ಹೊಸಪೇಟೆ: ಮುಂದಿನ ಪೀಳಿಗೆಗೆ ಮೀಸಲಾತಿ ಉಳಿಸುವ ನಿಟ್ಟಿನಲ್ಲಿ ಕೈಗೊಳ್ಳಲಿರುವ ಹೋರಾಟಕ್ಕೆ ಎಸ್ಟಿ ಸಮುದಾಯದ ಪ್ರತಿಯೊಬ್ಬರು ಕೈಜೋಡಿಸಬೇಕಾಗಿದೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹೇಳಿದರು.ಇಲ್ಲಿನ ಪುಣ್ಯಾನಂದಪುರಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ವಾಲ್ಮೀಕಿ ನಾಯಕ ಸೇವಾ ನಿರತ ಹಾಗೂ ನಿವೃತ್ತ ನೌಕರರ ಸಂಘ, ತಾಲೂಕು ವಾಲ್ಮೀಕಿ ನಾಯಕ ಸಂಘ ಹಾಗೂ ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪರಿಶಿಷ್ಟ ಪಂಗಡದ ಮೀಸಲಾತಿ ಕುರಿತ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದಲ್ಲಿ 10 ಕೋಟಿಗೂ ಅಧಿಕ ಹಾಗೂ ರಾಜ್ಯದಲ್ಲಿ 45 ರಿಂದ 50 ಲಕ್ಷ ಎಸ್ಟಿ ಸಮುದಾಯದವರು ಇದ್ದೇವೆ. ಅದರೆ ಮೀಸಲಾತಿಯಲ್ಲಿ ನಮಗೆ ಸಾಕಷ್ಟು ಅನ್ಯಾಯವಾಗುತ್ತಿದ್ದರೂ ಅದನ್ನು ಪ್ರಶ್ನಿಸಲಾಗದ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದರು.

ನಮಗೆ ನೀಡಲಾದ ಶೇ.7 ಮೀಸಲಾತಿಗೆ ತಡೆ ನೀಡಲಾಗಿದ್ದರೂ ರಾಜ್ಯದಲ್ಲಿ ಎಸ್.ಟಿ ಸಮುದಾಯದಿಂದ ಆಯ್ಕೆಯಾಗಿರುವ 18 ಶಾಸಕರು, 3 ವಿಧಾನ ಪರಿಷತ್ ಸದಸ್ಯರು, 3 ಸಂಸದರು, ಸ್ವಾಮೀಜಿಗಳಿದ್ದಾರೆ. ಆದರೆ ನಮಗೆ ಆಗಿರುವ ಅನ್ಯಾಯ ಕುರಿತು ಯಾರು ಬಾಯಿ ಬಿಡುತ್ತಿಲ್ಲ. ಎಸ್.ಟಿ ಸಮುದಾಯಕ್ಕೆ ಸಮರ್ಪಕವಾಗಿ ಮೀಸಲಾತಿ ನೀಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಮ್ಮ ಸಮುದಾಯಕ್ಕೆ ದ್ರೋಹ ಬಗೆದಿವೆ ಎಂದರು.

ಸಮಾಜದ ಮುಖಂಡ ಮರಡಿ ಜಂಬಯ್ಯ ನಾಯಕ ಮಾತನಾಡಿದರು.

ಸಂವಾದ:


ಚಿಂತನ ಮಂಥನ ಕಾರ್ಯಕ್ರಮದ ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮೀಸಲಾತಿ ಕುರಿತು ಸಾರ್ವಜನಿಕರ ಪ್ರಶ್ನೆಗಳಿಗೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಉತ್ತರಿಸಿದರು.

ಕಾರ್ಯಕ್ರಮದಲ್ಲಿ ವರದಾನೇಶ್ವರ ಸ್ವಾಮೀಜಿ, ಜಿಲ್ಲಾ ವಾಲ್ಮೀಕಿ ನಾಯಕ ಸೇವಾನಿರತ ನೌಕರರ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಾ.ಟಿ.ಮಂಜುನಾಥ, ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗೋಸಲ ಭರಮಪ್ಪ, ಪ್ರಧಾನ ಕಾರ್ಯದರ್ಶಿ ದೇವರಮನೆ ಶ್ರೀನಿವಾಸ, ನಗರಸಭೆ ಪೌರಾಯುಕ್ತ ಎರಗುಡಿ ಶಿವಕುಮಾರ್, ಮುಖಂಡರಾದ ತುಳಸಿರಾಮ, ವೆಂಕಟೇಶ ನಾಯಕ, ರಾಜಣ್ಣ, ಪ್ರಕಾಶ್ ದೇಸಾಯಿ, ನಾಗವೇಣಿ ಭಾಗವಹಿಸಿದ್ದರು.

ನಾಣಿಕೇರಿ ವೆಂಕೋಬ ಸ್ವಾಗತಿಸಿದರು. ನಾಯಕ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಗುಜ್ಜಲ್ ನಿರೂಪಿಸಿದರು. ಮುಖ್ಯಗುರು ಬಸವರಾಜ ವಂದಿಸಿದರು,

ಹೊಸಪೇಟೆಯ ಪುಣ್ಯಾನಂದಪುರಿ ಕಲ್ಯಾಣ ಮಂಟಪದಲ್ಲಿ ನಡೆದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮಾತನಾಡಿದರು.