ವಿವಿಧ ಪ್ರತಿಭೆಗಳ ಅನಾವರಣದೊಂದಿಗೆ ಯುವ ಸಂಭ್ರಮಕ್ಕೆ ತೆರೆ

| Published : Oct 02 2024, 01:13 AM IST

ಸಾರಾಂಶ

ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಮೈಸೂರು

ಸಾಂಸ್ಕೃತಿಕ ನಗರಿಯ ವೈಭವ ಎಲ್ಲರಿಗೂ ತಿಳಿಯುವಂತೆ ಮಾಡಲು ಪ್ರವಾಸೋದ್ಯಮ ಇಲಾಖೆಯ ವೆಬ್‌ ಸೈಟ್‌ ಅಥವಾ ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಿ ಎಂದು ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಕೆ. ಸವಿತಾ ಯುವ ಸಮೂಹಕ್ಕೆ ಕರೆ ನೀಡಿದರು.

ವಿಶ್ವ ವಿಖ್ಯಾತ ಮೈಸೂರು ದಸರಾ ಯುವ ಸಂಭ್ರಮದ ಕೊನೆಯ ದಿನವಾದ ಮಂಗಳವಾರ ನಗರದ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪ್ರತಿಭೆ ಅನಾವಣರಣದ ಮೂಲಕ ಕೊನೆಗೊಂಡಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿಗಳು ಪ್ರದರ್ಶಿಸಿದ ಕಿತ್ತೂರು ರಾಣಿ ಚನ್ನಮ್ಮ ಪಾತ್ರದ ನೃತ್ಯ ಮನಮೋಹಕವಾಗಿತ್ತು. ಬನ್ನೂರು ಬಾಲಕಿಯರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಮಹಿಳಾ ಸಬಲೀಕರಣ ಕುರಿತ ನೃತ್ಯ ಯುವ ಸಂಭ್ರಮಕ್ಕೆ ಆಗಮಿಸಿದ್ದ ವೀಕ್ಷಕರ ಮೆಚ್ಚುಗೆ ಪಡೆಯಿತು. ಪಾಂಡವಪುರದ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ರೈತರ ಆತ್ಮಹತ್ಯೆ ಕುರಿತ ನೃತ್ಯ ಪ್ರದರ್ಶನ ನೆರೆದಿದ್ದ ಪ್ರೇಕ್ಷಕರರನ್ನು ಮೂಕವಿಸ್ಮಿತರನ್ನಾಗಿಸಿ ರೈತರಿಗೆ ಸ್ವಯಂ ಗೌರವ ಸಮರ್ಪಣೆಗೆ ಸಾಕ್ಷಿಯಾಯಿತು.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಕನ್ನಡ ನಾಡು-ನುಡಿ, ಕರ್ನಾಟಕದ ವೈಭವ, ಕನ್ನಡಾಭಿಮಾನವನ್ನು ಸಾರುವ ನೃತ್ಯ ಪ್ರದರ್ಶನ ನೆರೆದಿದ್ದ ಕನ್ನಡಿಗರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.

ಮೈಸೂರಿನ ಬಸುದೇವ ಸೋಮಾನಿ ಕಾಲೀಜಿನ ವಿದ್ಯಾರ್ಥಿಗಳು ''''''''ಮಾದಕ ಮುಕ್ತ ಲೋಕ'''''''' ಎಂಬ ಧ್ಯೆಯ ಕುರಿತ ನೃತ್ಯ ಪ್ರದರ್ಶಿಸಿದರು. ಅಲ್ಲದೆ ಮೈಸೂರಿನ ರಾಜ ಮನೆತನದ ಪರಂಪರೆ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಳ ಕುರಿತ ನೃತ್ಯ ಪ್ರದರ್ಶನ ಮನ ಮೋಹಕವಾಗಿತ್ತು. ಆದಿತ್ಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಶಿವನ ಕುರಿತು ನೃತ್ಯ ಪ್ರದರ್ಶಿಸಿದರು.

ಕೆ.ಎಂ. ಸವಿತಾ ಅವರು ದಸರಾ ಯುವ ಸಂಭ್ರಮ ಉಪ ಸಮಿತಿಯ ಎಲ್ಲ ಸದಸ್ಯರಿಗೆ ಗೌರವ ಸಮರ್ಪಿಸಿದರು.