ ಇಳಿಯುವ ಕ್ಯಾಪ್ಸೂಲ್ಗಳ ಸುರಕ್ಷಿತ ಮರುಪಡೆಯುವಿಕೆ ಸೇರಿದಂತೆ ಹಲವು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಇಸ್ರೋ ಮಾನವ ಬಾಹ್ಯಾಕಾಶ ಯಾನ ಕೇಂದ್ರದ ಉಪ ನಿರ್ದೇಶಕ ರಾಜೇಂದ್ರ ಸಿಂಗ್ ಬ್ಯಾಳಿ ತಿಳಿಸಿದರು.ತಾಲೂಕಿನ ತೋಳಹುಣಸೆ ಶಿವಗಂಗೋತ್ರಿಯ ದಾವಣಗೆರೆ ವಿವಿ ಎಂಬಿಎಂ ಸಭಾಂಗಣದಲ್ಲಿ ಗುರುವಾರ ಭಾರತದ ಮಾನವ ಬಾಹ್ಯಾಕಾಶ ಯಾನ ಸಂಶೋಧನೆಗೆ ಸಹಸ್ರ ಸಾಧ್ಯತೆಗಳು ಕುರಿತ ವಿಶೇಷ ಶೈಕ್ಷಣಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, 2023ರಲ್ಲಿ ನಡೆದ ಟಿವಿ-ಡಿ1 ಪರೀಕ್ಷೆಯೂ ಈ ಪ್ರಕ್ರಿಯೆಯ ಪ್ರಮುಖ ಭಾಗವಾಗಿದೆ ಎಂದರು.
ಭಾರತೀಯ ನೌಕಾಪಡೆ, ಕರಾವಳಿ ರಕ್ಷಣಾ ಪಡೆ, ಡಿಆರ್ಡಿಓ, ಸಿಎಸ್ಐಆರ್ ಪ್ರಯೋಗಾಲಯಗಳು, ವೈದ್ಯಕೀಯ ಸಂಸ್ಥೆಗಳು, ವಿವಿಧ ವಿವಿಗಳು ಈ ಯೋಜನೆಯಲ್ಲಿ ಸಹಕರಿಸುತ್ತಿವೆ. ಹೀಗಾಗಿ ಗಗನಯಾನ ಕೇವಲ ಇಸ್ರೋದ ಯೋಜನೆಯಲ್ಲ, ಅದು ದೇಶದ ಸಮಗ್ರ ವೈಜ್ಞಾನಿಕ ಸಹಭಾಗಿತ್ವದ ರಾಷ್ಟ್ರೀಯ ಯೋಜನೆಯಾಗಿದೆ. ಗಗನಯಾನ ಯೋಜನೆಯ ಮುಂದಿನ ಹಂತವಾಗಿ 2035ರ ವೇಳೆಗೆ ಐದು ಮಾಡ್ಯೂಲ್ ಒಳಗೊಂಡ ಭಾರತೀಯ ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವ ಗುರಿ ಇದೆ ಎಂದರು.2040ರ ವೇಳೆಗೆ ಭಾರತೀಯ ಗಗನಯಾತ್ರಿಗಳನ್ನು ಚಂದ್ರನ ಮೇಲೆ ಇಳಿಸುವ ಮಹತ್ವಾಕಾಂಕ್ಷೆಯ ಯೋಜನೆಯೂ ಸಹ ಇದೆ. ಮುಂದಿನ ದಿನಗಳಲ್ಲಿ ಮಂಗಳ ಗ್ರಹದ ಅನ್ವೇಷಣೆಗೂ ಭಾರತ ಸಿದ್ಧತೆ ನಡೆಸಲಿದೆ. ಉನ್ನತಿ ಕಾರ್ಯಕ್ರಮದಡಿ ಕಾಲೇಜು ವಿದ್ಯಾರ್ಥಿಗಳು ಇಸ್ರೋ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಸಣ್ಣ ಉಪಗ್ರಹ ನಿರ್ಮಿಸುವ ತರಬೇತಿ ಪಡೆಯಬಹುದು. ವಿದ್ಯಾರ್ಥಿಗಳಿಗೆ ತಮ್ಮ ವಿಷಯಗಳಿಗನುಗುಣವಾಗಿ ಇಂಟರ್ನ್ಶಿಪ್, ಸಂಶೋಧನಾ ಯೋಜನೆಗಳಲ್ಲಿ ಭಾಗವಹಿಸುವ ಅವಕಾಶಗಳಿವೆ. ಇಂತಹ ಅವಕಾಶಗಳನ್ನು ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.