ಜೂನ್‌ 18ರಂದು ಹಾಸನದಲ್ಲಿ ಬಿಜೆಪಿ-ಜೆಡಿಎಸ್‌ ಜಂಟಿ ಪ್ರತಿಭಟನೆ

| Published : Jun 18 2024, 12:53 AM IST

ಜೂನ್‌ 18ರಂದು ಹಾಸನದಲ್ಲಿ ಬಿಜೆಪಿ-ಜೆಡಿಎಸ್‌ ಜಂಟಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಜೂ.೧೮ ರ ಮಂಗಳವಾರ ಬೆಳಿಗ್ಗೆ ೧೧ ಗಂಟೆಗೆ ಬಿಜೆಪಿ ಜತೆ ಸೇರಿ ಜೆಡಿಎಸ್ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ತಿಳಿಸಿದರು. ಹಾಸನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.

ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಗೆ ಖಂಡನೆ । ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ । ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ, ಮನವಿ

ಕನ್ನಡಪ್ರಭ ವಾರ್ತೆ ಹಾಸನ

ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಜೂ.೧೮ ರ ಮಂಗಳವಾರ ಬೆಳಿಗ್ಗೆ ೧೧ ಗಂಟೆಗೆ ಬಿಜೆಪಿ ಜತೆ ಸೇರಿ ಜೆಡಿಎಸ್ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ‘ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡಿದ್ದು, ಇದು ಸಾರ್ವಜನಿಕರಿಗೂ ಮತ್ತು ಎಲ್ಲರಿಗೂ ಹೊರೆ ಆಗಲಿದೆ. ಒಂದು ಲೀಟರ್‌ಗೆ ತೈಲ ಬೆಲೆ ಮೂರರಿಂದ ಮೂರುವರೆ ರು. ಹೆಚ್ಚಳ ಮಾಡಿದ್ದು, ಇದರಿಂದ ಸಾರ್ವಜನಿಕ. ವ್ಯವಹಾರಿಕ ಸಾರಿಗೆ ಸೇರಿದಂತೆ ವಸ್ತುಗಳ ಬೆಲೆ ಏರಿಕೆ ಆಗಲಿದೆ. ಇದನ್ನು ಖಂಡಿಸಿ ಜೆಡಿಎಸ್ ಪಕ್ಷದಿಂದ ಜೂನ್ ೧೮ರ ಮಂಗಳವಾರ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಮೆರವಣಿಗೆ ಹೋಗಿ ಜಿಲ್ಲಾಧಿಕಾರಿಗೆ ಮನವಿ ಕೊಡಲಾಗುವುದು’ ಎಂದು ಹೇಳಿದರು.

ಬೆಲೆ ಏರಿಕೆ ಮಾಡಲಾಗಿರುವುದನ್ನು ಶೀಘ್ರವೇ ವಾಪಸ್ ಪಡೆದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಪ್ರತಿಭಟನೆಯ ಉದ್ದೇಶವಾಗಿದೆ. ಪ್ರತಿಭಟನೆಯನ್ನು ಬಿಜೆಪಿ ಜೊತೆ ಸೇರಿ ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಉಕ್ಕು ಮತ್ತು ಕೈಗಾರಿಕ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಇವರಿಗೆ ಹಾಸನ ಜಿಲ್ಲೆಯ ಜನತೆ ಪರವಾಗಿ ಶುಭಾಶಯ ಕೋರಲಾಗುವುದು. ಜಿಲ್ಲೆಗೆ ಒಂದು ಬೃಹತ್ ಕಾರ್ಖಾನೆ ತರುವ ಮೂಲಕ ಇಲ್ಲಿ ಉದ್ಯೋಗ ಸೃಷ್ಟಿ ಮಾಡಬೇಕು. ಅಧಿವೇಶನ ಪ್ರಾರಂಭವಾಗಲಿದ್ದು, ಮುಗಿದ ನಂತರದಲ್ಲಿ ಮನವಿ ಮಾಡಿ ಜಿಲ್ಲೆಗೆ ಆಗಬೇಕಾದ ಕೆಲಸಗಳನ್ನು ಮಾಡಿಸಬೇಕು. ಮೇಲು ಸೇತುವೆ, ಏರ್‌ಪೋರ್ಟ್ ಸೇರಿದಂತೆ ಎಲ್ಲಾ ವಿಚಾರಗಳನ್ನು ಅಂದು ಚರ್ಚೆ ಮಾಡಿ ಹಾಸನಕ್ಕೆ ಅಭಿವೃದ್ಧಿ ಕೆಲಸ ನಿರ್ವಹಿಸಲಾಗುವುದು. ಈಗಾಗಲೇ ಐಐಟಿ ಕೂಡ ಹಾಸನ ಜಿಲ್ಲೆಗೆ ಬಂದಿಲ್ಲ. ರೈತರಿಗೆ ಜಾಗವೂ ಇಲ್ಲ. ನಾವು ಕೂಡ ಮನವಿ ಮಾಡಲಾಗಿದ್ದು, ಯಾವ ಉದ್ದೇಶಕ್ಕೆ ಭೂಮಿ ಪಡೆಯಲಾಗಿದೆ, ಅದು ಕಾರ್ಯರೂಪಕ್ಕೆ ಬಾರದಿದ್ದಾಗ ರೈತರಿಗೆ ಭೂಮಿಯನ್ನು ವಾಪಸ್ ಕೊಡಬೇಕು. ಈ ಬಗ್ಗೆ ಕುಮಾರಸ್ವಾಮಿ ಜತೆ ಚರ್ಚೆ ಮಾಡಿ ಮಂದಿನ ನಿರ್ಧಾರ ಕೈಗೊಳ್ಳಲಾಗುವುದು. ಶೀಘ್ರವೇ ಎಲ್ಲಾ ಕೆಲಸ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುವುದು’ ಎಂದು ತಿಳಿಸಿದರು.

ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹಾಸನದಲ್ಲಿ ದೊಡ್ಡ ಮಟ್ಟದ ಸನ್ಮಾನ ಕಾರ್ಯಕ್ರಮ ಏರ್ಪಡಿಸಲು ಅವರ ಬಳಿ ಸಮಯ ಕೇಳಿ ಮುಂದೆ ದಿನಾಂಕ ನಿರ್ಧರಿಸುತ್ತೇವೆ. ಮುಂದಿನ ದಿನಗಳಲ್ಲಿ ಬಿಜೆಪಿ, ಜೆಡಿಎಸ್ ಹೊಂದಾಣಿಕೆಯಲ್ಲಿಯೇ ಹೋಗುತ್ತೇವೆ. ಈ ಬಗ್ಗೆ ಅನುಮಾನ ಬೇಡ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕಸ್ತೂರಬಾ ರಸ್ತೆಯಲ್ಲಿ ನಗರಸಭೆಗೆ ಸೇರಿದ ೮೭ ಮಳಿಗೆಗಳಿದ್ದು, ಹಿಂದೆ ೫೪ ಮಳಿಗೆಗಳು ಇದ್ದವು. ಚುನಾವಣೆ ಹಿಂದೆಯೇ ಸಭೆ ಮಾಡಿದಾಗ ಹಿಂದೆ ಇದ್ದ ಮಳಿಗೆ ಮಾಲೀಕರಿಗೆ ಅಂಗಡಿ ಮಳಿಗೆ ಕೊಟ್ಟು ಉಳಿದ ಅಂಗಡಿ ಮಳಿಗೆಯನ್ನು ಡಿಸಿಯವರು ಹೇಳಿದಂತೆ ಕಾನೂನುಬದ್ಧವಾಗಿ ಆನ್‌ಲೈನ್ ಮೂಲಕ ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ, ಜೆಡಿಎಸ್ ಮಾಧ್ಯಮ ವಕ್ತಾರ ಹೊಂಗೆರೆ ರಘು, ಬಿದರಿಕೆರೆ ಜಯರಾಮ್ ಇತರರು ಇದ್ದರು.