- ಪತ್ರಿಕಾ ದಿನ- ಪತ್ರಿಕಾ ವಿತರಕರ ದಿನಾಚರಣೆಯಲ್ಲಿ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ

- - -

ಕನ್ನಡಪ್ರಭ ವಾರ್ತೆ ನ್ಯಾಮತಿ

ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ಇಂದಿನವರೆಗೂ ಸಮಾಜಕ್ಕೆ ಬೆಳಕು ನೀಡವಲ್ಲಿ ಪತ್ರಿಕಾರಂಗದ ಪಾತ್ರ ಅಪಾರವಾಗಿದೆ. ಜಗತ್ತಿಗೆ ಬೆಳಕು ನೀಡುವ ಪತ್ರಕರ್ತರ ಜೀವನ ಮಾತ್ರ ದೀಪದ ಕೆಳಗಿನ ಕತ್ತಲಿನಂತಿದೆ. ದಿನನಿತ್ಯ ಅನೇಕ ಸವಾಲು ಹಾಗೂ ಸಮಸ್ಯೆಗಳ ನಡುವೆ ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ ಹೇಳಿದರು.

ತಾಲೂಕಿನ ಸುರಹೊನ್ನೆ ಗ್ರಾಮದ ಪಿಎಂಶ್ರೀ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಮಹಾತ್ಮ ಗಾಂಧಿ ಹಾಗೂ ಡಾ. ಬಿ.ಆರ್‌. ಅಂಬೇಡ್ಕರ್‌ ಅವರಂತಹ ಮಹಾನ್‌ ನಾಯಕರು ಪತ್ರಿಕಾ ರಂಗದ ಮೂಲಕವೇ ಜನಜಾಗೃತಿ ಮೂಡಿಸಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ್ದರು. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕೋದ್ಯಮವು ಇಂದಿಗೂ ಹಿರಿಯರನ್ನು ಗೌರವಿಸುವ, ಪ್ರತಿಭಾನ್ವಿತರನ್ನು ಪ್ರೋತ್ಸಾಹಿಸುವ ಉತ್ತಮ ಕೆಲಸ ಮಾಡುತ್ತಿದೆ ಎಂದರು.

ಮುಖ್ಯ ಅತಿಥಿಯಾಗಿ ನಟ ಶಿವಕುಮಾರ್‌ ಆರಾಧ್ಯ ಮಾತನಾಡಿ, ಗ್ರಾಮೀಣ ಭಾಗದ ಎಲೆಮರೆಯ ಕಾಯಿಯಂತಿರುವ ಕಲಾವಿದರನ್ನು ಗುರುತಿಸಿ ಬೆಳಕಿಗೆ ತಂದ ಶ್ರೇಯಸ್ಸು ಪತ್ರಿಕಾರಂಗಕ್ಕೆ ಸಲ್ಲುತ್ತದೆ. ಉಲ್ಟಾಪಲ್ಟಾ ಚಿತ್ರದ ಮೂಲಕ ಹೆಸರುವಾಸಿಯಾದ ಪತ್ರಿಕೋದ್ಯಮಿ, ಸಾಹಿತಿ ನ್ಯಾಮತಿಯ ಎನ್‌.ಎಸ್‌.ಶಂಕರ್‌ ಕೊಡುಗೆ ಸ್ಮರಣೀಯ ಎಂದರು.

ಇತ್ತೀಚೆಗೆ ನಿಧನರಾದ ಪತ್ರಿಕೋದ್ಯಮಿ, ಸಾಹಿತಿ, ಚಲನಚಿತ್ರ ನಿರ್ದೇಶಕ, ಪತ್ರಕರ್ತ ಎನ್‌.ಎಸ್‌.ಶಂಕರ್‌ ಅವರಿಗೆ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಿಸಲಾಯಿತು. ತಾಲೂಕಿನ ಪತ್ರಕರ್ತರಿಗೆ ಸದಸ್ಯತ್ವ ಕಾರ್ಡ್‌ ವಿತರಿಸಲಾಯಿತು.

ಸಂಘದ ಜಿಲ್ಲಾ ಖಜಾಂಚಿ ವೀರೇಶ್‌, ರಾಷ್ಟ್ರೀಯ ಸಮಿತಿ ಸದಸ್ಯ ಒಡೆಯರ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬದರೀನಾಥ, ತಾಲೂಕು ಸಂಚಾಲಕ ಎಂ.ಎಸ್‌.ಶಾಸ್ತ್ರಿ ಹೊಳೆಮಠ ಮಾತನಾಡಿದರು.

ಶಾಲೆ ಮುಖ್ಯ ಶಿಕ್ಷಕ ಡಿ.ರಾಮಪ್ಪ, ಜಿಲ್ಲಾ ಕಾರ್ಯದರ್ಶಿ ವೇದಮೂರ್ತಿ, ಪತ್ರಕರ್ತರಾದ ಎಚ್‌.ಎಂ.ಸದಾಶಿವಯ್ಯ, ಬಿ.ಇ.ಷಣ್ಮುಖ, ಸ್ವಾಮಿ ಹೊಳೆಮಠ, ಜಿ.ಹಳದಪ್ಪ, ವಿಶಾಲಾಕ್ಷಿ ಷಣ್ಮುಖ, ಬೆಳಗುತ್ತಿ ಕುಬೇರಪ್ಪ, ಹಿರಿಯ ಪತ್ರಕರ್ತ ಶಿವಾನಂದಪ್ಪ ಹುರಕಡ್ಲಿ, ಹನುಮನಹಳ್ಳಿ ಗಿರೀಶ್‌ ನಾಡಿಗ್‌, ಶಾಲೆಯ ಎಸ್‌.ಡಿ.ಎಂ.ಸಿ. ಅಧ್ಯಕ್ಷ ಮರಿಗೌಡ, ಉಪಾಧ್ಯಕ್ಷ ಕೃಷ್ಣಪ್ಪ, ಸಾವಿತ್ರಿಬಾಯಿ ಫುಲೆ ಸಂಘದ ತಾಲೂಕು ಘಟಕದ ಅಧ್ಯಕ್ಷೆ ಸರ್ವಮಂಗಳ ಕುಬೇರಪ್ಪ, ಶಿಕ್ಷಕಿ ಜಯಶ್ರೀ ಸತೀಶ್‌ ಹಿರೇಮಠ್‌, ಭಾಗ್ಯ, ಪವಿತ್ರ ಮತ್ತಿತರರಿದ್ದರು.

- - -

-ಚಿತ್ರ:

ಕಾರ್ಯಕ್ರಮವನ್ನು ಸಂಘದ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ ಉದ್ಘಾಟಿಸಿದರು.