ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರಪತ್ರಕರ್ತರು ಮತ್ತು ವಕೀಲರು ನಿಂತ ನೀರಾಗದೇ ನಿರಂತರ ಅಧ್ಯಯನ ಶೀಲರಾದಾಗ ಮಾತ್ರ ನಾವು ಅಂದುಕೊಂಡಿರುವ ಗುರಿ ಸಾಧಿಸಲು ಸಾಧ್ಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಹೇಳಿದರು
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರಾಗಿ ಎಲ್‌ಎಲ್‌ಬಿ ಪೂರೈಸಿ ವಕೀಲ ವೃತ್ತಿಗೆ ತೆರಳುತ್ತಿರುವ ಗೌಡಹಳ್ಳಿ ಮಹೇಶ್, ಪ್ರತಾಪ್, ಮನು ಶ್ಯಾನಭೋಗ್ ಅವರಿಗೆ ಶನಿವಾರ ಏರ್ಪಡಿಸಲಾಗಿದ್ದ ಅಭಿನಂದನಾ ಕಾರ್ಯಕ್ರಮ ಉದ್ಘಾಟಸಿ ಅವರು ಮಾತನಾಡಿ ಅವರು, ಸಮಾಜದ ನಾಲ್ಕನೇ ಅಂಗವಾಗಿರುವ ಪತ್ರಕರ್ತರು ನಿಂತ ನೀರಾಗಬಾರದು ಸದಾ ಕ್ರಿಯಾಶೀಲರಾಗಿ ಕೆಲಸ ಮಾಡುವ ಮೂಲಕ ವೃತ್ತಿಯ ಜೊತೆಗೆ ಇತರ ಉನ್ನತ ಸ್ಧಾನ ಪಡೆಯಬಹುದು ಎಂದು ಹೇಳಿದರು. ಪತ್ರಕರ್ತರು ಮತ್ತು ವಕೀಲರು ಸಮಯ ಪ್ರಜ್ಞರಾಗಿ ಕಾನೂನು ವ್ಯಾಪ್ತಿಯೊಳಗೆ ಕರ್ತವ್ಯ ನಿರ್ವಹಿಸಿ, ನೊಂದವರಿಗೆ ದನಿಯಾದಾಗ ಸಮಾಜ ತಮ್ಮನ್ನು ಗೌರವದಿಂದ ಕಾಣುತ್ತದೆ ನಿಷ್ಪಕ್ಷಪಾತವಾಗಿ, ಸರಳತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಅಭಿನಂದನೆ ಸಲ್ಲಿಸಿ ಮಾತನಾಡಿದ ಹಿರಿಯ ವಕೀಲರಾದ ಆರ್.ವಿ. ವಿರೂಪಾಕ್ಷ , ಪತ್ರಕರ್ತರು ಮತ್ತು ವಕೀಲರ ವೃತ್ತಿ ಬೇರೆಯಾದರೂ ಮಾಡುವ ಕೆಲಸ ಒಂದೇ ಅದು ಸಮಾಜಮುಖಿ ಕೆಲಸ. ಸಾಮಾಜಿಕ ಜವಾಬ್ದಾರಿ ಇಬ್ಬರ ಮೇಲೂ ಇದ್ದು ಕಾನೂನು ವ್ಯಾಪ್ತಿಯೊಳಗೆ ಸಮಾಜ ಕಟ್ಟುವ ಕೆಲಸ ಮಾಡಬೇಕು. ಸಮಾಜದಲ್ಲಿ ಅರಾಜಕತೆ ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು. ಸಾಮಾಜಿಕ ಜವಾಬ್ದಾರಿ ಇಟ್ಟುಕೊಂಡು ಕೆಲಸಮಾಡಬೇಕು. ಕಾನೂನು ನಿಯಮಗಳಿಗೆ ಬದ್ದರಾಗಿ ಕೆಲಸಮಾಡಬೇಕು ಎಂದರು.ಪತ್ರಕರ್ತರು ಮತ್ತು ವಕೀಲರು ಸಮಾಜದ ಋಣ ತೀರಿಸಬೇಕು, ಎಲ್ಲವನ್ನುರಾಜಿ ಮಾಡಬಾರದು. ನ್ಯಾಯಯುತವಾಗಿ ಸಮಸ್ಯೆ ಬಗೆಹರಿಸಬೇಕು. ನಾವು ಏನು ಗಳಿಸಿದ್ದೇವೆ ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಏನು ಕೊಡುತ್ತಿದ್ದೇವೆ ಎನ್ನುವುದು ಮುಖ್ಯ.ಈ ನಿಟ್ಟಿನಲ್ಲಿ ವಕೀಲ ವೃತ್ತಿಗೆ ಕಾಲಿಡುತ್ತಿರುವ ಪತ್ರಕರ್ತರು ಕಾರ್ಯೋನ್ಮುಖರಾಗಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ದೇವರಾಜು ಕಪ್ಪಸೋಗೆ ಮಾತನಾಡಿ ಪತ್ರಕರ್ತರಾಗಿ ಮತ್ತೊಂದು ವೃತ್ತಿಗೆ ಹೋಗುವುದು ಅಷ್ಟು ಸುಲಭವಲ್ಲ ಸದಾ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಾ, ವಕೀಲರಾಗಿ ಹೊರ ಹೊಮ್ಮಿರುವವರು ಬೆಂಕಿಯಲ್ಲಿ ಅರಳಿದ ಹೂಗಳು ಎಂದರು.ಗೌಡಹಳ್ಳಿ ಮಹೇಶ್, ಪ್ರತಾಪ್, ಮನು ಶ್ಯಾನಭೋಗ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು, ಪತ್ರಕರ್ತರ ಕಷ್ಟ ಕಾರ್ಪಣ್ಯಗಳಿಗೆ ಜೊತೆಯಾಗಿ ಸದಾ ಇರುತ್ತೇವೆ ಎಂದರು. ಕಾರ್ಯಕ್ರಮದಲ್ಲಿ ಗೌಡಹಳ್ಳಿ ಮಹೇಶ್, ಪ್ರತಾಪ್, ಮನು ಶ್ಯಾನಭೋಗ್, ಹಿರಿಯ ವಕೀಲರಾದ ಆರ್.ವಿ. ವಿರೂಪಾಕ್ಷ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸಂಘದ ಪ್ರಧಾನಕಾರ್ಯದರ್ಶಿ ಲಕ್ಕೂರು ಪ್ರಸಾದ್ ನಿರೂಪಿಸಿ, ಆರ್.ಎನ್. ಸಿದ್ದಲಿಂಗಸ್ವಾಮಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು, ಹಿರಿಯ ಪತ್ರಕರ್ತರು ಉಪಸ್ಥಿತರಿದ್ದರು.
-----೩೦ಸಿಎಚ್‌ಎನ್೩ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸಂಘದ ವತಿಯಿಂದ ಪತ್ರಕರ್ತರಾಗಿ ಎಲ್‌ಎಲ್‌ಬಿ ಪೂರೈಸಿ ವಕೀಲ ವೃತ್ತಿಗೆ ತೆರಳುತ್ತಿರುವ ಗೌಡಹಳ್ಳಿ ಮಹೇಶ್, ಪ್ರತಾಪ್, ಮನು ಶ್ಯಾನಭೋಗ್ ಅವರನ್ನು ಗೌರವಿಸಿ ಅಭಿನಂದಿಸಲಾಯಿತು.