ಕನ್ನಡಪ್ರಭ ವಾರ್ತೆ ಹಾಸನ

ನಗರದ ದ್ಯಾವಮ್ಮ ಬಡಾವಣೆ, ಚನ್ನಪಟ್ಟಣ ಹಾಗೂ ಬೊಮ್ಮನಾಯಕನಹಳ್ಳಿ ಬೈಪಾಸ್ ರಸ್ತೆ ಬಳಿ ಇರುವ ಶ್ರೀ ದ್ಯಾವಮ್ಮದೇವಿ ಜಾತ್ರಾ ಪರಿವಾರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ನಡೆದ ಬಂಡಿಹಬ್ಬವು ಶ್ರದ್ಧಾ- ಭಕ್ತಿಭಾವ ಹಾಗೂ ಬಾಡೂಟದ ಸವಿರುಚಿಯೊಂದಿಗೆ ಸಂಭ್ರಮದಿಂದ ಜರುಗಿತು.

ಜಾತ್ರಾ ಮಹೋತ್ಸವದ ಮೊದಲ ದಿನವಾದ ಆಗಸ್ಟ್ 7ರಂದು ರಾತ್ರಿ ಶ್ರೀ ದ್ಯಾವಮ್ಮದೇವಿಯ ಅಡ್ಡಪಲ್ಲಕ್ಕಿ ಉತ್ಸವವು ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು. ಅಲಂಕೃತ ಪಲ್ಲಕ್ಕಿಯಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಕೊಂಡೊಯ್ಯಲಾಯಿತು. ಈ ವೇಳೆ ಭಕ್ತರು ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿ, ತಮ್ಮ ಹರಕೆಗಳನ್ನು ತೀರಿಸಿದರು. ನಂತರ ದೇವಿರಮ್ಮನ ಗುಡಿಯ ಆವರಣದಲ್ಲಿ ಕೆಂಡೋತ್ಸವ ನಡೆಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು. ಜಾತ್ರೆಯ ಅಂಗವಾಗಿ ಕುಟುಂಬಸ್ಥರು ಸಸ್ಯಾಹಾರಿ ವಿವಿಧ ಬಗೆಯ ತಿನಿಸುಗಳನ್ನು ಸಿದ್ಧಪಡಿಸಿ ದೇವಿಗೆ ನೈವೇಧ್ಯೆ ಅರ್ಪಿಸಿದರು. ಎತ್ತಿನ ಬಂಡಿಗಳು ಕೆಂಡೋತ್ಸವದಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳು ಸಂಪ್ರದಾಯಬದ್ಧವಾಗಿ ನೆರವೇರಿದವು.

ಮೂರು ಊರುಗಳಲ್ಲಿ ಬಾಡೂಟದ ಸಂಭ್ರಮ:

ಬಂಡಿಹಬ್ಬದ ಎರಡನೇ ದಿನವಾದ ಆಗಸ್ಟ್ ೮ರಂದು ಶನಿವಾರ ಚನ್ನಪಟ್ಟಣ, ದ್ಯಾವಮ್ಮ ಬಡಾವಣೆ ಹಾಗೂ ಬೊಮ್ಮನಾಯಕನಹಳ್ಳಿ ಗ್ರಾಮಗಳಲ್ಲಿ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು. ಜಾತ್ರೆಯ ಅಂಗವಾಗಿ ನಡೆಯುವ ಬಾಡೂಟದಲ್ಲಿ ಪಾಲ್ಗೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಬಂಧು-ಬಳಗ, ಸ್ನೇಹಿತರು ಹಾಗೂ ವಿವಿಧೆಡೆಯಿಂದ ಆಗಮಿಸಿದವರು ಸೇರಿದ್ದರು. ಮಧ್ಯಾಹ್ನದ ವೇಳೆಗೆ ಜನದಟ್ಟಣೆ ಹೆಚ್ಚಾಗಿದ್ದು, ಮೂರು ಗ್ರಾಮಗಳಲ್ಲಿಯೂ ಹಬ್ಬದ ವಾತಾವರಣ ಮನೆಮಾಡಿತ್ತು. ಬಂಧು- ಬಳಗದವರು ಪರಸ್ಪರ ಭೇಟಿಯಾಗಿ ಶುಭಾಶಯ ವಿನಿಮಯ ಮಾಡಿಕೊಂಡು ಬಾಡೂಟ ಸವಿದು ಜೊತೆಗೆ ಮದ್ಯಪಾನದ ಸೇವನೆ ಸಾಮಾನ್ಯವಾಗಿತ್ತು. ಸಾವಿರಾರು ಮಂದಿ ಆಗಮಿಸಿದ್ದರಿಂದ ಶನಿವಾರ ಮಧ್ಯಾಹ್ನದಿಂದ ಸಂಜೆವರೆಗೂ ಬೊಮ್ಮನಾಯಕನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಉಂಟಾಗಿ ಕೆಲಕಾಲ ಸಂಚಾರಕ್ಕೆ ತೊಂದರೆ ಎದುರಾಯಿತು. ಜಾತ್ರೆಗೆ ಆಗಮಿಸಿದ ವಾಹನಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ವಾಹನಗಳ ಸಾಲು ಕಂಡುಬಂತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಂಚಾರ ನಿಯಂತ್ರಣಕ್ಕೆ ಮುಂದಾಗಿ, ವಾಹನಗಳ ಸುಗಮ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಂಡರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನೂ ಕೈಗೊಳ್ಳಲಾಗಿತ್ತು. ೧೫ ವರ್ಷದ ಬಳಿಕ ನಡೆದ ಬಂಡಿಹಬ್ಬವು ಈ ಭಾಗದ ಜನರ ಧಾರ್ಮಿಕ ನಂಬಿಕೆ, ಸಂಪ್ರದಾಯ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತಿದ್ದು, ಈ ಬಾರಿಯೂ ಭಕ್ತರು ಮತ್ತು ಸಾರ್ವಜನಿಕರ ಉತ್ತಮ ಸ್ಪಂದನೆಯೊಂದಿಗೆ ಜಾತ್ರಾ ಮಹೋತ್ಸವ ನಡೆಯಿತು.