ಅರಣ್ಯ, ಕಂದಾಯ ಭೂಮಿ ಜಂಟಿ ಸರ್ವೆ ಕಾರ್ಯ ಪ್ರಾರಂಭ: ಶಾಸಕ ಬೇಳೂರು

| Published : Mar 19 2025, 12:34 AM IST

ಅರಣ್ಯ, ಕಂದಾಯ ಭೂಮಿ ಜಂಟಿ ಸರ್ವೆ ಕಾರ್ಯ ಪ್ರಾರಂಭ: ಶಾಸಕ ಬೇಳೂರು
Share this Article
  • FB
  • TW
  • Linkdin
  • Email

ಸಾರಾಂಶ

ಈ ಭಾಗದ ಮುಳುಗಡೆ ಸಂತ್ರಸ್ತರ ಬಹುದಿನಗಳ ಸಮಸ್ಯೆ ಪರಿಹಾರಕ್ಕಾಗಿ ಈಗಾಗಲೇ ಕೋಗಾರು, ಭಾನುಕುಳಿ ಗ್ರಾಮದ ರೈತರ ಸಮಕ್ಷಮದಲ್ಲಿ ಅರಣ್ಯ ಹಾಗೂ ಕಂದಾಯ ಭೂಮಿ ಜಂಟಿ ಸರ್ವೆ ಕಾರ್ಯ ಪ್ರಾರಂಭವಾಗಿದೆ. ಜಂಟಿ ಸರ್ವೆ ನಂತರ ರೈತರು, ಅರಣ್ಯ ಇಲಾಖೆ ನಡುವೆ ಇರುವ ಅನಗತ್ಯ ಗೊಂದಲಕ್ಕೆ ತೆರೆ ಬೀಳಲಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ರಸ್ತೆ ಕಾಮಗಾರಿಗೆ ಶಂಕು

ಕನ್ನಡಪ್ರಭ ವಾರ್ತೆ ಬ್ಯಾಕೋಡು

ಈ ಭಾಗದ ಮುಳುಗಡೆ ಸಂತ್ರಸ್ತರ ಬಹುದಿನಗಳ ಸಮಸ್ಯೆ ಪರಿಹಾರಕ್ಕಾಗಿ ಈಗಾಗಲೇ ಕೋಗಾರು, ಭಾನುಕುಳಿ ಗ್ರಾಮದ ರೈತರ ಸಮಕ್ಷಮದಲ್ಲಿ ಅರಣ್ಯ ಹಾಗೂ ಕಂದಾಯ ಭೂಮಿ ಜಂಟಿ ಸರ್ವೆ ಕಾರ್ಯ ಪ್ರಾರಂಭವಾಗಿದೆ. ಜಂಟಿ ಸರ್ವೆ ನಂತರ ರೈತರು, ಅರಣ್ಯ ಇಲಾಖೆ ನಡುವೆ ಇರುವ ಅನಗತ್ಯ ಗೊಂದಲಕ್ಕೆ ತೆರೆ ಬೀಳಲಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಶರಾವತಿ ಹಿನ್ನೀರಿನ ಕರೂರು ಹೋಬಳಿಯ ಬೊಬ್ಬಿಗೆ ಗ್ರಾಮದ ಸುಮಾರು 2.30 ಕೋಟಿ ರು. ವೆಚ್ಚದ ತಲ್ಲೇ-ಅಗ್ಗೇರಿ ಲಿಂಕ್ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೇರವೇರಿಸಿ ಅವರು ಮಾತನಾಡಿದರು.

ತಾಲೂಕಿನ ಬಾರಂಗಿ ಹೋಬಳಿ ನಂತರ ಕರೂರು ಹೋಬಳಿಯ ತುಮರಿ, ಬ್ಯಾಕೋಡು ಭಾಗದಲ್ಲಿ ಜಂಟಿ ಸರ್ವೆ ಕಾರ್ಯದ ನೆಡೆಯಲಿದೆ. ಸರ್ವೇ ಕಾರ್ಯದ ನಂತರ ಬಹುದಿನಗಳ ಅರಣ್ಯ, ಕಂದಾಯ ಇಲಾಖೆ ಭೂಮಿ ಹಕ್ಕು ಸಂಬಂಧಿಸಿದ ಬಹುತೇಕ ಗೊಂದಲಕ್ಕೆ ತೆರೆ ಬೀಳಲಿದೆ. ಈ ನಂತರದಲ್ಲಿ ಬಗರ್ ಹುಕುಂ 57, 94ಸಿಸಿ ರಡಿ ಸಲ್ಲಿಕೆಯಾದ ಬಹುತೇಕ ಅರ್ಜಿಗಳು ಶೀಘ್ರವೇ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಲುಸಂಕಗಳ ನಿರ್ಮಾಣಕ್ಕೆ 70 ಕೋಟಿ ರು. ಅನುದಾನ ನೀಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ತಾಲೂಕಿನ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಈಗಾಗಲೇ 94 ದೇವಸ್ಥಾನಗಳಿಗೆ ಹಣ ಬಿಡುಗಡೆ ಮಾಡಲಾಗಿದೆ ಎಂದರು.

ಕೆಡಿಪಿ ಸದಸ್ಯ ಜಿ.ಜಿ.ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಉಮಾ ನಾಗೇಂದ್ರ, ತಾಲೂಕು ಪಶು ಸಂಗೋಪನ ನಾಮ ನಿರ್ದೇಶಕ ಸದಸ್ಯ ಗಣೇಶ್ ಜಾಕಿ, ದೇವರಾಜ್ ಕಪ್ಪದೂರ್, ರಾಮಚಂದ್ರ ಹಾಬಿಗೆ, ಎಸ್ಎಲ್ ನಾಗರಾಜ್, ಸತೀಶ್ ತಲ್ಲೆ ಇತರರು ಇದ್ದರು.