ಸಾರಾಂಶ
ನಾರಾಯಣ ಮಾಯಾಚಾರಿ
ಮುದ್ದೇಬಿಹಾಳ : ಮಾರುಕಟ್ಟೆ ತುಂಬಾ ಈಗ ಮಾವು ತನ್ನ ಬಾಹುಳ್ಯ ವಿಸ್ತರಿಸಿದೆ. ಋತುಮಾನದ ಹಣ್ಣು, ಹಣ್ಣುಗಳ ರಾಜನಾಗಿರುವ ಮಾವಿಗೆ ಈಗ ಎಲ್ಲಿಲ್ಲದ ಬೇಡಿಕೆ. ಆರೋಗ್ಯಕ್ಕೆ ಉತ್ತಮ ಎನ್ನುವ ಅಂಶಗಳೂ ಅದರಲ್ಲಿವೆ. ಆದರೆ, ಅದನ್ನು ಹಣ್ಣಾಗಿ ಮಾಗಿಸಲು ಬಳಸುವ ಪ್ರಕ್ರಿಯೆ ಆಧಾರದ ಮೇಲಿಂದ ಮಾವಿನ ಆರೋಗ್ಯವನ್ನು ಅಳೆಲಾಗುತ್ತದೆ.
ಮಾರುಕಟ್ಟೆಯಲ್ಲಿ ಮಾವಿನ ಹಣ್ಣು ಇದೆ ಅಂದಾಗ ಕಡಿಮೆ ಬೆಲೆಗೆ ಖರೀದಿಸುವುದೊಂದನ್ನೇ ನಾವು ನೋಡುತ್ತೇವೆ. ಆದರೆ, ಅದರ ಹಿಂದಿನ ರಾಸಾಯನಿಕ ಬಳಕೆಯನ್ನು ಗಮನಿಸುವುದು ತೀರಾ ವಿರಳ. ಹೀಗಾಗಿ ಕೆಲವು ಬಾರಿ ಮಾವಿಗೆ ಬಳಸುವ ರಾಸಾಯನಿಕ ಕೂಡ ಮಾನವ ದೇಹ ಪ್ರವೇಶಕ್ಕೂ ನಾವು ಅವಕಾಶ ಕಲ್ಪಿಸುತ್ತೇವೆ. ಆದ್ದರಿಂದ ಖರೀದಿದಾರರು ಈಗ ಎಚ್ಚರಿಕೆ ವಹಿಸಬೇಕಾಗಿದೆ.
ಬೇಗನೆ ಹಣ್ಣಾಗಿಸಲು ರಾಸಾಯನಿಕ ಬಳಕೆ:
ತಮ್ಮ ಲಾಭದ ಆಸೆಗೆ ಮಾವಿನ ಹಣ್ಣನ್ನು ಬೇಗನೆ ಮಾಗಿಸಲು ಕೃತಕ ರಾಸಾಯನಿಕ ಪದಾರ್ಥಗಳನ್ನು ಕೆಲವು ವ್ಯಾಪಾರಿಗಳು ಬಳಕೆ ಮಾಡುತ್ತಿದ್ದಾರೆ. ಅದಕ್ಕಾಗಿ ಅವರು ಕ್ಯಾಲ್ಸಿಯಂ ಕಾರ್ಬೈಡ್ ಆರ್ಸೆನಿಕ್ ಮತ್ತು ಫಾಸ್ಟರಸ್ ಹೈಡ್ರೇಡ್ ರಾಸಾಯನಿಕ ಬಳಸಿ ಮಾಗಿಸುತ್ತಾರೆ. ಈ ರೀತಿಯಾಗಿ ಮಾಗಿಸುವುದರಿಂದ ಮನುಷ್ಯನ ಆರೋಗ್ಯದ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ. ಸಾಮಾನ್ಯ ಸಮಸ್ಯೆಗಳಾದ ಗಂಟಲು ಕೆರೆತ, ತುರಿಕೆ, ಚರ್ಮದ ಸಮಸ್ಯೆ, ಅಲರ್ಜಿಯಿಂದ ಹಿಡಿದು ದೀರ್ಘಕಾಲಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎನ್ನುತ್ತಾರೆ ವೈದ್ಯರು.
ಈ ಬಾರಿ ಮಾವು ಭರ್ಜರಿ ಇಳುವರಿ ಬಂದಿದೆ. ಪಟ್ಟಣದ ಸರಾಫ ಬಜಾರ, ಮುಖ್ಯ ಬಜಾರ ಸೇರಿದಂತೆ ಪಟ್ಟಣದ ಬಹುತೇಕ ಎಲ್ಲ ಮುಖ್ಯರಸ್ತೆಗಳಲ್ಲಿ ಮಾವು ಮಾರಾಟ ಮಾಡಲಾಗುತ್ತಿದೆ. ಮಾವು ಋತುವಿನ ಆರಂಭದಲ್ಲಿ ಹಣ್ಣಿನ ಬೆಲೆ ಹೆಚ್ಚಿರುತ್ತದೆ. ಹೀಗಾಗಿ ವರ್ತಕರು ಲಾಭ ಗಳಿಕೆ ಸಲುವಾಗಿ ಕಾಯಿಯನ್ನು ಕಿತ್ತು ಬಲವಂತವಾಗಿ ಹಣ್ಣು ಮಾಡುತ್ತಾರೆ. ಇದಕ್ಕೆ ರಾಸಾಯನಿಕವನ್ನು ಬಳಕೆ ಮಾಡುತ್ತಾರೆ. ಈ ರಾಸಾಯನಿಕವು ಕಾಯನ್ನು ಕೃತಕವಾಗಿ ಮಾಗಿಸಿ ಅದಕ್ಕೆ ಬಣ್ಣ ನೀಡುತ್ತದೆ. ಇದರೊಟ್ಟಿಗೆ ಹಣ್ಣಿನಲ್ಲಿ ವಿಷಕಾರಿ ಅಂಶವೂ ಸೇರ್ಪಡೆ ಆಗುತ್ತದೆ ಎಂದು ವಿವರಿಸುತ್ತಾರೆ ಮಾರುಕಟ್ಟೆ ತಜ್ಞರು.
ನೈಸರ್ಗಿಕವಾಗಿ ಹಣ್ಣಾಗಿದ್ದನ್ನು ಬಳಸಿ:
ತಾಲೂಕಿನ ಸುತ್ತಲಿನ ಗ್ರಾಮಗಳ ರೈತರು ತಮ್ಮ ಹೊಲದಲ್ಲಿ ಬೆಳೆದು ನಿಂತ ಮಾವಿನ ಹಣ್ಣನ್ನು ಸಾವಯವ ರೂಪದಲ್ಲಿ ಬೆಳೆದ ಒಣಹುಲ್ಲಿನ ಶಾಖದಲ್ಲಿ ಮಾಗಿಸಿದ ಮಾವು ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ, ಮಾರುಕಟ್ಟೆಯಲ್ಲಿ ನೈಸರ್ಗಿಕ ಮಾವಿನ ಹಣ್ಣಿನ ಬೆಲೆ ಜಾಸ್ತಿ ಇರುತ್ತದೆ. ಈ ಹಿನ್ನೆಲೆಯಲ್ಲಿ ಬಡವರು, ಮಧ್ಯಮ ವರ್ಗದವರು ರಸ್ತೆ ಬದಿಗಳಲ್ಲಿ ಮಾರಾಟ ಮಾಡುತ್ತಿರುವ ರಸಾಯನಿಕದಿಂದ ಕೃತಕ ಮಾಗಿಸಿದ ಹಣ್ಣಿನತ್ತಲೇ ಮುಖ ಮಾಡುತ್ತಿದ್ದಾರೆ. ಆದರೆ, ನೈಸರ್ಗಿಕವಾಗಿ ಹಣ್ಣಾದ ಮಾವು ಹೆಚ್ಚು ರುಚಿ, ಜತೆಗೆ ಆರೋಗ್ಯ ಎಂಬುವುದರಲ್ಲಿ ಎರಡು ಮಾತಿಲ್ಲ.
ರಾಸಾಯನಿಕ ಮಾವು ಎಂದು ಕಂಡು ಹಿಡಿಯೋದು ಹೇಗೆ?
-ಮಾವಿನ ಹಣ್ಣನ್ನು ಖರೀದಿಸುವಾಗ, ಮಾವಿನ ಹಣ್ಣಿನ ಬಣ್ಣವನ್ನು ನೋಡಲು ಮರೆಯದಿರಿ. ಮಾವು ರಾಸಾಯನಿಕಗಳಿಂದ ಹಣ್ಣಾದಾಗ, ಅದರ ಮೇಲೆ ಹಸಿರು ಚುಕ್ಕೆಗಳಿರುತ್ತವೆ.
-ರಾಸಾಯನಿಕವಾಗಿ ಮಾಗಿದ ಹಣ್ಣುಗಳು ಗಾತ್ರದಲ್ಲಿ ತುಂಬಾ ಚಿಕ್ಕದಾಗಿರುತ್ತವೆ. ಅವುಗಳಲ್ಲಿ ಹೆಚ್ಚಿನವು ರಸವನ್ನು ತೊಟ್ಟಿಕ್ಕುವಂತೆ ಕಾಣುತ್ತವೆ.
- ಮಾವಿನ ಹಣ್ಣುಗಳನ್ನು ಖರೀದಿಸುವಾಗ, ಮಾವಿನಹಣ್ಣನ್ನು ಬಕೆಟ್ ನೀರಿನಲ್ಲಿ ಹಾಕಿ ಮತ್ತು ಯಾವ ಮಾವಿನ ಹಣ್ಣುಗಳು ಮುಳುಗುತ್ತಿವೆ ಮತ್ತು ನೀರಿನ ಮೇಲ್ಮೈಯಲ್ಲಿವೆ ಎಂದು ನೋಡಿ. ನೀರಿನಲ್ಲಿ ಮುಳುಗುವ ಮಾವು ನೈಸರ್ಗಿಕವಾಗಿ ಹಣ್ಣಾಗುತ್ತವೆ. ಆದರೆ ಮಾವಿನ ಹಣ್ಣು ಮೇಲೆ ತೇಲುತ್ತಿರುವುದನ್ನು ನೀವು ನೋಡಿದರೆ, ಅದನ್ನು ರಾಸಾಯನಿಕಗಳಿಂದ ಹಣ್ಣಾಗಿಸಲಾಗಿದೆ ಎಂದು ಅರ್ಥಮಾಡಿಕೊಳ್ಳಿ.
-ಮಾವಿನ ಹಣ್ಣನ್ನು ಕೊಳ್ಳುವಾಗ ಅದನ್ನು ಲಘುವಾಗಿ ಒತ್ತಿ ನೋಡಬೇಕು. ಮಾವು ಮೃದುವಾದಾಗ ಹಣ್ಣಾಗಿದೆ ಎಂದು ಪರಿಗಣಿಸಲಾಗುತ್ತದೆ. ಆದರೆ ನೀವು ಮಾವಿನಹಣ್ಣನ್ನು ಒತ್ತಿದಾಗ ಕೆಲವು ಸ್ಥಳಗಳಲ್ಲಿ ಮಾವು ಗಟ್ಟಿಯಾಗಿದ್ದರೆ, ಮಾವು ಸರಿಯಾಗಿ ಹಣ್ಣಾಗಿಲ್ಲ ಮತ್ತು ಅದನ್ನು ಕೆಮಿಕಲ್‌ನಿಂದ ಹಣ್ಣಾಗಿಸಿ ಮಾರಾಟ ಮಾಡಲಾಗುತ್ತಿದೆ.
-ಬಿಳಿ ಅಥವಾ ನೀಲಿ ಬಣ್ಣದ ಗುರುತು ಇರುವ ಮಾವು ಕಂಡರೆ ಅದನ್ನು ಖರೀದಿಸಲೇಬಾರದು. ಈ ರೀತಿಯಾಗಿ, ನೀವು ರಾಸಾಯನಿಕವಾಗಿ ಮಾಗಿದ ಮಾವಿನಹಣ್ಣುಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.
ಯಾವುದೇ ಹಣ್ಣಾಗಿರಲಿ ರಾಸಾಯನಿಕ ಬಳಸಿದ ಹಣ್ಣುಗಳನ್ನು ಕೊಂಡುಕೊಳ್ಳಬಾರದು ತಿನ್ನಲು ಬಾರದು. ಇದರಿಂದ ಮಕ್ಕಳ ದೈಹಿಕ ಸಾಮರ್ಥ್ಯದ ಮೇಲೆ ಗರ್ಭಿಣಿಯರ ಮೇಲೆ ಹಾಗೂ ಸಾಮಾನ್ಯ ಜನರ ಆರೋಗ್ಯದ ಮೇಲೆ ದುಷ್ಟರಿಣಾಮ ಆಗೋದು ಪಕ್ಕಾ.
-ಮಲ್ಲಿಕಾರ್ಜುನ ಸಿದರಡ್ಡಿ ,ಪ್ರಗತಿಪರ ರೈತ ಮುಖಂಡ ನಾಗರಬೆಟ್ಟ,
ಈಚೆಗೆ ಕೇವಲ ಮಾವಿನ ಹಣ್ಣು ಮಾತ್ರವಲ್ಲ ಎಲ್ಲ ಹಣ್ಣುಗಳನ್ನು ಮನುಷ್ಯನ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ರಸಾಯನಿಕ ಬಳಸುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಮಾತ್ರವಲ್ಲದೇ ಜಿಲ್ಲೆಯ ಹಾಗೂ ತಾಲೂಕಿನಲ್ಲಿ ಆಹಾರ ಸಂರಕ್ಷಣಾ ಇಲಾಖೆ ಕರ್ತವ್ಯವನ್ನು ಸಂಪೂರ್ಣ ಮರೆತಿದೆಯೇ ಎಂದು ಭಾಸವಾಗುತ್ತಿದೆ.
-ಅರವಿಂದ ಕೊಪ್ಪ, ಪ್ರಗತಿಪರ ರೈತರು ಬಸರಕೋಡ