ಸಾರಾಂಶ
ಹಾವೇರಿ: ಕನ್ನಡ ನೆಲ, ಜಲ, ಭಾಷೆಗೆ ಕಂಟಕ ಬಂದಾಗ ಸರ್ಕಾರಕ್ಕೆ ಸಡ್ಡು ಹೊಡೆದು ನಿರ್ಭಿಡೆ ಮತ್ತು ನಿರ್ಭೀತದಿಂದ ಕನ್ನಡವನ್ನು ಕಟ್ಟುವಲ್ಲಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು, ಕನ್ನಡದ ಕಟ್ಟಾಳು, ನಾಡೋಜ ಪಾಟೀಲ ಪುಟ್ಟಪ್ಪ ಅವರು ಈ ನೆಲದ ನಕ್ಷತ್ರವಾಗಿದ್ದರು ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಶ್ಲಾಘಿಸಿದರು.ನಗರದ ಶಿವಲಿಂಗೇಶ್ವರ ದಾಸೋಹ ಮಂದಿರದಲ್ಲಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿದ್ದ ಸಿದ್ದಣ್ಣ ಚೌಶೆಟ್ಟಿ, ಪಾಟೀಲ ಪುಟ್ಟಪ್ಪ, ಜಿ.ಜಿ. ಹೊಟ್ಟೆಗೌಡ್ರ, ಬಿ.ಪಿ. ಶಿಡೇನೂರ, ಎಸ್.ಎಂ. ಹಾಲಯ್ಯನವರಮಠ ಮತ್ತು ನಾಗಭೂಷಣ ಮಾಮಲೇದೇಸಾಯಿ ಅವರ ದತ್ತಿನಿಧಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಏಕಕಾಲಕ್ಕೆ ಐದು ಪತ್ರಿಕೆಗಳಿಗೆ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಪಾಪು ಅವರು ಕೇವಲ ಪತ್ರಕರ್ತರು ಮಾತ್ರವಲ್ಲ, ಶ್ರೇಷ್ಠ ಸಾಹಿತಿ, ಸಂಶೋಧಕ, ಇತಿಹಾಸಕಾರ, ಸೂಕ್ಷ್ಮ ಸಂವೇದಾನಾಶೀಲ, ಅದ್ಭುತ ಜ್ಞಾನಕೋಶವಾಗಿದ್ದರು. ಕನ್ನಡನಾಡಿನ ನುಡಿಸೇವಕರ ಸಮಾಧಿಯು ಇಂದು ಹಲಗೇರಿಯಲ್ಲಿದ್ದು, ಸರ್ಕಾರವು ಅಲ್ಲಿ ಸ್ಮಾರಕ ನಿರ್ಮಿಸಿ, ಕನ್ನಡದ ಧೀಮಂತ ನಾಯಕನಿಗೆ ಗೌರವ ತೋರಿಸಬೇಕಾಗಿದೆ ಎಂದರು.ದತ್ತಿ ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸ್ವಂತ ಲಿಪಿ ಇದೆ. ಇಂದು ಜಗತ್ತಿನಲ್ಲಿ ಹಲವಾರು ಭಾಷೆಗಳು ನಶಿಸಿ ಹೋಗುತ್ತಿವೆ. ಆದರೆ ಕನ್ನಡ ಭಾಷೆಗೆ ಎಂತಹ ಕುತ್ತು ಬಂದರೂ ಅದನ್ನು ಎದುರಿಸುವ ಶಕ್ತಿಯೂ ಇದೆ. ವಚನ ಸಾಹಿತ್ಯವು ರಾಜಸತ್ತೆಯ ವಿರುದ್ಧ ಜನಾಂದೋಲನ ರೂಪಿಸಿದಂತೆ, ಇಂದಿನ ಆಧುನಿಕ ಸಂಸತ್ತಿನ ಮೂಲವನ್ನು 12ನೇ ಶತಮಾನದ ಅನುಭವ ಮಂಟಪದ ಮೂಲಕ ಜಗತ್ತಿಗೆ ಪರಿಚಯಿಸಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ ಎಂದರು.ಇದೇ ಸಂದರ್ಭದಲ್ಲಿ ಸಾಹಿತ್ಯ ಭವನ ನಿರ್ಮಾಣಕ್ಕೆ ಧನಸಹಾಯ ಮಾಡಿದ ಜಿ. ಬಿ. ಸಾವಿರಮಠ, ಅಕ್ಕಮಹಾದೇವಿ ಹಾನಗಲ್ಲ, ಪರಶುರಾಮ ಕರ್ಜಗಿ ಅವರನ್ನು ಕಸಾಪ ಪರವಾಗಿ ಸನ್ಮಾನಿಸಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಕೋಶಾಧ್ಯಕ್ಷ ಎಸ್.ಎನ್. ದೊಡ್ಡಗೌಡರ ವಹಿಸಿದ್ದರು. ದತ್ತಿದಾನಿಗಳಾದ ಜಿ.ಜಿ. ಹೊಟ್ಟೆಗೌಡರ, ಬಿ.ಪಿ. ಶಿಡೇನೂರ, ಎಸ್.ಎಂ. ಹಾಲ್ಯನವರಮಠ, ಶಿವಯೋಗಿ ವಾಲಿಶೆಟ್ಟರ, ಅಮೃತಮ್ಮ ಶೀಲವಂತರ, ಚಂದ್ರಶೇಖರ ಮಾಳಗಿ, ಹಿರಿಯ ಸಾಹಿತಿ ಸತೀಶ ಕುಲಕರ್ಣಿ, ರಾಜೇಂದ್ರ ಹೆಗಡೆ, ಬಸವರಾಜ ಪೂಜಾರ, ಎಸ್.ಸಿ. ಮರಳಿಹಳ್ಳಿ, ಪ್ರಭು ಹಿಟ್ನಳ್ಳಿ, ಜಗದೀಶ ಹುಡೇದ, ಉಡಚಪ್ಪ ಮಾಳಗಿ, ಚಂಪಾ ಹುಣಸಿಕಟ್ಟಿ, ಅನಸೂಯಾ ಭರತನೂರಮಠ, ರೇಣುಕಾ ಗುಡಿಮನಿ, ಜುಬೇದಾ ನಾಯ್ಕ, ಎಸ್.ವಿ. ಹಿರೇಮಠ, ಹರೀಶ ಚೂರಿ, ಪ್ರದೀಪ ಕ್ಯಾತನಕೇರಿ ಮತ್ತಿತರರು ಉಪಸ್ಥಿತರಿದ್ದರು.ಅಕ್ಕಮ್ಮ ಹಾನಗಲ್ಲ ಪ್ರಾರ್ಥಿಸಿದರು. ಈರಣ್ಣ ಬೆಳವಡಿ ಸ್ವಾಗತಿಸಿದರು. ಸಿ.ಎಸ್. ಮರಳಿಹಳ್ಳಿ ದತ್ತಿದಾನಿಗಳ ಪರಿಚಯ ಮಾಡಿದರು. ತಾಲೂಕು ಕಸಾಪ ಅಧ್ಯಕ್ಷ ವೈ.ಬಿ. ಆಲದಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಕೆ. ಕರ್ಜಗಿ ಕಾರ್ಯಕ್ರಮ ನಿರ್ವಹಿಸಿದರು.