ಕನ್ನಡಪ್ರಭ ವಾರ್ತೆ ಮದ್ದೂರು

ಬಾಲ ಕಾರ್ಮಿಕ ಪದ್ಧತಿ ಸಂಪೂರ್ಣ ನಿರ್ಮೂಲನೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ನ್ಯಾಯಾಧೀಶರಾದ ನಂದಿನಿ ಕರೆ ನೀಡಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಬಾಲಕಾರ್ಮಿಕ ವಿರೋಧಿ ದಿನ ಉದ್ಘಾಟಿಸಿ ಮಾತನಾಡಿ, ಬಡತನ, ಆರ್ಥಿಕ ಸಂಕಷ್ಟ, ಕುಟುಂಬದ ಪರಿಸ್ಥಿತಿಯಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವ ಬದಲು ದುಡಿಮೆಗೆ ತಳ್ಳುತ್ತಿರುವ ಉದಾಹರಣೆಗಳು ಸಾಕಷ್ಟಿವೆ ಎಂದರು.

ಪ್ರತಿಯೊಂದು ಮಗು ಶಿಕ್ಷಣ ಪಡೆಯಲು, ಆಟವಾಡಲು ಮತ್ತು ಸುರಕ್ಷಿತ ವಾತಾವರಣದಲ್ಲಿ ಬೆಳೆಯುವ ಹಕ್ಕನ್ನು ಸಂವಿಧಾನ ಮತ್ತು ಕಾನೂನು ಮೂಲಕ ನೀಡಲಾಗಿದೆ. ಆದರೆ, ಎಲ್ಲಾ ಕಾಯ್ದೆಗಳು ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಸಹಾಯಕ ಸರ್ಕಾರಿ ಅಭಿಯೋಜಕ ಪ್ರೀತಮ್ ಡೇವಿಡ್ ಮಾತನಾಡಿ, ವಿಶ್ವದಲ್ಲಿ ಸುಮಾರು 10 ಮಕ್ಕಳಲ್ಲಿ ಒಂದು ಮಗು ಬಾಲಕಾರ್ಮಿಕ ಪದ್ಧತಿಗೆ ಒಳಗಾಗುತ್ತಿದೆ. ಇವರಲ್ಲಿ ಕೆಲವು ಮಕ್ಕಳನ್ನು ಕಳ್ಳ ಸಾಗಣಿಕೆ ಮೂಲಕ ಅನ್ಯ ರಾಜ್ಯ ಮತ್ತು ದೇಶಗಳಿಗೆ ಸಾಗಣಿಕೆ ಮಾಡಿ ಜೀತದಾಳಾಗಿ ದುಡಿಸಿಕೊಳ್ಳಲಾಗುತ್ತಿದೆ ಎಂದರು.


ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸಾಮಾಜಿಕ ರಕ್ಷಣೆ ವಯಸ್ಸಿಗೆ ಯೋಗ್ಯವಾದ ಕೆಲಸವನ್ನು ಜಾರಿಗೆ ತರಲು ಆಳುವ ಸರ್ಕಾರಗಳು ಚಿಂತನೆ ನಡೆಸಬೇಕು ಎಂದರು.

ಕಾರ್ಯಕ್ರಮದಲ್ಲಿ ಉಚಿತ ಕಾನೂನು ಸಲಹೆಗಾರ ಎಸ್.ಜಯರಾಮು ಸಂಪನ್ಮೂಲ ಭಾಷಣ ಮಾಡಿದರು. ಕಾಲೇಜಿನ ಪ್ರಾಂಶುಪಾಲೆ ಸುಕನ್ಯಾ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಎಂ.ಎನ್.ಶಿವಣ್ಣ, ಕಾರ್ಯದರ್ಶಿ ಎಂ.ಜೆ.ಸುಮಂತ್ ಇತರರು ಇದ್ದರು.

ಭಾರೀ ಗಾತ್ರದ ಹೆಬ್ಬಾವು ರಕ್ಷಣೆ

ಶ್ರೀರಂಗಪಟ್ಟಣ:ತಾಲೂಕಿನ ಬೆಳಗೊಳ ಗ್ರಾಮದ ಬಳಿಯ ನಾಲೆ ಏರಿ ಮೇಲೆ ಕಾಣಿಸಿಕೊಂಡ ಭಾರೀ ಗಾತ್ರದ ಹೆಬ್ಬಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆ.

ಗ್ರಾಮದ ನಾಲೆ ಏರಿ ಮೇಲೆ ರೈತರು ತಮ್ಮ ಜಮೀನಿಗೆ ಹೋಗುವ ವೇಳೆ ಏರಿ ರಸ್ತೆ ಮಧ್ಯದಲ್ಲಿ ಹೆಬ್ಬಾವು ನಿಧಾನವಾಗಿ ಚಲಿಸುತ್ತಿರುವುದನ್ನು ಗಮನಿಸಿದ ರೈತರು ಭಯಗೊಂಡು ಗ್ರಾಮದ ಸ್ನೇಕ್‍ ಸಿದ್ದರಾಜು ಅವರಿಗೆ ವಿಷಯ ಮುಟ್ಟಿಸಿದ್ದಾರೆ .ತಕ್ಷಣ ಸಿದ್ದರಾಜು ಸ್ಥಳಕ್ಕೆ ಆಗಮಿಸಿ ಸುಮಾರು 10 ಅಡಿ ಉದ್ದ ಹಾಗೂ ಸುಮಾರು 20 ರಿಂದ 30 ಕೆ.ಜಿ ತೂಕದ ಹೆಬ್ಬಾವನ್ನು ಹಿಡಿದು ಗ್ರಾಮಕ್ಕೆ ತಂದು ಗ್ರಾಮಸ್ಥರಿಗೆ ಮಾಹಿತಿ ನೀಡಿ ನಂತರ ಹೆಬ್ಬಾವನ್ನು ಕಾಡಿಗೆ ಬಿಡುವುದಾಗಿ ಕೊಂಡೊಯ್ದರು.