- ಬಾಳೆಹೊನ್ನೂರು ರೋಟರಿ ಭವನದಲ್ಲಿ ಎನ್.ಆರ್.ಪುರ ತಾ.ಪತ್ರಕರ್ತರ ದಿನಾಚರಣೆ ಉದ್ಘಾಟನೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಪತ್ರಕರ್ತರು ಯಾವುದೇ ಸರ್ಕಾರದ ವರವಾಗಿ ಕೆಲಸ ಮಾಡದೆ ಜನ ಸಾಮಾನ್ಯರ ಸಮಸ್ಯೆಗಳ ಪರವಾಗಿ ಕೆಲಸ ಮಾಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕರೆ ನೀಡಿದರು.

ಭಾನುವಾರ ಬಾಳೆಹೊನ್ನೂರಿನ ರೋಟರಿ ಭವನದಲ್ಲಿ ನಡೆದ ಎನ್.ಆರ್.ಪುರ ತಾಲೂಕು ಪತ್ರಕರ್ತರ ದಿನಾಚರಣೆ ಉದ್ಘಾಟಿಸಿ ಮಾತನಾಡಿ ಮಾದ್ಯಮ ರಂಗಕ್ಕೆ ಒಂದು ವಿಶಿಷ್ಟ ಶಕ್ತಿ ಇದೆ. ಶಾಸಕಾಂಗ,ಕಾರ್ಯಾಂಗ ಮತ್ತು ನ್ಯಾಯಾಂಗ ಗಳು ತಮ್ಮದೇ ಆದ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತವೆ. ಅದೇ ರೀತಿಯಾಗಿ ಪತ್ರಿಕಾ ರಂಗ ಶಾಸಕಾಂಗ, ನ್ಯಾಯಾಂಗ ಹಾಗೂ ಕಾರ್ಯಾಂಗ ದಾರಿ ತಪ್ಪಿದಾಗ ಅದನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂದರು. ಮುಖ್ಯ ಅತಿಥಿಯಾಗಿದ್ದ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ ಪತ್ರಿಕೋದ್ಯಮದ ಇತಿಹಾಸ ಬಹಳ ದೊಡ್ಡದಾಗಿದೆ. ಸ್ವಾತಂತ್ರ ಹೋರಾಟದಲ್ಲಿ, ಚಳುವಳಿಗಳಲ್ಲಿ ಪತ್ರಿಕೋದ್ಯಮದ ಪಾತ್ರ ಬಹಳ ಮುಖ್ಯವಾಗಿತ್ತು. ಪತ್ರಕರ್ತರ ಲೇಖನಿ ಖಡ್ಗಕ್ಕಿಂತ ಹರಿತ. ಸರ್ಕಾರದ ಸವಲತ್ತು, ಜನಪರ ಕಾರ್ಯಕ್ರಮ ಜನರಿಗೆ ತಲುಪಿಸುವಲ್ಲಿ ಪತ್ರಿಕೆಗಳ ಪಾತ್ರ ಹಿರಿದಾಗಿದೆ. ಬಾಳೆಹೊನ್ನೂರು ಪತ್ರಿಕಾ ಭವನಕ್ಕೆ ಬಿ.ಕಣಬೂರು ಗ್ರಾ.ಪಂ.ನಿಂದ ಈಗಾಗಲೇ ನಿವೇಶನ ನೀಡಲಾಗಿದೆ. ಶೀಘ್ರ ಇ-ಸ್ವತ್ತು ಮಾಡಬೇಕಾಗಿದೆ. ನಂತರ ಪತ್ರಿಕಾ ಭವನ ಕಟ್ಟಡ ನಿರ್ಮಾಣಕ್ಕೆ ನನ್ನ ಕೈಯಲ್ಲಾದ ಅನುದಾನ ಕೊಡುತ್ತೇನೆ ಎಂದು ಭರವಸೆ ನೀಡಿದರು.ಅತಿಥಿಗಳಾಗಿದ್ದ ಶಿವಮೊಗ್ಗ ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಕೆಕೆಬಿ ಬಸ್ ಮಾಲೀಕ ಕೆ.ಕೆ.ಬಾಲಕೃಷ್ಣಭಟ್ , ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅನಿಲ್‌ ಆನಂದ್ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಚಿನ್‌ ಕುಮಾರ್‌ ವಹಿಸಿದ್ದರು. ಕಾರ್ಯದರ್ಶಿ ನಾಗರಾಜಭಟ್, ಗೌರವ ಅಧ್ಯಕ್ಷ ಕೆ.ವಿ.ನಾಗರಾಜ್ ಇದ್ದರು.

ಇದೇ ಸಂದರ್ಭದಲ್ಲಿ ಕಾಡಾ ನಿಗಮದ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ತಮ್ಮ ತಂದೆ ಕೆ.ಸಿ.ಪುಟ್ಟಸ್ವಾಮಿ ಸ್ಮರಣಾ ರ್ಥವಾಗಿ ತಾಲೂಕಿನ ಎಲ್ಲಾ ಪತ್ರಕರ್ತರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಿದರು. ಎನ್.ಆರ್.ಪುರ ಸಿಂಹನ ಗದ್ದೆ ಶ್ರೀ ಜ್ವಾಲಾಮಾಲಿನಿ ಅತಿಶಯ ಕ್ಷೇತ್ರದಿಂದ ನೀಡುವ ತಾಲೂಕು ಕ್ರಿಯಾಶೀಲ ಪತ್ರಕರ್ತ ಪ್ರಶಸ್ತಿಯನ್ನು ಕನ್ನಡಪ್ರಭ ಪತ್ರಿಕೆಯ ವರದಿಗಾರ ಯಡಗೆರೆ ಮಂಜುನಾಥ್ ಅವರಿಗೆ ಹಾಗೂ ಎನ್.ಆರ್.ಪುರದ ದಿ. ಬಿ.ಎಸ್.ಸುಧಾಕರರಾವ್ ಸ್ಮರಣಾರ್ಥ ನೀಡುವ ಪ್ರಶಸ್ತಿಯನ್ನು ಯುನೈಟೆಡ್ ನ್ಯೂಸ್‌ನ ಸಿಇಒ ಎನ್.ಎ.ಶೇಖಬ್ಬ ಅವರಿಗೆ ನೀಡಿ ಗೌರವಿಸಲಾಯಿತು. ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಭಿನವ ಗಿರಿರಾಜ್ ಅವರ ಸಂಪಾದಕೀಯದ ಪುರದರ್ಶನ ಪತ್ರಿಕೆ ಬಿಡುಗಡೆ ಮಾಡಲಾಯಿತು. ಪತ್ರಕರ್ತರಿಗೆ ಶೇ.50 ರ ರಿಯಾಯಿತಿಯ ಕೆಕೆಬಿ ಬಸ್ಸಿನ ಪಾಸುಗಳನ್ನು ವಿತರಿಸಲಾಯಿತು. ಶಿಕ್ಷಕ ಎಚ್.ಎನ್.ವಿಶ್ವನಾಥ್ ಛತ್ರಿಯಲ್ಲಿ ವಿಶಿಷ್ಠವಾಗಿ ಬರೆದ ಪತ್ರಿಕಾ ದಿನಾಚರಣೆ ಎಂಬ ಬರವಣಿಗೆಯ ಛತ್ರಿಗಳನ್ನು ತೆರೆಯುವ ಮೂಲಕ ಎಲ್ಲಾ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ಗಮನ ಸೆಳೆಯಿತು. ಕಾನೂರು ಮೇಘನ ಪ್ರಾರ್ಥಿಸಿದರು. ಅಭಿನವ ಗಿರಿರಾಜ್ ಸ್ವಾಗತಿಸಿದರು. ಸುರೇಂದ್ರ ಕಾರ್ಯಕ್ರಮ ನಿರೂಪಿಸಿದರು.ನಾಗರಾಜ ಭಟ್ ವಂದಿಸಿದರು.