ಜೋಕುಮಾರಸ್ವಾಮಿಯನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿದರೆ ಮಳೆ​, ಬೆಳೆ ಸಮೃದ್ಧವಾಗಿ ಬರುತ್ತದೆ.

ಸಿ.ಕೆ. ನಾಗರಾಜ ಹೊಸಪೇಟೆ

ಉತ್ತರ ಕರ್ನಾಟಕ ಭಾಗದಲ್ಲಿ ಭಾದ್ರಪದ ಮಾಸದ ಸಂದರ್ಭದಲ್ಲಿ ಏಳು ದಿನಗಳ ಕಾಲ ಆಚರಿಸಲಾಗುವ ಜೋಕುಮಾರಸ್ವಾಮಿ ಹಬ್ಬ ಜಿಲ್ಲೆಯಲ್ಲಿ ಎಲ್ಲೆಡೆ ಆರಂಭವಾಗಿದೆ.

ಜೋಕುಮಾರಸ್ವಾಮಿಯನ್ನು ಬುಟ್ಟಿಯಲ್ಲಿಟ್ಟುಕೊಂಡು ಮಹಿಳೆಯರು ಮನೆ ಮನೆಗೆ ತೆರಳುವುದು ಅಲ್ಲಲ್ಲಿ ಕಂಡು ಬರುತ್ತಿದೆ. ಗಂಗಾಮತಸ್ಥ ಸಮಾಜದ ಮಹಿಳೆಯರು ಜೋಕುಮಾರಸ್ವಾಮಿಯನ್ನು ಬುಟ್ಟಿಯಲ್ಲಿ ಇಟ್ಟುಕೊಂಡು ಮನೆ ಮನೆಗೆ ತೆರಳಿ ಅಡ್ಡ ಅಡ್ಡ ಮಳೆ ಬಂದು...ದೊಡ್ಡ ದೊಡ್ಡ ಕೆರೆ ತುಂಬಿ, ಗೊಡ್ಡಗಳೆಲ್ಲ ಹೈನಾಗಿ ಜೋಕುಮಾರ..... ಎಂದು ಹಾಡುತ್ತಾ ಜೋಕುಮಾರಸ್ವಾಮಿಯನ್ನು ಆರಾಧಿಸುವ ಹಬ್ಬ ಪ್ರಾರಂಭವಾಗಿದೆ.

ಜೋಕುಮಾರಸ್ವಾಮಿ ಜನಪದೀಯ ಸಂಸ್ಕೃತಿಯ ವಿಶಿಷ್ಟ ಹಬ್ಬವಾಗಿದ್ದು, ಜೋಕುಮಾರಸ್ವಾಮಿಯನ್ನು ಶ್ರದ್ಧಾಭಕ್ತಿಯಿಂದ ಪೂಜಿಸಿದರೆ ಮಳೆ​, ಬೆಳೆ ಸಮೃದ್ಧವಾಗಿ ಬರುತ್ತದೆ. ಜತೆಗೆ ಕೆಟ್ಟದ್ದನ್ನು ಹೋಗಲಾಡಿಸಿ ಸುಖ ಶಾಂತಿ ನೀಡುತ್ತಾ ಮನುಷ್ಯರಿಗೆ ಒಳ್ಳೆಯದನ್ನೇ ಮಾಡುತ್ತಾನೆ ಎಂಬ ನಂಬಿಕೆ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ.

ಗಣೇಶ ವಿಸರ್ಜನೆಯ ನಂತರ ಭಾದ್ರಪದ ಮಾಸದ ಅಷ್ಟಮಿಯ ದಿನದಂದು ಜೋಕುಮಾರಸ್ವಾಮಿ ಹುಟ್ಟುತ್ತಾನೆ. ಅಲಂಕೃತ ಜೋಕುಮಾರಸ್ವಾಮಿ ಮೂರ್ತಿಯನ್ನು ಮಹಿಳೆಯರು ಬುಟ್ಟಿಯಲ್ಲಿಟ್ಟುಕೊಂಡು ಆತನಿಗೆ ಸಂಬಂದಿಸಿದ ಕತೆ-ಹಾಡು ಹಾಡುತ್ತಾ ಮನೆ ಮನೆಗೆ ಏಳು ದಿನಗಳ ಕಾಲ ಊರಲ್ಲಿ ಸಂಚರಿಸುತ್ತಾರೆ.

ಜೋಕುಮಾರಸ್ವಾಮಿಯನ್ನು ಹೊತ್ತ ಮಹಿಳೆಯರು ಮನೆಗೆ ಬಂದರೆ ಅಕ್ಕಿ, ಜೋಳ, ಬೆಲ್ಲ, ಎಣ್ಣೆ, ಬೆಣ್ಣೆ, ಉಪ್ಪು, ಹುಣಸೆಹಣ್ಣು, ಮೆಣಸಿನಕಾಯಿ ಸೇರಿದಂತೆ ಇತರೆ ಧಾನ್ಯ ನೀಡಿ ಭಕ್ತಿ ಮೆರೆಯುತ್ತಾರೆ. ಮನೆಯವರು ಕೊಡುವ ಜೋಳಕ್ಕೆ ಮಹಿಳೆಯರು ಪ್ರತಿಯಾಗಿ ಮೊರದಲ್ಲಿ ಐದಾರು ಕಾಳು ಜೋಳ, ಬೇವಿನ ಸೊಪ್ಪು ನೀಡುತ್ತಾರೆ. ಜೋಳದ ಕಾಳು, ಬೇವಿನ ಸೊಪ್ಪನ್ನು ಕಾಳಿನ ಸಂಗ್ರಹದಲ್ಲಿ ಹಾಕುತ್ತಾರೆ. ಹೀಗೆ ಮಾಡುವುದರಿಂದ ಪೈರುಗಳು ಹುಲುಸಾಗುತ್ತವೆ. ಧಾನ್ಯಗಳಿಗೆ ಹುಳು ಬಾಧೆ ಕಾಣಿಸಿಕೊಳ್ಳುವುದಿಲ್ಲ ಎನ್ನುವುದು ರೈತರ ನಂಬಿಕೆ.

ಅಧುನಿಕತೆಯ ಭರಾಟೆಯಲ್ಲೂ ಸಹ ಈಗಲೂ ಪುರಾತನ ಸಂಸ್ಕೃತಿ ಮುಂದುವರಿಸಿಕೊಂಡು ಹೋಗಲಾಗುತ್ತಿದ್ದು, ಈಗ ಜಿಲ್ಲೆಯಲ್ಲಿ ಮಳೆಯ ಕೊರತೆ ಹೆಚ್ಚಿದ್ದು, ಈ ಪುರಾತನ ಜೋಕುಮಾರಸ್ವಾಮಿ ಹಬ್ಬ ಆಚರಣೆ ಮೂಲಕವಾದರೂ ಉತ್ತಮ ಮಳೆ ಸುರಿಯಲಿ ಎಂದು ರೈತರು ಜೋಕುಮಾರಸ್ವಾಮಿಯಲ್ಲಿ ಪ್ರಾರ್ಥಿಸುತ್ತಿದ್ದಾರೆ.

ಪುರಾತನ ಕಾಲದಿಂದ ಗಂಗಾಮತಸ್ಥ ಸಮುದಾಯದವರು ಜೋಕುಮಾರಸ್ವಾಮಿಯನ್ನು ಬುಟ್ಟಿಯಲ್ಲಿ ಇಟ್ಟುಕೊಂಡು ಮನೆ ಮನೆಗೆ ತೆರಳಿ ಆತನ ಹಾಡು ಮತ್ತು ಆತನ ಕಥೆ ಜನರಿಗೆ ತಿಳಿಸುವ ಮೂಲಕ ಜೋಕುಮಾರಸ್ವಾಮಿ ಬಂದು ಹೋದ ಮೇಲೆ ಬೆಳೆ ಚೆನ್ನಾಗಿ ಬೆಳೆದು ರೈತರ ಮೊಗದಲ್ಲಿ ನಗು ಚೆಲ್ಲಲ್ಲಿ ಎಂದು ಈ ಹಬ್ಬ ಆಚರಿಸಲಾಗುತ್ತದೆ ಎಂದು ಮರಿಯಮ್ಮನಹಳ್ಳಿ ನಿವಾಸಿಗಳಾದ ಬಾರಿಕರ ಹುಲಿಗೆಮ್ಮ, ದೇವಮ್ಮ, ನಾಗರತ್ನ, ಅಕ್ಕಮ್ಮ ತಿಳಿಸಿದ್ದಾರೆ.