ಕನ್ನಡಪ್ರಭ ವಾರ್ತೆ ವಿಜಯಪುರ: ಪತ್ರಿಕೋದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಆತ್ಮವಿಶ್ವಾಸ, ಸೃಜನಶೀಲತೆ ಹಾಗೂ ತಂತ್ರಜ್ಞಾನದ ಅರಿವು ಅತ್ಯಗತ್ಯ ಎಂದು ನಿವೃತ್ತ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಕೃಷ್ಣ ಕುಲಕರ್ಣಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ:

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಆತ್ಮವಿಶ್ವಾಸ, ಸೃಜನಶೀಲತೆ ಹಾಗೂ ತಂತ್ರಜ್ಞಾನದ ಅರಿವು ಅತ್ಯಗತ್ಯ ಎಂದು ನಿವೃತ್ತ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಕೃಷ್ಣ ಕುಲಕರ್ಣಿ ಹೇಳಿದರು.

ನಗರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಫ್ರೆಶರ್ಸ್ ಡೇ ಹಾಗೂ ಮಹಿಳಾ ಮೀಡಿಯಾ ಕ್ಲಬ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪತ್ರಕರ್ತರಲ್ಲಿ ಆತ್ಮವಿಶ್ವಾಸ ಇರಬೇಕು. ಕಾರ್ಯನಿರ್ವಹಿಸುವ ಸಂಸ್ಥೆಗಳಲ್ಲಿ ಬದ್ಧತೆಯಿಂದ ಕೆಲಸ ಮಾಡಬೇಕು. ಸಾಮಾನ್ಯ ಜನರಿಗೆ ಸುಲಭವಾಗಿ ಅರ್ಥವಾಗುವ ಭಾಷೆಯಲ್ಲಿ ಸುದ್ದಿ ನೀಡಬೇಕು. ಪ್ರತಿಭೆಗೆ ಸದಾ ಮನ್ನಣೆ ದೊರೆಯುತ್ತದೆ. ಆದ್ದರಿಂದ ವಿದ್ಯಾರ್ಥಿನಿಯರು ವೃತ್ತಿಯೊಂದಿಗೆ ತಮ್ಮ ಪ್ರವೃತ್ತಿಗಳನ್ನೂ ಬೆಳೆಸಿಕೊಳ್ಳಬೇಕು. ಅಷ್ಟೇ ಅಲ್ಲದೇ ವಿದ್ಯಾರ್ಥಿನಿಯರಿಗೆ ವೃತ್ತಿಪರ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಕುರಿತು ಮಾರ್ಗದರ್ಶನ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಮಾತನಾಡಿ, ವಿದ್ಯಾರ್ಥಿನಿಯರು ತಂಡವಾಗಿ ಕಾರ್ಯನಿರ್ವಹಿಸುವ ಗುಣ ಬೆಳೆಸಿಕೊಳ್ಳಬೇಕು. ಇತರರ ಅನುಭವಗಳಿಂದ ಕಲಿತು, ಹೊಸ ವಿಷಯಗಳನ್ನು ನಿರಂತರವಾಗಿ ತಿಳಿದುಕೊಳ್ಳಬೇಕು. ಪರಿಪೂರ್ಣ ಪತ್ರಕರ್ತರಾಗಲು ಯೋಜಿತ ಸಿದ್ಧತೆ ಅಗತ್ಯ. ಜೀವನದಲ್ಲಿ ಅಸಾಧ್ಯವಾದುದು ಯಾವುದೂ ಇಲ್ಲ ಎಂಬ ಮನೋಭಾವದೊಂದಿಗೆ ಪ್ರತಿ ಹಂತದಲ್ಲಿಯೂ ಸವಾಲುಗಳನ್ನು ಎದುರಿಸಬೇಕು ಎಂದು ಹೇಳಿದರು.

ಡಾ.ತಹಮೀನಾ ನಿಗಾರ್ ಸುಲ್ತಾನಾ, ಡಾ.ಸಂದೀಪ ನಾಯಕ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಭಾಗದ ಬೋಧಕ ಸಿಬ್ಬಂದಿ, ಸಂಶೋಧನ ವಿದ್ಯಾರ್ಥಿನಿಯರು, ವಿಭಾಗದ ಹಳೆಯ ವಿದ್ಯಾರ್ಥಿನಿಯರು ಹಾಗೂ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.