ಸಾರಾಂಶ
ಬ್ಯಾಡಗಿ: ಭಾರತಕ್ಕೆ ಸ್ವಾತಂತ್ರ್ಯ ಕೊಡಿಸುವುದೂ ಸೇರಿದಂತೆ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪತ್ರಕರ್ತರ ಕೊಡುಗೆ ಅನನ್ಯ. ಆದರೆ ಇತ್ತೀಚೆಗೆ ತಾಂತ್ರಿಕತೆ ಹೊಸ ಆಯಾಮಗಳು ಪತ್ರಿಕಾರಂಗವನ್ನು ಸಂಕಷ್ಟಕ್ಕೆ ಸಿಲುಕಿಸಿವೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ವರ್ತಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸಮ್ಮೇಳನ, ಜಿಲ್ಲಾ ಘಟಕದ ಸುವರ್ಣ ಮಹೋತ್ಸವ ಸಮಾರಂಭ ಹಾಗೂ ಬ್ಯಾಡಗಿ ತಾಲೂಕು ಘಟಕದ ನೂತನ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.ಸ್ವಾತಂತ್ರ್ಯ ಪೂರ್ವದಲ್ಲಿ ಪತ್ರಿಕೆಗಳು ಪರಕೀಯರ ಅಟ್ಟಹಾಸ ತೋರಿಸುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರನ್ನು ಎಚ್ಚರಿಸುವ ಕೆಲಸ ಮಾಡಿವೆ. ಸ್ವಾತಂತ್ರ್ಯ ನಂತರದಲ್ಲಿ ದೇಶದ ಸಮಸ್ಯೆಗಳನ್ನು ಆಡಳಿತಾರೂಢ ಸರ್ಕಾರಗಳಿಗೆ ಎಚ್ಚರಿಸುವ ಕೆಲಸವನ್ನು ಮಾಡಿವೆಯಲ್ಲದೇ ಹೋರಾಟಗಳಿಗೆ ಶಕ್ತಿ ತುಂಬಿಸುವ ಕೆಲಸವನ್ನು ಮಾಡಿವೆಯಲ್ಲದೇ ಆಯಾ ಕಾಲಘಟ್ಟಕ್ಕೆ ಅವಶ್ಯವಿದ್ದ ಹೋರಾಟ ನಡೆಸಿಕೊಂಡು ಬಂದಿವೆ ಎಂದರು.
ಶೀಘ್ರದಲ್ಲೇ ಬಸ್‌ಪಾಸ್: ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡುವ ನಿಟ್ಟಿನಲ್ಲಿ ಎಲ್ಲೆಡೆಯಿಂದ ಒತ್ತಡ ಬರುತ್ತಿದೆ, ಅವಶ್ಯಕವೂ ಹೌದು. ಕಾರ್ಯನಿರತ ಪತ್ರಕರ್ತರ ರಾಜ್ಯ ಘಟಕದ ಮನವಿ ಮೇರೆಗೆ ಸದರಿ ಕಡತವನ್ನು ಆರ್ಥಿಕ ಇಲಾಖೆಗೆ ಅನುಮೋದನೆಗಾಗಿ ಕಳುಹಿಸಿದ್ದು ಅನುಮೋದನೆ ಕೂಡ ಸಿಕ್ಕಿದೆ. ಶೀಘ್ರದಲ್ಲೇ ಗ್ರಾಮೀಣ ಪತ್ರಕರ್ತರಿಗೆ ಬಸ್‌ಪಾಸ್ ವಿತರಿಸುವುದಾಗಿ ತಿಳಿಸಿದರು.ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಮತ್ತು ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಜಿಲ್ಲೆ ರಚನೆಯಾಗಿ 25 ವರ್ಷ ಸಂದಿದ್ದರೂ, ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿಯಾಗಿಲ್ಲವೆಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ ಇಂತಹ ಸಂದರ್ಭದಲ್ಲಿ ಪತ್ರಿಕೆಗಳು ತಮ್ಮ ಜವಾಬ್ದಾರಿಯನ್ನು ಮೆರೆಯಬೇಕಾಗಿದ್ದು, ಜಿಲ್ಲೆ ಅಭಿವೃದ್ಧಿ ಪರವಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಎಚ್ಚರಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಕರ್ತರ ಸೇವಾ ಭದ್ರತೆ ಸೇರಿದಂತೆ ಇನ್ನಿತರ ಸಮಸ್ಯೆಗಳು ಕಾಡುತ್ತಿವೆ. ಅವರ ನೋವು ನಲಿವುಗಳಿಗೆ ಸ್ಪಂದಿಸುವ ಕೆಲಸ ಎಲ್ಲರಿಂದಾಗಬೇಕಾಗಿದೆ. ಕೋವಿಡ್‌ನಂತಹ ಸಂಕಷ್ಟದ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಪತ್ರಕರ್ತರು ಎದುರಿಸಬೇಕಾಯಿತು. ಇವೆಲ್ಲವುಗಳನ್ನು ನುಂಗಿಕೊಂಡು ಪತ್ರಕರ್ತರು ಹಾಗೂ ಪತ್ರಿಕೆಗಳು ಜನರಿಗೆ ಅವಶ್ಯವಿರುವ ಸುದ್ದಿಗಳನ್ನು ತಲುಪಿಸುವ ಕಾರ್ಯವನ್ನು ಮಾಡುತ್ತಿವೆ ಎಂದರು.ಪತ್ರಿಕೆಗಳಿಂದಲೇ ಪರಿಹಾರ: ಜಿಲ್ಲಾಧಿಕಾರಿ ವಿಜಯಕುಮಾರ ದಾನಮ್ಮನವರ ಮಾತನಾಡಿ, ಲೇಖನಿ ಖಡ್ಗಕ್ಕಿಂತ ಹರಿತ ಎನ್ನುವ ಮಾತುಗಳು ಅಕ್ಷರಶಃ ಸತ್ಯ. ದೇಶದಲ್ಲಿ ಬಹುತೇಕ ಸಮಸ್ಯೆಗಳಿಗೆ ಪತ್ರಿಕೆಗಳಿಂದಲೇ ಪರಿಹಾರ ಎನ್ನುವ ಮಾತು ನಿರ್ವಿವಾದ, ಹೊಲದಲ್ಲಿನ ಅಪಾಯಕಾರಿ ಕೊಳವೆಬಾವಿ ಮುಚ್ಚುವುದರಿಂದ ಹಿಡಿದು ರೈತರ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಡುವಲ್ಲಿ ಪತ್ರಿಕೆಗಳು ಪ್ರಾಮಾಣಿಕವಾಗಿ ಪ್ರಯತ್ನ ನಡೆಸಿವೆ ಎಂದರು.
ಇದೇ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಬಾಲಚಂದ್ರ ಪಾಟೀಲ, ಉಪಾಧ್ಯಕ್ಷ ಸುಭಾಸ ಮಾಳಗಿ, ವಾಣಿಜ್ಯರತ್ನ ಪ್ರಶಸ್ತಿ ಪುರಸ್ಕೃತ ಬಸವರಾಜ ಛತ್ರದ, ಹಿರಿಯ ಪತ್ರಕರ್ತ ಪ್ರಕಾಶ ಜೋಷಿ, ರಾಜ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಜಮೀರ ರೀತ್ತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ಪಂಚ ಗ್ಯಾರಂಟಿ ಯೋಜನೆ ಪ್ರಾಧಿಕಾರ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಕಾನಿಪ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ಸಾಹಿತಿ ಸಂಕಮ್ಮ ಸಂಕಣ್ಣನವರ, ಕಾಂಗ್ರೆಸ್ ತಾಲೂಕಾಧ್ಯಕ್ಷ ದಾನಪ್ಪ ಚೂರಿ, ಬಿಜೆಪಿ ತಾಲೂಕಾಧ್ಯಕ್ಷ ಶಿವಯೋಗಿ ಶಿರೂರು, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಂಕರ ಬಾರ್ಕಿ, ಮಾಜಿ ಅಧ್ಯಕ್ಷ ಪ್ರಕಾಶ ಬನ್ನಿಹಟ್ಟಿ, ಉದ್ದಿಮೆದಾರ ನಾಗರಾಜ ಆನ್ವೇರಿ, ಕಾನಿಪ ರಾಜ್ಯ ಘಟಕದ ಕಾರ್ಯದರ್ಶಿ ನಿಂಗಪ್ಪ ಚಾವಡಿ, ರಾಜ್ಯ ಸಮಿತಿ ಸದಸ್ಯ ಪರಶುರಾಮ ಸತ್ಯಪ್ಪನವರ, ಜಿಲ್ಲಾ ಕಾನಿಪ ಕಾರ್ಯದರ್ಶಿ ವೀರೇಶ ಮಡ್ಲೂರು, ಪ್ರಾಚಾರ‍್ಯ ಜಿ.ಎಸ್. ವೈದ್ಯ, ತಹಸೀಲ್ದಾರ್ ಫೀರೋಜ್‌ಷಾ ಸೋಮನಕಟ್ಟಿ, ತಾ.ಪಂ. ಇಓ ಕೆ.ಎಂ. ಮಲ್ಲಿಕಾರ್ಜುನ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ ಆಶ್ರಯ ಸಮಿತಿ ಆಧ್ಯಕ್ಷ ಮುನಾಫ್ ಎರೆಶೀಮಿ, ಉಪಸ್ಥಿತರಿದ್ದರು. ಕಾನಿಪ ತಾಲೂಕಾಧ್ಯಕ್ಷ ಶಿವಾನಂದ ಮಲ್ಲನಗೌಡ್ರ ಸ್ವಾಗತಿಸಿದರು. ಮಹದೇವ ಕರಿಯಣ್ಣನವರ ನಿರೂಪಿಸಿದರು. ಗಣೇಶ ಅರ್ಕಾಚಾರಿ ವಂದಿಸಿದರು.