ಸಾರಾಂಶ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ಪುತ್ತೂರು ಪತ್ರಿಕಾ ಭವನದಲ್ಲಿ ಶನಿವಾರ ಆಯೋಜಿಸಲಾದ ಪತ್ರಿಕಾ ದಿನಾಚರಣೆ ಮತ್ತು ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಪುತ್ತೂರು ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ
ಕನ್ನಡಪ್ರಭ ವಾರ್ತೆ ಪುತ್ತೂರುಬ್ರ್ಯಾಂಡ್ ಮಂಗಳೂರು ಕಾರ್ಯರೂಪಕ್ಕೆ ಬರುವಲ್ಲಿ ನಮ್ಮ ಜಿಲ್ಲೆಯ ಪತ್ರಕರ್ತರ ಕೊಡುಗೆ ಸಾಕಷ್ಟಿದೆ. ಅದೇ ರೀತಿ ಜಿಲ್ಲೆಯ ಎರಡನೇ ಅತಿದೊಡ್ಡ ನಗರವಾದ ಪುತ್ತೂರನ್ನು ಕೇಂದ್ರೀಕರಿಸಿಕೊಂಡು ಬ್ರ್ಯಾಂಡ್ ಪುತ್ತೂರು ಪರಿಕಲ್ಪನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಪತ್ರಕರ್ತರು ಮುಂದೆ ನಿಂತು ಮಹತ್ವದ ಕೊಡುಗೆ ನೀಡಬೇಕು ಎಂದು ಪುತ್ತೂರು ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್ ಹೇಳಿದರು.ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ಪುತ್ತೂರು ಪತ್ರಿಕಾ ಭವನದಲ್ಲಿ ಶನಿವಾರ ಆಯೋಜಿಸಲಾದ ಪತ್ರಿಕಾ ದಿನಾಚರಣೆ ಮತ್ತು ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಲೇಖನ ಬಹಳ ಹರಿತವಾದುದು. ಅದು ಬಹುದೊಡ್ಡ ಕ್ರಾಂತಿ ಮಾಡಬಲ್ಲುದು. ಆರಂಭದ ಕಾಲಘಟ್ಟದಲ್ಲಿ ಪತ್ರಿಕೆಗಳು ದೇಶದ ಸ್ವಾತಂತ್ರ್ಯಕ್ಕಾಗಿ ಕೆಲಸ ಮಾಡಿದವು. ನಂತರದಲ್ಲಿ ಮಾಧ್ಯಮಗಳು ದೇಶ ಸುಧಾರಣೆಗಾಗಿ ಕೆಲಸ ಮಾಡುತ್ತಿವೆ. ಇವತ್ತಿನ ಡಿಜಿಟಲ್ ಯುಗದಲ್ಲಿ ಮಾಧ್ಯಮ ಮಾಹಿತಿ ಸಾಕಷ್ಟು ವೇಗವಾಗಿದೆ. ಅದರ ಜತೆಗೆ ಸುಳ್ಳು ಸುದ್ದಿಗಳ ವಿಜ್ರಂಭಣೆಯೂ ಆಗುತ್ತಿದೆ. ಈ ವಿಚಾರದಲ್ಲಿ ಕಾರ್ಯನಿರತ ಪತ್ರಕರ್ತರು ಎಚ್ಚರ ವಹಿಸುವ ಅಗತ್ಯವಿದೆ ಎಂದು ಹೇಳಿದರು. ಈ ಸಂದರ್ಭ ದ್ವಿತೀಯ ಪಿಯುಸಿಯಲ್ಲಿ ಉನ್ನತ ಸಾಧನೆ ಮಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಸದಸ್ಯ ಮೇಘ ಪಾಲೆತ್ತಾಡಿ ಅವರ ಪುತ್ರಿ ಪುಣ್ಯಶ್ರೀ, ಸಂಶುದ್ಧೀನ್ ಸಂಪ್ಯ ಅವರ ಪುತ್ರಿ ಸಿಹಾ ಶಮ್ರಾ ಮತ್ತು ಕುಮಾರ್ ಕಲ್ಲಾರೆ ಅವರ ಪುತ್ರಿ ಕೃತಿ ಕೆ. ಅವರನ್ನು ಸಂಘದ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಸನ್ಮಾನಿಸಿದರು.ಕಾರ್ಯನಿರತ ಪತ್ರಕರ್ತರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ ಜಿಲ್ಲಾ ಸಂಘದಿಂದ ಸುವರ್ಣ ಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗುವುದು. ಇದು ಎಲ್ಲ ತಾಲೂಕು ಮಟ್ಟದಲ್ಲೂ ನಡೆಯಲಿದೆ ಎಂದರು.
ಜಿಲ್ಲಾ ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಶುಭ ಕೋರಿದರು. ಪುತ್ತೂರು ಸಂಘದ ಅಧ್ಯಕ್ಷ ಸಿದ್ದಿಕ್ ನೀರಾಜೆ ಅಧ್ಯಕ್ಷತೆ ವಹಿಸಿದ್ದರು. ಸಂಘದ ಸದಸ್ಯ ಮೇಘಾ ಪಾಲೆತ್ತಡಿ ಸ್ವಾಗತಿಸಿದರು. ಸದಸ್ಯ ಸುಧಾಕರ ಸುವರ್ಣ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೋಶಾಧಿಕಾರಿ ಸಂಶುದ್ದೀನ್ ಸಂಪ್ಯ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಶಶಿಧರ ರೈ ಕುತ್ಯಾಳ ವಂದಿಸಿದರು.