ಕೇಂದ್ರ ಸರ್ಕಾರದ ನೀತಿಗೆ ವಿರೋಧ

| Published : Feb 17 2024, 01:17 AM IST

ಸಾರಾಂಶ

ಎನ್‌.ಡಿ.ಎ ನೇತೃತ್ವದ ಕೇಂದ್ರ ಸರ್ಕಾರವು ಅಧಿಕಾರಕ್ಕೆ 10 ವರ್ಷ ಸಮೀಪಿಸುತ್ತಿದೆ. 2 ಕೋಟಿ ಉದ್ಯೋಗದ ಸೃಷ್ಟಿ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರು., ಡಾ. ಸ್ವಾಮಿನಾಥನ್ ಅವರ ಶಿಫಾರಸ್ಸಿನಂತೆ ಬೆಂಬಲ ಬೆಲೆಯ ಕಾನೂನು ಜಾರಿ ಕುರಿತ ವಾಗ್ದಾನವನ್ನು ಪ್ರಣಾಳಿಕೆಯಲ್ಲಿ ನೀಡಿ ಇದೀಗ ಜನರನ್ನು ಸುಲಿಗೆ ಮುಂದಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರು

ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳನ್ನು ವಿರೋಧಿಸಿ, ದುಡಿಯುವ ಜನರ ಶೋಷಣೆ ತಪ್ಪಿಸಲು, ಜನರ ಕೊಂಡುಕೊಳ್ಳುವ ಸಾಮರ್ಥ್ಯ ಹೆಚ್ಚಿಸಲು, ಉದ್ಯೋಗ ಸೃಷ್ಠಿಸಲು ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಕಾರ್ಮಿಕರು ಹಾಗೂ ರೈತರು ನಗರದ ಗಾಂಧಿ ಚೌಕದಲ್ಲಿ ಶುಕ್ರವಾರ ಪ್ರತಿಭಟಿಸಿದರು.

ಎನ್‌.ಡಿ.ಎ ನೇತೃತ್ವದ ಕೇಂದ್ರ ಸರ್ಕಾರವು ಅಧಿಕಾರಕ್ಕೆ 10 ವರ್ಷ ಸಮೀಪಿಸುತ್ತಿದೆ. 2 ಕೋಟಿ ಉದ್ಯೋಗದ ಸೃಷ್ಟಿ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರು., ಡಾ. ಸ್ವಾಮಿನಾಥನ್ ಅವರ ಶಿಫಾರಸ್ಸಿನಂತೆ ಬೆಂಬಲ ಬೆಲೆಯ ಕಾನೂನು ಜಾರಿ ಕುರಿತ ವಾಗ್ದಾನವನ್ನು ಪ್ರಣಾಳಿಕೆಯಲ್ಲಿ ನೀಡಿ ಇದೀಗ ಜನರನ್ನು ಸುಲಿಗೆ ಮುಂದಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಜನಸಾಮಾನ್ಯರ ಕೊಂಡುಕೊಳ್ಳುವ ಸಾಮರ್ಥ್ಯವನ್ನು ಕುಗ್ಗಿಸಿ, ಆಹಾರ, ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಅನುದಾನಗಳನ್ನು ಹೆಚ್ಚಳ ಮಾಡುವ ಬದಲಿಗೆ ಅನುದಾನ ಕಡಿತ ಮಾಡಿ, ಆರೋಗ್ಯ ಮತ್ತು ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗೀಕರಿಸುವುದಲ್ಲದೇ ದೇಶವನ್ನು ಹಸಿವಿನ ಸೂಚ್ಯಾಂಕದಲ್ಲಿ 111ನೇ ಸ್ಥಾನಕ್ಕೆ ಕುಸಿಯುವಂತೆ ಮಾಡಲಾಗಿದೆ ಎಂದು ಅವರು ಕಿಡಿಕಾರಿದರು.

ಭಾರತವನ್ನು ಕಟ್ಟಿರುವ ಸಾರ್ವಜನಿಕ ಕೈಗಾರಿಕೆಗಳನ್ನು ಖಾಸಗೀಕರಿಸಿದ್ದಲ್ಲದೇ ಸರ್ಕಾರದ ನೀತಿಯನ್ನು ಆಸ್ತಿಯನ್ನು ಎನ್ಎಂಪಿಯ ಮುಖಾಂತರ ಖಾಸಗೀಯವರಿಗೆ ದಾನ ಮಾಡಿದರೇ ಭಾರತದ ಆರ್ಥಿಕ ಸಾರ್ವಭೌಮತೆಯನ್ನು ಕಾಪಾಡಲು ಸಾಧ್ಯವಿದೆಯಾ? ಗರಿಷ್ಠ ಆಡಳಿತ ಕನಿಷ್ಠ ಸರ್ಕಾರ ಎಂದರೆ ಸಾರ್ವಜನಿಕ ಒಡೆತವನ್ನು ಖಾಸಗಿ ವ್ಯಕ್ತಿಗಳಿಗೆ ಅಡಮಾನ ಇಡುವುದೇ ಎಂದು ಪ್ರಶ್ನಿಸಿದ ಅವರು, ಕೇಂದ್ರ ಸರ್ಕಾರವು ಸಂಪೂರ್ಣವಾಗಿ ತನ್ನ ನೀತಿಗಳನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ, ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಿ ಬಡವರಿಗೆ ಬದುಕಲು ಅವಕಾಶ ನೀಡುವ ನೀತಿಗಳನ್ನು ಜಾರಿಗೆ ತರಬೇಕು. ಎಲ್ಲಾ ಸ್ವರೂಪದ ಖಾಸಗೀಕರಣ ಕೈಬಿಡಬೇಕು. ಕೃಷಿ ಕಾರ್ಮಿಕರಿಗೆ ಸಮಗ್ರವಾದ ಕಲ್ಯಾಣ ಯೋಜನೆಗಳು, ಕಾರ್ಮಿಕ ವಿರೋಧಿ ನೀತಿಗಳನ್ನು ಕೈ ಬಿಟ್ಟು, ಕಾರ್ಮಿಕರ ಪರವಾದ ನೀತಿಗಳನ್ನು ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.

ಡಾ. ಸ್ವಾಮಿನಾಥನ್ ಶಿಫಾರಸಿನಂತೆ ಕನಿಷ್ಠ ಬೆಂಬಲ ಬೆಲೆ ಕಾನೂನು ರಚಿಸಬೇಕು. ಕೃಷಿ ಕಾರ್ಮಿಕರಿಗೆ ಕಲ್ಯಾಣ ಯೋಜನೆಗಳನ್ನು ರೂಪಿಸಬೇಕು. ನರೇಗಾ ಯೋಜನೆಯನ್ನು 200 ದಿನಗಳಿಗೆ ಹೆಚ್ಚಿಸಿ, 600 ರು. ಕೂಲಿ ನಿಗದಿ ಮಾಡಿ, ಬಯೋಮೆಟ್ರಿಕ್ ಪದ್ಧತಿಯನ್ನು ಕೈಬಿಡಬೇಕು. ಬರ ಪೀಡಿತ ಕರ್ನಾಟಕದ ರೈತರ ನೆರವಿಗೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.

ದೇಶದ ಎಲ್ಲಾ ರೈತರು, ಕೂಲಿಕಾರರು, ಕಾರ್ಮಿಕರು ಒಂದಾಗಿ ದೆಹಲಿ ಚಲೋ ಚಳವಳಿ ನಡೆಸುತ್ತಿದ್ದು, ಅವರ ಮೇಲೆ ಪೊಲೀಸರು ದಬ್ಬಾಳಿಕೆ ಮಾಡಿರುವುದನ್ನು ಸರಿಯಲ್ಲ ಎಂದು ಅವರು ಖಂಡಿಸಿದರು.

ಜಂಟಿ ಸಮಿತಿಯ ಎನ್.ಕೆ. ಬಾಲಾಜಿ ರಾವ್, ಮುಖಂಡರಾದ ಜಗದೀಶ್ ಸೂರ್ಯ, ಪಿ. ಮರಂಕಯ್ಯ, ಚಂದ್ರಶೇಖರ್ ಮೇಟಿ, ಶೇಷಾದ್ರಿ, ಪಿ.ಎಸ್. ಸಂಧ್ಯಾ, ಮಂಡಕಳ್ಳಿ ಮಹೇಶ್, ನಾಗನಹಳ್ಳಿ ವಿಜಯೇಂದ್ರ, ಜವರಯ್ಯ, ದೇವದಾಸ್, ಹೊಸಕೋಟೆ ಬಸವರಾಜು, ಉಗ್ರ ನರಸಿಂಹೇಗೌಡ, ಜಯರಾಮ್, ಚೋರನಹಳ್ಳಿ ಶಿವಣ್ಣ, ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮೊದಲಾದವರು ಇದ್ದರು.