ಸಾರಾಂಶ
ಫ್ರೊ.ಜಯಪ್ರಕಾಶಗೌಡ 75 ಅಭಿನಂದನೆ ‘ರಂಗಾಭಿನಂದನ’ ಅಭಿನಂದನಾ ಗ್ರಂಥ ಹಾಗೂ ‘ನಾಥಪಂಥ’ ಎಂಟು ಸಂಪುಟಗಳ ಮಾಲಿಕೆ ಪ್ರಥಮ ಸಂಪುಟ ಲೋಕಾರ್ಪಣೆ ಸಮಾರಂಭ
ಕನ್ನಡಪ್ರಭ ವಾರ್ತೆ ಮಂಡ್ಯ
ಹೊಸ ಚೇತನ ಪಡೆಯಲು ಯಾರು ದಾರಿ ತೋರಿಸುವರೋ ಅವರನ್ನು ಮರೆಯಬಾರದು. ಮನಸ್ಸನ್ನು ಒಡೆಯುವಂತಹ ವಿದ್ಯೆಗಳನ್ನು ಹೇಳಿಕೊಡುವಂತಹ ಬಹಳ ಇವೆ. ಆದರೆ, ಮನಸುಗಳನ್ನು ಕೂಡಿಸುವಂತಹ ಕಲೆಯನ್ನು ಹೇಳಿಕೊಡುವ ಅವಶ್ಯಕತೆ ಇದೆ, ಕೂಡಿಸುವುದರಲ್ಲಿ ಶಕ್ತಿ ಇರುತ್ತದೆ ಅದೇ ರೀತಿ ಬೇರ್ಪಡಿಸುವಿಕೆಯಲ್ಲಿ ಶಕ್ತಿ ಕಡಿಮೆ ಇರುತ್ತದೆ ಎಂದು ಶ್ರೀ ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ವಿಶ್ಲೇಷಿಸಿದರು. ನಗರದ ಅಂಬೇಡ್ಕರ್ ಭವನದಲ್ಲಿ ಪ್ರೊ.ಜಯಪ್ರಕಾಶಗೌಡ ಅಭಿನಂದನಾ ಸಮಿತಿ, ಕರ್ನಾಟಕ ಸಂಘದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಫ್ರೊ.ಜಯಪ್ರಕಾಶಗೌಡ 75 ಅಭಿನಂದನೆ ‘ರಂಗಾಭಿನಂದನ’ ಅಭಿನಂದನಾ ಗ್ರಂಥ ಹಾಗೂ ‘ನಾಥಪಂಥ’ ಎಂಟು ಸಂಪುಟಗಳ ಮಾಲಿಕೆ ಪ್ರಥಮ ಸಂಪುಟ ಲೋಕಾರ್ಪಣೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.ಜಯಪ್ರಕಾಶಗೌಡರು ಕೂಡಿಸುವ ಕಲೆಯನ್ನು ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ. ಕೇವಲ ಮನಸನ್ನು ಕೂಡಿಸುವುದಷ್ಟೇ ಅಲ್ಲ. ತನ್ನೊಳಗಡೆ ಒಡೆದಿರುವ ವ್ಯಕ್ತಿತ್ವವನ್ನು ಕೂಡಿಸುವ ಶಕ್ತಿಯನ್ನು ಬಹಳ ಮಾಡಿದ್ದಾರೆ ಎಂದು ಶ್ಲಾಘಿಸಿದರು.ಜೆಪಿ ಅವರಿಗೆ ಎಡ ಮೆದುಳು ಹಾಗೂ ಬಲ ಮೆದುಳುಂಟು, ಯಾವ ಕಾಲದಲ್ಲಿ ಹೇಗೆ ಬಳಸಿಕೊಳ್ಳಬೇಕೆಂಬುದನ್ನು ಇವರು ಕಲಿತುಕೊಂಡಿದ್ದಾರೆ, ಇವತ್ತಿನ ಸಮಾಜಕ್ಕೆ ಹಾಗೂ ಬದಲಾದ ಕಾಲಘಟ್ಟದಲ್ಲಿ ನಾವು ಇರಬೇಕು. ಇಂತಹವರನ್ನ ಉಳಿಸಿಕೊಳ್ಳಬೇಕು. ಇವರ ಜೊತೆ ನಾವಿದ್ದೇವೆ ಎಂಬುದಷ್ಟೇ ಅಲ್ಲ ಇಡೀ ಚುಂಚನಗಿರಿ ಮಠ ಜೊತೆ ಇದೆ ಎಂದು ಪ್ರತಿಪಾದಿಸಿದರು.ಸಾಂಸ್ಕೃತಿಕ ರಾಯಭಾರಿಯಾಗಿರುವ ಜೆಪಿ ಶ್ರೀಮಠವನ್ನು ಅಪ್ಪಿಕೊಂಡ ವ್ಯಕ್ತಿಯಾಗಿದ್ದು, ಇವರು ಶಾಸ್ತ್ರದ ಜೊತೆಗೆ ಸಾಮಾಜಿಕ, ಆಧುನಿಕ, ವೈಜ್ಞಾನಿಕ, ತಂತ್ರಜ್ಞಾನ ಓದಿಕೊಂಡರೆ ಶಾಸ್ತ್ರಕ್ಕೆ ಬೆಲೆ ಬರುತ್ತದೆ ಎಂಬುದನ್ನು ನಂಬಿದವರು. ಜಯಪ್ರಕಾಶಗೌಡರು ಒಬ್ಬ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ. ರಾಜ್ಯದೆಲ್ಲೆಡೆ ಪಸರಿಸುತ್ತಿದ್ದಾರೆ. ಸಂಸ್ಕೃತಿ ಇಲ್ಲದ ವ್ಯಕ್ತಿ ಪ್ರಯೋಜನಕ್ಕೆ ಬರುವುದಿಲ್ಲ. ಒಬ್ಬ ವ್ಯಕ್ತಿ ಸುಸಂಸ್ಕೃತರಾಗಬೇಕು. ದೇಹದ ನಡೆ ನುಡಿ, ಮಾನಸಿಕ ಸ್ಥಿರತೆ, ಭೌತಿಕ, ಅಧ್ಯಾತ್ಮಿಕತೆಯನ್ನು ನೋಡಿ ಸುಸಂಸ್ಕೃತ ವ್ಯಕ್ತಿ ಎಂಬುದನ್ನು ತಿಳಿಯಬಹುದು, ಆ ಮಾದರಿಯಲ್ಲಿ ಜೆಪಿ ಸಾಗುತ್ತಿದ್ದಾರೆ ಎಂದು ತಿಳಿಸಿದರು.ಕರ್ನಾಟಕ ಜಲಸಾರಿಗೆ ಮಂಡಳಿ ಸಿಇಒ ಜಯರಾಂ ರಾಯಪುರ ಮಾತನಾಡಿ, ಸಮಯ ಪ್ರಜ್ಞೆ ಇರಬೇಕು. ಇದು ಎಲ್ಲರಲ್ಲಿಯೂ ಇರುವುದಿಲ್ಲ, ಸಾಮಾಜಿಕ, ಸಾಹಿತ್ಯಕ ಹಾಗೂ ಐತಿಹಾಸಿಕ ಪ್ರಜ್ಞೆ ಮೂಡಿಸಿಕೊಂಡವರು ದಾರ್ಶನಿಕ ವ್ಯಕ್ತಿಯಾಗಿ ನಾಯಕರಾಗಿ ಹೊರಹೊಮ್ಮುತ್ತಾರೆ, ಗುಣಾತ್ಮಕ ಮತ್ತು ಧನಾತ್ಮಕವನ್ನು ಅರ್ಥ ಮಾಡಿಕೊಂಡು ಮುಂದಿನ ದಿನಗಳನ್ನು ನೆನೆದುಕೊಳ್ಳುವುದು ಉತ್ತಮವಾದ ಕೆಲಸ, ಇದೆಲ್ಲವನ್ನು ಉಳ್ಳವರು ಜಯಪ್ರಕಾಶಗೌಡರು, ಕರ್ನಾಟಕ ಸಂಘವನ್ನು ಕಟ್ಟಿ ರಾಜ್ಯದೆಲ್ಲೆಡೆ ಪಸರಿಸುತ್ತಿರುವ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದು ಶ್ಲಾಘಿಸಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಡಿಸಿ ಕುಮಾರ, ಎಡಿಸಿ ಎಚ್.ಎಲ್.ನಾಗರಾಜು, ಜಿಲ್ಲಾ ಎಸ್ಪಿ ಎನ್.ಯತೀಶ್, ಅಭಿನಂದನಾ ಸಮಿತಿ ಅಧ್ಯಕ್ಷ ಎಂ.ಶ್ರೀನಿವಾಸ್, ಜೆಡಿಎಸ್ ಮುಖಂಡ ಕೆ.ಟಿ.ಶ್ರೀಕಂಠೇಗೌಡ, ಕಾಂಗ್ರೆಸ್ ಮುಖಂಡರಾದ ಎಂ.ಎಸ್.ಆತ್ಮಾನಂದ, ಬಿ.ರಾಮಕೃಷ್ಣ, ಕರ್ನಾಟಕ ಸಂಘದ ಶಿವರಾಜು ಕೀಲಾರ, ಸಾಹಿತಿ ರಾಗೌ, ಲೇಖಕಿ ಪದ್ಮಾ ಶೇಖರ್ ಭಾಗವಹಿಸಿದ್ದರು.15ಕೆಎಂಎನ್‌ಡಿ-5ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಫ್ರೊ.ಜಯಪ್ರಕಾಶಗೌಡ ಅಭಿನಂದನಾ ಕಾರ್ಯಕ್ರಮದಲ್ಲಿ ‘ರಂಗಾಭಿನಂದನ’ ಅಭಿನಂದನಾ ಗ್ರಂಥ ಹಾಗೂ ‘ನಾಥಪಂಥ’ 8 ಸಂಪುಟಗಳ ಮಾಲಿಕೆ ಪ್ರಥಮ ಸಂಪುಟ ಲೋಕಾರ್ಪಣೆ ಮಾಡಲಾಯಿತು.