ಸಾರಾಂಶ
ಕಡೂರು, ಸರ್ಕಾರಿ ಶಾಲೆಗಳ ಉಳಿವಿಗಾಗಿ ಪೋಷಕರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಕೈ ಜೋಡಿಸಬೇಕಾದ ಅಗತ್ಯವಿದೆ ಎಂದು ಕಡೂರು ಪುರಸಭೆ ಹಿರಿಯ ಸದಸ್ಯ ಈರಳ್ಳಿ ರಮೇಶ್ ಹೇಳಿದರು.
- ಕೆ.ವಿ.ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಕ್ಕಳಿಗೆ ಶೂ, ಸಾಕ್ಸ್ , ಟ್ರಾಕ್‌ಸೂಟ್ ವಿತರಣೆ
ಕನ್ನಡಪ್ರಭ ವಾರ್ತೆ, ಕಡೂರುಸರ್ಕಾರಿ ಶಾಲೆಗಳ ಉಳಿವಿಗಾಗಿ ಪೋಷಕರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಕೈ ಜೋಡಿಸಬೇಕಾದ ಅಗತ್ಯವಿದೆ ಎಂದು ಕಡೂರು ಪುರಸಭೆ ಹಿರಿಯ ಸದಸ್ಯ ಈರಳ್ಳಿ ರಮೇಶ್ ಹೇಳಿದರು.
ಮಂಗಳವಾರ ಪಟ್ಟಣದ ಛತ್ರದ ಬೀದಿಯಲ್ಲಿರುವ ಕೆ.ವಿ.ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಕ್ಕಳಿಗೆ ಶೂ, ಸಾಕ್ಸ್ ಹಾಗೂ ಟ್ರಾಕ್‌ಸೂಟ್ ವಿತರಿಸಿ ಮಾತನಾಡಿದರು. ಅನೇಕ ದಶಕಗಳ ಇತಿಹಾಸ ಹೊಂದಿರುವ ಪಟ್ಟಣದ ವಿಶ್ವನಾಥ್ ಶೆಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಹಿಂದೆ 500 ಕ್ಕೂ ಹೆಚ್ಚಿನ ಮಕ್ಕಳು ಕಲಿಯುತ್ತಿದ್ದರು, ಕೊಠಡಿಗಳು ಸಾಕಾಗುತ್ತಿರಲಿಲ್ಲ ಆದರೆ ಬದಲಾದ ಶಿಕ್ಷಣದ ವ್ಯವಸ್ಥೆ ಖಾಸಗಿ ಶಾಲೆಗಳತ್ತ ಪೋಷಕರು ಮೊರೆ ಹೋಗುತ್ತಿರುವ ಇಂತಹ ಪರಿಸ್ಥಿತಿಯಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಲ್ಲಿ ಮೊದಲು ಪೋಷಕರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಶಾಲೆಯಲ್ಲಿ ಕಲಿತು ಉನ್ನತ ಹುದ್ದೆಗಳಲ್ಲಿ, ವ್ಯಾಪಾರ,ಉದ್ಯೋಗದಲ್ಲಿರುವ ಹಳೇ ವಿದ್ಯಾರ್ಥಿಗಳು ಶಾಲೆ ಉಳಿವಿಗಾಗಿ ಹೋರಾಟದ ಮನೋಭಾವನೆಯಿಂದ ಕಲಿಯುವ ಮಕ್ಕಳ ಶಿಕ್ಷಣಕ್ಕೆ ಕೈಲಾದ ಸಹಾಯ ಮಾಡುವ ಮೂಲಕ ಮಕ್ಕಳನ್ನು ಸರಕಾರಿ ಶಾಲೆಗಳತ್ತ ಆಕರ್ಷಿಸಲು ಸಾಧ್ಯವಿದೆ. ಇಲ್ಲವಾದರೆ ಸರ್ಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ನಾನೂ ಕೂಡ ಇದೇ ಶಾಲೆಯಲ್ಲಿ ಕಲಿತ ಹಳೇ ವಿದ್ಯಾರ್ಥಿಯಾಗಿದ್ದೇನೆ. ನನ್ನಂತೆ ಅನೇಕರು ಉದ್ಯೋಗ, ಸರ್ಕಾರಿ ನೌಕರಿ ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ತಾವುಗಳು ಕಲಿತ ಶಾಲೆಗಳತ್ತ ಒಮ್ಮೆ ಭೇಟಿ ನೀಡಿ ತಮ್ಮ ದುಡಿಮೆಯಲ್ಲಿ ಒಂದಿಷ್ಟು ಸಹಾಯ ಮಾಡಿದರೆ ಅಳಿವಿನ ಅಂಚಿನಲ್ಲಿರುವ ಸರ್ಕಾರಿ ಶಾಲೆಗಳಿಗೆ ಜೀವ ನೀಡಿದಂತಾಗುತ್ತದೆ ಎಂದು ಹಳೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಮತ್ತೋರ್ವ ದಾನಿ ಚೇತನ್ ದೇವರಕುರಿ ಟ್ರಾಕ್ ಸೂಟ್‌ಗಳನ್ನು ವಿತರಿಸಿ ಮಾತನಾಡಿ, ರಾಜ್ಯ ಸರ್ಕಾರ ಶಾಲೆಗಳಿಗೆ ಅನೇಕ ಸೌಲಭ್ಯ ನೀಡುತ್ತಿದ್ದು ಉತ್ತಮ ಶಿಕ್ಷಕರನ್ನು ಸಹ ನೀಡಿದೆ. ಆದರೆ ಪೋಷಕರು ಖಾಸಗಿ ಶಾಲೆಗಳನ್ನು ಅವಲಂಭಿ ಸುತ್ತಿರುವುದು ವಿಪರ್ಯಾಸದ ಸಂಗತಿ ಎಂದರು.ಶಾಲೆಯ ಮುಖ್ಯ ಶಿಕ್ಷಕಿ ಕೆ.ಸಿ.ಪ್ರೇಮ ಮಾತನಾಡಿ, ಕಳೆದ 28 ವರ್ಷಗಳಿಂದ ಈ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಮಕ್ಕಳ ಕೊರತೆಯಿಂದ ನೋವಾಗಿದೆ. ಪೋಷಕರು ಸಹಕಾರ ನೀಡಬೇಕು ಶಾಲೆಯಲ್ಲಿ ಯಾವುದೇ ಕೊರತೆ ಇಲ್ಲದಂತೆ ನಿಮ್ಮ ಮಕ್ಕಳನ್ನು ವಿದ್ಯಾವಂತರಾಗಿ ಮಾಡಿಸುವುದು ಪ್ರತಿಯೋರ್ವ ಶಿಕ್ಷಕರ ಕರ್ತವ್ಯವಾಗಿದೆ. ಯಾವುದೇ ಕಿವಿಮಾತುಗಳಿಗೆ ಗಮನಕೊಡದೆ ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಪೋಷಕರಿಗೆ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಾಕೇಶ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಸಿ.ಎಂ.ದ್ರಾಕ್ಷಾಯಣಿ, ಅತಿಥಿ ಶಿಕ್ಷಕ ಪ್ರವೀಣ್, ಅಂಗನವಾಡಿ ಶಿಕ್ಷಕಿಯರು, ಪೋಷಕರು ಹಾಗೂ ಮಕ್ಕಳು ಇದ್ದರು.12ಕೆಕೆಡಿಯು1.ಕಡೂರು ಪಟ್ಟಣದ ಛತ್ರದ ಬೀದಿಯಲ್ಲಿರುವ ಕೆ.ವಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಪುರಸಭೆ ಸದಸ್ಯ ಈರಳ್ಳಿ ರಮೇಶ್ ಮತ್ತು ಚೇತನ್ ದೇವರಕುರಿ ಟ್ರಾಕ್ ಸೂಟ್ ವಿತರಿಸಿದರು.