ಸಾರಾಂಶ
ಗದಗ:ರಾಜ್ಯದಲ್ಲಿ ಭಾರೀ ಮಳೆಯಿಂದ ಬೆಳೆಹಾನಿ ಸಂಭವಿಸಿರುವ ಕುರಿತು ಜಂಟಿ ಸಮೀಕ್ಷೆ ನಡೆಸಲಾಗುತ್ತಿದ್ದು, ವರದಿ ಬಂದ ನಂತರ ಬೆಳೆ ಪರಿಹಾರ ನೀಡಲಾಗುವುದು. ಹಲವಾರು ಜಿಲ್ಲೆಯಲ್ಲಿ ಸದ್ಯದಲ್ಲಿಯೇ ಜಂಟಿ ಸಮೀಕ್ಷೆ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ರಾಜ್ಯದಲ್ಲಿ ಹೆಚ್ಚಿನ ಮಳೆಯಾಗಿರುವ ಕಾರಣ, ರಸ್ತೆಗಳು ಹಾಳಾಗಿರುವುದು ನಿಜ. ಈ ಬಗ್ಗೆ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ ಪರಿಸ್ಥಿತಿ ಬಗ್ಗೆ ಸಭೆ ನಡೆಸಿ, ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗುವುದು. ಬಿಜೆಪಿಯ ಅಧಿಕಾರಾವಧಿಯಲ್ಲಿ ಒಂದೂ ರಸ್ತೆಯನ್ನೂ ನಿರ್ಮಿಸಿಲ್ಲ ಹಾಗೂ ರಸ್ತೆಗುಂಡಿಯನ್ನೂ ಮುಚ್ಚಿರುವುದಿಲ್ಲ ಎಂದರು.ರಾಜ್ಯದಲ್ಲಿ ನಡೆಸಲುದ್ದೇಶಿಸಿರುವ ಸಮೀಕ್ಷೆ ಕೇವಲ ಜಾತಿ ಸಮೀಕ್ಷೆಯಾಗಿರದೇ, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಾಗಿದೆ. ಜನರ ಜಾತಿಯ ವಿವರ ಪಡೆಯುವ ಜೊತೆಗೆ ಅವರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ವಿವರ ಪಡೆದು, ಅವಕಾಶ ವಂಚಿತರಿಗೆ ಸಮಾನ ಅವಕಾಶಗಳನ್ನು ನೀಡಲು ಈ ಸಮೀಕ್ಷೆಯನ್ನು ನಡೆಸಲಾಗುತ್ತಿದೆ ಎಂದರು.
ಅನಗತ್ಯ ಅಂಶಗಳನ್ನು ತೆಗೆದುಹಾಕಲು ಹಿಂದುಳಿದ ವರ್ಗಗಳ ಆಯೋಗವೇ ನಿರ್ಧರಿಸುತ್ತದೆ. ಆಯೋಗವು ಶಾಸನಬದ್ಧ ಸಂಸ್ಥೆಯಾಗಿದ್ದು, ಸಮೀಕ್ಷೆ ನಡೆಸಲು ಮಾರ್ಗಸೂಚಿಗಳನ್ನಷ್ಟೇ ಸರ್ಕಾರ ನೀಡಿದೆ. 175000 ಶಿಕ್ಷಕರು ಸಮೀಕ್ಷಾ ಕಾರ್ಯಕ್ಕೆ ನಿಯೋಜಿತರಾಗಿದ್ದಾರೆ. ಒಬ್ಬ ಶಿಕ್ಷಕರು ತಲಾ 150 ಮನೆಗಳಿಂದ ಮಾಹಿತಿ ಸಂಗ್ರಹಿಸಲಿದ್ದು, ಈ ಸಮೀಕ್ಷಾ ಕಾರ್ಯ 15 ದಿನಗಳ ಕಾಲ ನಡೆಯಲಿದೆ. ಸಮೀಕ್ಷೆಯಲ್ಲಿ ಧರ್ಮ, ಜಾತಿ, ಉಪಜಾತಿ, ಶಿಕ್ಷಣ, ಉದ್ಯೋಗ ಸೇರಿದಂತೆ ಹಲವು ಮಾಹಿತಿಗಳನ್ನು ಕಲೆಹಾಕಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಸುದ್ದಿಗೋಷ್ಠಿಯಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ, ರೋಣ ಶಾಸಕ ಜಿ.ಎಸ್. ಪಾಟೀಲ, ಸಲೀಂ ಅಹ್ಮದ ಸೇರಿದಂತೆ ಅನೇಕರು ಹಾಜರಿದ್ದರು.
ಸಮೀಕ್ಷೆಗೆ ಯಾರ ವಿರೋಧವೂ ಇಲ್ಲ:ಜಾತಿಗಣತಿಯ ಹಿಂದೆ ಷಡ್ಯಂತ್ರವಿದೆ ಎಂದು ವಚನಾನಂದ ಸ್ವಾಮೀಜಿಗಳು ಆರೋಪಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿ, ಕೇಂದ್ರ ಸರ್ಕಾರವೂ ಜಾತಿಸಮೀಕ್ಷೆ ನಡೆಸಲಿದ್ದು, ಅದರಲ್ಲಿಯೂ ಷಡ್ಯಂತ್ರವಿರಲಿದೆಯೇ? ಸಮೀಕ್ಷೆಗೆ ಯಾವುದೇ ಸಚಿವರು ವಿರೋಧ ವ್ಯಕ್ತಪಡಿಸಿಲ್ಲ. ಸಮಾಜದಲ್ಲಿ ಸಮಾನತೆ ತರಲು ಬಡವರಿಗೆ ಸರ್ಕಾರಿ ಯೋಜನೆಗಳಲ್ಲಿ ಆದ್ಯತೆ ನೀಡಬೇಕು ಎನ್ನುವುದು ಇದರ ಹಿಂದಿರುವ ಉದ್ದೇಶವಾಗಿದೆ ಎಂದರು.ಬಿಜೆಪಿ ರಾಜಕೀಯ ಮಾಡುತ್ತಿದೆ: ಸಮೀಕ್ಷೆಯ ನಿರ್ಧಾರವನ್ನು ಮರುಪರಿಶೀಲಿಸಲು ರಾಜ್ಯಪಾಲರು ಸೂಚನೆ ನೀಡುವಂತೆ ಬಿಜೆಪಿಯವರು ಮನವಿ ಸಲ್ಲಿಸಿರುವ ಬಗ್ಗೆ ಬಗ್ಗೆ ಪ್ರತಿಕ್ರಿಯೆ ನೀಡಿ, ಸಮೀಕ್ಷೆಯ ವಿಚಾರದಲ್ಲಿ ಬಿಜೆಪಿಯು ರಾಜಕೀಯ ಮಾಡುತ್ತಿದೆ. ರಾಜ್ಯಪಾಲರು ತಮಗೆ ಯಾವುದೇ ಸೂಚನೆ ನೀಡಿಲ್ಲ, ಪತ್ರ ಬರೆದಿಲ್ಲ, ಬಿಜೆಪಿಯವರು ನೀಡಿದ ಪತ್ರ ಫಾರ್ವರ್ಡ್ ಮಾಡಿದ್ದಾರೆ ಎಂದರು. ಸಮೀಕ್ಷೆಯ ವಿಚಾರದಲ್ಲಿ ಜಾತಿ ಒಡೆಯುವ ಪ್ರಶ್ನೆಯೇ ಇಲ್ಲ ಎಂದ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮತಗಳ್ಳತನದ ಬಗ್ಗೆ ಮಾಡಿರುವ ಆರೋಪದ ಕುರಿತ ಪ್ರಶ್ನೆಗೆ ಉತ್ತರಿಸಿ, ರಾಹುಲ್ ಗಾಂಧಿಯವರು ಅಳಂದ ಕ್ಷೇತ್ರದಲ್ಲಿ 6 ಸಾವಿರ ಮತದಾರರ ಹೆಸರನ್ನು ಕೈಬಿಟ್ಟಿರುವ ಮತಗಳ್ಳತನದ ವಿಚಾರವನ್ನು ಉಲ್ಲೇಖಿಸಿದ್ದು, ಇದು ಸತ್ಯವಾಗಿದೆ. ಆಳಂದದಲ್ಲಿರುವ ಮತಗಳ್ಳತನ ಪ್ರಕರಣದ ಬಗ್ಗೆ ಎಸ್ ಐ ಟಿ ತನಿಖೆ ನಡೆಯಲಿದೆ ಎಂದು ಸಿಎಂ ಸಿದ್ಧರಾಮಯ್ಯ ಸ್ಪಷ್ಟಪಡಿಸಿದರು.
ಕುರುಬ ಸಮಾಜವನ್ನು ಎಸ್‌ಟಿಗೆ ಸೇರಿಸುವ ಶಿಫಾರಸ್ಸಿನ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕುರುಬ ಸಮಾಜವನ್ನು ಎಸ್‌ಟಿಗೆ ಸೇರಿಸುವ ಶಿಫಾರಸ್ಸನ್ನು ಹಿಂದಿನ ಬಿಜೆಪಿ ಸರ್ಕಾರವೇ ಮಾಡಿತ್ತು. ಆದರೆ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ವಾಪಸ್ಸು ಕಳಿಸಿದ್ದು, ಅದಕ್ಕೆ ವಿವರಣೆಯನ್ನು ಸರ್ಕಾರ ನೀಡಲಿದೆ. ಯಾವುದೇ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರವೇ ತೆಗೆದುಕೊಳ್ಳುತ್ತದೆ ಎಂದರು.