ಜೋಕನಾಳ ಚೆಕ್‌ ಡ್ಯಾಂ ಕಳಪೆ-ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಪ್ರಕಾಶ ಆರೋಪ

| Published : Jul 31 2024, 01:00 AM IST

ಸಾರಾಂಶ

ರಟ್ಟೀಹಳ್ಳಿ ತಾಲೂಕಿನ ಜೋಕನಾಳ ಗ್ರಾಮದ ಹೊರವಲಯದಲ್ಲಿ ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ 1.5 ಕೋಟಿ ವೆಚ್ಚದ ಚೆಕ್ ಡ್ಯಾಂ ನಿರ್ಮಾಣ ಸಂಪೂರ್ಣ ಕಳಪೆಯಾಗಿದ್ದು, ಸಂಬಂಧ ಪಟ್ಟ ಇಲಾಖೆ ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದೆ ಎಂದು ಬಿಜೆಪಿ ತಾಲೂಕು ರೈತ ಮೋರ್ಚಾ ಅಧ್ಯಕ್ಷ ಪ್ರಕಾಶ ಹರಳಹಳ್ಳಿ ಆರೋಪಿಸಿದರು.

ರಟ್ಟೀಹಳ್ಳಿ:ತಾಲೂಕಿನ ಜೋಕನಾಳ ಗ್ರಾಮದ ಹೊರವಲಯದಲ್ಲಿ ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ 1.5 ಕೋಟಿ ವೆಚ್ಚದ ಚೆಕ್ ಡ್ಯಾಂ ನಿರ್ಮಾಣ ಸಂಪೂರ್ಣ ಕಳಪೆಯಾಗಿದ್ದು, ಸಂಬಂಧ ಪಟ್ಟ ಇಲಾಖೆ ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದೆ ಎಂದು ಬಿಜೆಪಿ ತಾಲೂಕು ರೈತ ಮೋರ್ಚಾ ಅಧ್ಯಕ್ಷ ಪ್ರಕಾಶ ಹರಳಹಳ್ಳಿ ಆರೋಪಿಸಿದರು.

ಅದೇ ರೀತಿ ನೇಶ್ವಿ ಗ್ರಾಮದ ದೊಡ್ಡ ಹಳ್ಳ ಹತ್ತಿರ ಸುಮಾರು ಒಂದು ಕೋಟಿ ವೆಚ್ಚದ ಎರಡು ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗಳೂ ಕಳಪೆಯಾಗಿದ್ದು, ಸಾರ್ವಜನಿಕರು ನೀಡಿದ ಟ್ಯಾಕ್ಸ್‌ ಹಣದಿಂದ ಕೋಟ್ಯಂತರ ಹಣ ದುರುಪಯೋಗವಾಗಿದ್ದು ಸಂಬಂಧ ಪಟ್ಟ ಇಲಾಖೆ ಮಾತ್ರ ಕಂಡು ಕಾಣದಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಚೆಕ್ ಡ್ಯಾಂ ನಿರ್ಮಾಣದಿಂದ ಆ ಭಾಗದ ಅಂತರ್ಜಲ ಮಟ್ಟ ಹೆಚ್ಚಿಸಿ ನೂರಾರು ಎಕರೆಗಳಿಗೆ ನೀರುಣಿಸುವ ಉದ್ದೇಶದಿಂದ ಕೋಟ್ಯಂತರ ಹಣ ಇಲಾಖೆಗೆ ನೀಡಿದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಾಮಗಾರಿ ಉದ್ದೇಶ ಮಾತ್ರ ಹಳ್ಳ ಹಿಡಿದಿದೆ ಎಂದು ಆರೋಪಿಸಿದರು.

ತಾಲೂಕು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಪ್ರಕಾಶ ಹರಳಹಳ್ಳಿ ಮಾತನಾಡಿ, ಜೋಕನಾಳ ಹಾಗೂ ನೇಶ್ವಿ ಗ್ರಾಮದ ವ್ಯಾಪ್ತಿಯಲ್ಲಿ ನಿರ್ಮಾಣವಾದ ಚೆಕ್ ಡ್ಯಾಂಗಳು ಮೇಲ್ನೋಟಕ್ಕೆ ಸಂಪೂರ್ಣ ಕಳಪೆ ಮಟ್ಟದ್ದಾಗಿ ಕಂಡು ಬಂದಿವೆ. ಕಾಲುವೆಯ ಎರಡು ಬದುಗಳಲ್ಲಿ ಸರಿಯಾದ ಕಲ್ಲು ಪಿಚ್ಚಿಂಗ ಮಾಡಿಲ್ಲ, ಕಾಲುವೆಗಳಲ್ಲಿ ಸರಿಯಾಗಿ ಹೂಳು ತೆಗೆದಿಲ್ಲ, ಗುಣಮಟ್ಟದ ಕಬ್ಬಿಣದ ಬಳಕೆ ಮಾಡಿಲ್ಲ, ಎರಡು ಚೆಕ್ ಡ್ಯಾಂ ನಿರ್ಮಾಣದ ಅಂತರ ಅತ್ಯಂತ ಕಡಿಮೆ ಇದ್ದುದರಿಂದ ಕಾಮಗಾರಿ ಅವೈಜ್ಞಾನಿಕ ರೀತಿ ನಿರ್ಮಾಣ ಮಾಡಿ ಈ ಭಾಗದ ರೈತರಿಗೆ ಇಲಾಖೆಯಿಂದ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ಬಿಜೆಪಿ ಮುಖಂಡ ಬಸವರಾಜ ಗಬ್ಬೂರ ಮಾತನಾಡಿ, ನೇಶ್ವಿ ಗ್ರಾಮದ ದೊಡ್ಡ ಹಳ್ಳದ ಹತ್ತಿರ ನಿರ್ಮಾಣವಾದ ಚೆಕ್ ಡ್ಯಾಂ ಕಳಪೆ ಕಾಮಗಾರಿಯಿಂದಾಗಿ ಅಲ್ಲಲ್ಲಿ ಬಿರುಕು ಮೂಡುತ್ತಿದ್ದು, ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿದ್ದು ಇಂತಹ ಮಳೆಗೆ ಚೆಕ್ ಡ್ಯಾಂಗಳು ಬಹು ಬೇಗ ಹಾಳಾಗುತ್ತಿವೆ. ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಸ್ಥಳ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಅಧಿಕಾರಿಗಳು ಕಾಮಗಾರಿಯ ಸ್ಥಳ ಪರಿಶೀಲನೆ ಮಾಡದೆ ಕೇವಲ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಸಂಪೂರ್ಣ ತನಿಖೆಯಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ನಿರಂತರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಇದೇ ಸಂದರ್ಭದಲ್ಲಿ ರೈತರಾದ ಸೋಮನಗೌಡ ಗುಬ್ಬಿ, ಮಹದೇವಪ್ಪ ಕಚ್ಚರಬಿ, ಬಸವರಾಜ ಕಚ್ಚರಬಿ, ಬಾನಪ್ಪಗೌಡ ಗುಬ್ಬಿ, ಕುಮಾರ ಹುಡೇದ, ಮಲ್ಲನಗೌಡ, ಬಸವರಾಜ ಗೋಣೆಪ್ಪನವರ, ಪ್ರಭು ಮುದಿವೀರಣ್ಣನವರ, ಪ್ರಕಾಶ ಮತ್ತೂರ ಇದ್ದರು.

ತಾಲೂಕಿನ ಜೋಕನಾಳ ಗ್ರಾಮದಲ್ಲಿ 1.5 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ ಚೆಕ್ ಡ್ಯಾಂ ಕಾಮಗಾರಿ ಅಂದಾಜು ಪತ್ರಿಕೆಯಲ್ಲಿ ಅನಗತ್ಯ ಹಣ ಬಳಕೆ ಮಾಡಿ ದುರ್ಬಳಕೆ ಮಾಡಿದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ತಾಲೂಕು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಪ್ರಕಾಶ ಹರಳಹಳ್ಳಿ

ಹೇಳಿದರು.