ಕುರುಗೋಡು: ದೋಷ ರಹಿತ ಮತಪಟ್ಟಿ ತಯಾರಿಸಲು ಸಿಬ್ಬಂದಿಯೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಕಂಪ್ಲಿ ವಿಧಾನಸಭಾ ಕ್ಷೇತ್ರದ ಚುನಾವಣೆ ನೋಂದಣಾಧಿಕಾರಿ ದೇವೇಂದ್ರಪ್ಪ ಮನವಿ ಮಾಡಿದರು.

ಇಲ್ಲಿನ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಹಿನ್ನೆಲೆಯಲ್ಲಿ ಜೂ.೩೦ರಿಂದ ಜುಲೈ೨೧ರ ವರೆಗೆ ಬೂತ್ ಮಟ್ಟದ ಅಧಿಕಾರಿಗಳು ಮನೆಮನೆಗೆ ಭೇಟಿನೀಡಿ ಮತದಾರರಿಂದ ಪಡೆದ ವಿವರಗಳನ್ನು ದೃಢೀಕರಿಸಲಿದ್ದಾರೆ.

೨೦೨೬ ಅಗಸ್ಟ್ ೧ಕ್ಕೆ ೧೮ ವರ್ಷ ತುಂಬಿದ ಪ್ರತಿಯೊಬ್ಬ ವ್ಯಕ್ತಿ ಮತದಾರರಪಟ್ಟಿಗೆ ಹೆಸರು ಸೇರಿಸಲು ಅರ್ಹನಾಗಿರುತ್ತಾನೆ ಎಂದು ಮಾಹಿತಿ ನೀಡಿದರು.

ಕಂಪ್ಲಿ ತಾಲೂಕಿನ ೧೦೭, ಕುರುಗೋಡು ತಾಲೂಕಿನ ೯೫, ಬಳ್ಳಾರಿ ಗ್ರಾಮೀಣದ ೪೦ ಸೇರಿ ಒಟ್ಟು ೨೬೨ ಮತಗಟ್ಟೆಗಳಿವೆ. ವಿಧಾನಸಭಾ ಕ್ಷೇತ್ರದಲ್ಲಿ ೨,೨೮,೭೪೫ ಮತದಾರರಿದ್ದು, ಇವರಲ್ಲಿ ಶೇ.೯೦ರಷ್ಟು ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದೆ. ೨೭೫೦ ಮತದಾರರ ಕುರಿತು ಮ್ಯಾಪಿಂಗ್ ಮಾಡುವುದು ಬಾಕಿ ಉಳಿದಿದೆ. ಮತಗಟ್ಟೆ ಅಧಿಕಾರಿಗಳು ಗುರುತಿಸಲು ಕಾರ್ಯಪ್ರವೃತ್ತರಾಗಲಿದ್ದಾರೆ. ಈ ಕುರಿತು ಬಿಎಲ್ಒಗಳ ಜತೆ ಮೇಲ್ವಿಚಾರಕರು ನಿಕಟ ಸಂಪರ್ಕ ಸಾಧಿಸಿ ಪ್ರತಿ ಮಹಿತಿಯನ್ನು ತಹಶೀಲ್ದಾರ್‌ಗೆ ನೀಡಬೇಕು. ಚುನಾವಣಾ ಆಯೋಗದ ನಿರ್ದೇಶನದಂತೆ ನಿಗದಿತ ಅವಧಿಯೊಳಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.


ತಹಶೀಲ್ದಾರ್ ನರಸಪ್ಪ ಮಾತನಾಡಿ, ಅರ್ಹ ಮತದಾರರನ್ನು ಪಟ್ಟಿಗೆ ಸೇರಿಸುವುದು ಮತ್ತು ಅನರ್ಹರನ್ನು ಪಟ್ಟಿಯಿಂದ ಕೈಬಿಡುವ ದೃಷ್ಠಿಯಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಚುನಾವಣಾ ಆಯೋಗ ಮುಂದಾಗಿದೆ. ಸಿಬ್ಬಂದಿ ತಮಗೆ ವಹಿಸಿದ ಕರ್ತವ್ಯವನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಪಕ್ಷಗಳ ಮುಖಂಡರು ಲಸಹೆೆಗಳನ್ನು ನೀಡಿದರು.

ಸಿಪಿಎಂ ಕಾರ್ಯಕರ್ತರು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯವನ್ನು ವಿರೋಧಿಸಿ ಸಭೆಯಿಂದ ಹೊರನಡೆದರು.

ಗ್ರೇಡ್-೨ ತಹಶೀಲ್ದಾರ್ ಮಲ್ಲೇಶಪ್ಪ ಮತ್ತು ರವೀಂದ್ರ ನಾಥ್ ಇದ್ದರು.