ಸಾರಾಂಶ
ಕೊಪ್ಪಳ: ಗವಿಸಿದ್ದೇಶ್ವರ ಜಾತ್ರೆಯಲ್ಲಿ ಹಾಕಲಾದ ಜೋಕಾಲಿಗಳು, ಅಂಗಡಿಗಳು ಜಾತ್ರೆಗೆ ಬಂದ ಭಕ್ತರನ್ನು ಕೈಬೀಸಿ ಕರೆಯುವಂತೆ ಸಿಂಗಾರಗೊಂಡು ಕಂಗೊಳಿಸುತ್ತಿವೆ.ಸುಮಾರು ಒಂದು ತಿಂಗಳುಗಳ ಕಾಲ ನಡೆಯುವ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಜಾತ್ರೆಗೆ ಬಂದ ಭಕ್ತರು ತಮ್ಮ ಮಕ್ಕಳ ಖುಷಿಗಾಗಿ ಮಕ್ಕಳ ಆಟಿಕೆ ಅಂಗಡಿಗಳು, ಜೋಕಾಲಿಗಳು, ಮಹಿಳೆಯರಿಗಾಗಿ ಬಳೆಯ ಅಂಗಡಿಗಳನ್ನು, ಮಿಠಾಯಿ ಅಂಗಡಿಗಳನ್ನು ನಿರ್ಮಾಣ ಮಾಡಿಕೊಂಡು ವ್ಯಾಪಾರ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು.ಬಳೆ ಅಂಗಡಿಗಳು: ಜಾಗೃತಿ ಸಂದೇಶಗಳ ಜತೆ ಜಾತ್ರೆಯಲ್ಲಿ ಮಹಿಳೆಯರ ಬಳೆ ಅಂಗಡಿಗಳು ರಾರಾಜಿಸುತ್ತಿವೆ. ಬಳೆ ಅಂಗಡಿಗಳಿಗೆ ಪ್ರತ್ಯೇಕ ಮಳಿಗೆ ನಿರ್ಮಾಣ ಮಾಡಲಾಗಿದೆ. ಈ ಅಂಗಡಿಗಳಲ್ಲೂ ನಾನಾ ಬರಹಗಳ ಫಲಕ ನೇತು ಹಾಕಲಾಗಿದೆ. ಮಕ್ಕಳ ಆಟವಾಡಲು ಪ್ರತ್ಯೇಕ ಸ್ಥಳವಿದ್ದು, ಜೋಕಾಲಿ, ಮಕ್ಕಳ ಖುಷಿಗಾಗಿ ವಿವಿಧ ಆಟಿಕೆಯ ಸಾಮಾನುಗಳು ಕೂಡ ಬಂದಿದೆ.ಕಂಗೊಳಿಸುತ್ತಿವೆ ಜೋಕಾಲಿ: ಜಾತ್ರೆಗೆ ಬಂದಿರುವ ಭಕ್ತರಿಗೆ ಹತ್ತಾರು ಜೋಕಾಲಿಗಳು ಮಕ್ಕಳು ಹಾಗೂ ಯುವಕರಿಗೆ ಮನರಂಜನೆ ನೀಡಲು ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರ ಮಾಡಿದ್ದು ರಾತ್ರಿಯ ಸಮಯದಲ್ಲಿ ಕಂಗೊಳಿಸುತ್ತಿವೆ.ಗವಿಸಿದ್ಧೇಶ್ವರ ಜಾತ್ರೆ ಒಂದಿಲ್ಲೊಂದು ವಿಶೇಷತೆಗಳಿಂದ ಗಮನ ಸೆಳೆಯುತ್ತಿದೆ. ಈ ಮೂಲಕ ಜಾತ್ರೆಯು ಜನರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಕೇವಲ ಧಾರ್ಮಿಕ ಆಚರಣೆಯಾಗದೇ ಸಾಮಾಜಿಕ ಪ್ರಜ್ಞೆ, ಸಾಂಸ್ಕೃತಿಕ ಮೆರಗನ್ನು ಮೈಗೂಡಿಸಿಕೊಂಡಿದೆ. ಹೀಗಾಗಿ ಜಾತ್ರೆಯ ಖ್ಯಾತಿ ಎಲ್ಲಡೆ ಪಸರಿಸಿ, ಎಲ್ಲರಿಗೂ ಅಚ್ಚುಮೆಚ್ಚು ಎನಿಸಿದೆ.